ADVERTISEMENT

ಬೋಧಕರ ನೇಮಕಕ್ಕೆ ಮತ್ತೆ ಚಾಲನೆ

ಕೊನೆಗೂ ಬಗೆಹರಿಯಿತು ಹೈಕ ಭಾಗದ ಮೀಸಲಾತಿ ಲೆಕ್ಕಾಚಾರ ಸಮಸ್ಯೆ

ಸೂರ್ಯನಾರಾಯಣ ವಿ
Published 4 ಜುಲೈ 2015, 19:47 IST
Last Updated 4 ಜುಲೈ 2015, 19:47 IST

ಬೆಳಗಾವಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ 2,160 ಸಹಾಯಕ ಪ್ರಾಧ್ಯಾಪಕರ ನೇಮಕ ಪ್ರಕ್ರಿಯೆಗೆ ಒಂದೆರಡು ದಿನಗಳಲ್ಲಿ ಮತ್ತೆ ಚಾಲನೆ ಸಿಗಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಸಂವಿಧಾನದ ಕಲಂ 371 (ಜೆ) ಅಡಿಯಲ್ಲಿ ನೀಡಬೇಕಾದ ಮೀಸಲಾತಿ ಲೆಕ್ಕಾಚಾರದಲ್ಲಿ ಆದ ಸಮಸ್ಯೆಯಿಂದ ನೇಮಕ ಪ್ರಕ್ರಿಯೆ ಮಾರ್ಚ್ 23ರಿಂದ ಸ್ಥಗಿತಗೊಂಡಿತ್ತು. ಇದರಿಂದಾಗಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ 18 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಆತಂಕಕ್ಕೆ ಒಳಗಾಗಿದ್ದರು.

ಕೆಇಎಗೆ ಜವಾಬ್ದಾರಿ: ದೀರ್ಘ ಸಮಯದ ನಂತರ (ಈ ಹಿಂದೆ 2009ರಲ್ಲಿ ನೇಮಕ ಮಾಡಲಾಗಿತ್ತು) ಈಗ ಸಹಾಯಕ ಪ್ರಾಧ್ಯಾಪಕರನ್ನು ನೇಮಿಸಿಕೊಳ್ಳುವುದಕ್ಕೆ ಮುಂದಾಗಿದ್ದ ಉನ್ನತ ಶಿಕ್ಷಣ ಇಲಾಖೆ ಈ ವರ್ಷದ ಜನವರಿಯಲ್ಲಿ 1,298 (1146 ಸಾಮಾನ್ಯ, 152 ಬ್ಯಾಕ್‌ಲಾಗ್‌ ಹುದ್ದೆಗಳು) ಮಂದಿಯನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕ ಮಾಡುವ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ವಹಿಸಿತ್ತು.

ಇಷ್ಟು ಹುದ್ದೆಗಳಿಗೆ ಕೆಇಎ ಅರ್ಜಿ ಆಹ್ವಾನಿಸಿದ ಬಳಿಕ, ಮತ್ತೆ 862 ಸಹಾಯಕ ಪ್ರಾಧ್ಯಾಪಕರನ್ನು ನೇಮಕ ಮಾಡುವ ತೀರ್ಮಾನವನ್ನು ಇಲಾಖೆ ಕೈಗೊಂಡಿತ್ತು. ಹಾಗಾಗಿ ಅರ್ಜಿ ಸಲ್ಲಿಕೆ ಅವಧಿಯನ್ನು ಪರೀಕ್ಷಾ ಪ್ರಾಧಿಕಾರವು ಮಾರ್ಚ್‌ 23ರವೆಗೆ ವಿಸ್ತರಿಸಿತ್ತು. ಆ ಗಡುವು ಪೂರ್ಣಗೊಂಡ ಬಳಿಕ ನೇಮಕ ಪ್ರಕ್ರಿಯೆ ಹಠಾತ್‌ ಆಗಿ ಸ್ಥಗಿತಗೊಂಡಿತ್ತು.

ಮೀಸಲಾತಿ ಲೆಕ್ಕಾಚಾರದಲ್ಲಿ ಎಡವಟ್ಟು: ಹೈದರಾಬಾದ್‌ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಮೀಸಲಾತಿ ಕಲ್ಪಿಸುವ ಸಂವಿಧಾನದ ಕಲಂ 371 (ಜೆ) ಅಡಿಯಲ್ಲಿ ಮಾಡಲಾದ ಮೀಸಲಾತಿ ಹುದ್ದೆಗಳನ್ನು ಲೆಕ್ಕ ಹಾಕುವಾಗ ಆದ ತಪ್ಪಿನಿಂದ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಬೇಕಾಯಿತು ಎಂದು ಉನ್ನತ ಶಿಕ್ಷಣ ಇಲಾಖೆ ಹೇಳಿದೆ.

‘ಮೀಸಲಾತಿ ಲೆಕ್ಕಾಚಾರ ಮಾಡುವಾಗ ಬೆಂಗಳೂರು ನಗರ ವ್ಯಾಪ್ತಿಯಲ್ಲಿದ್ದ ಪ್ರಥಮ ದರ್ಜೆ ಕಾಲೇಜುಗಳನ್ನು ಪರಿಗಣಿಸಿರಲಿಲ್ಲ. ಕಾಲೇಜು ಶಿಕ್ಷಣ ಇಲಾಖೆಯ ಪ್ರಧಾನ ಕಚೇರಿ ವ್ಯಾಪ್ತಿಯಲ್ಲಿ ಈ ಕಾಲೇಜುಗಳು ಇದ್ದುದರಿಂದ ಕೈ ಬಿಡಲಾಗಿತ್ತು.

ಆದರೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಈ ಕಾಲೇಜುಗಳನ್ನೂ ಪರಿಗಣಿಸಿ ಮೀಸಲಾತಿ ಹುದ್ದೆಗಳನ್ನು ಲೆಕ್ಕ ಹಾಕುವಂತೆ ಸೂಚಿಸಿತ್ತು’ ಎಂದು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಭರತ್‌ ಲಾಲ್‌ ಮೀನಾ ‘ಪ್ರಜಾವಾಣಿ’ಗೆ ತಿಳಿಸಿದರು. ‘ಈಗ ಮರು ಲೆಕ್ಕಾಚಾರ ಹಾಕಲಾಗಿದೆ. ಸಮಸ್ಯೆಗಳೆಲ್ಲ ಬಗೆಹರಿದಿವೆ. ನೇಮಕಾತಿ ಪ್ರಕ್ರಿಯೆ ಮತ್ತೆ ಚಾಲನೆ ನೀಡಲು ಕೆಇಎಗೆ ಸೂಚನೆ ನೀಡಲಾಗಿದೆ’ ಎಂದು ಅವರು ಹೇಳಿದರು.

ನ್ಯಾಯಾಲಯದಲ್ಲೂ ಇತ್ತು ವ್ಯಾಜ್ಯ: ಇದರ ಜೊತೆಗೆ, ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನಿಗದಿ ಪಡಿಸಿರುವ ಶೈಕ್ಷಣಿಕ ಅರ್ಹತೆಯನ್ನು ಪ್ರಶ್ನಿಸಿ ಎಂ.ಫಿಲ್‌  ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಅವರ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
*
ಸಹಾಯಕ ಪ್ರಾಧ್ಯಾಪಕರ ನೇಮಕ ಸಂಬಂಧದ ಎಲ್ಲ ಸಮಸ್ಯೆಗಳು ಬಗೆಹರಿದಿವೆ. ಪ್ರಕ್ರಿಯೆ ಆರಂಭಿಸುವಂತೆ ಉನ್ನತ ಶಿಕ್ಷಣ ಇಲಾಖೆಯಿಂದ ಸೂಚನೆ ಬಂದಿದೆ. ಎರಡು ದಿನಗಳಲ್ಲಿ ನೇಮಕಾತಿಗೆ ಚಾಲನೆ ನೀಡಲಿದ್ದೇವೆ
-ಎಸ್‌.ಎನ್‌. ಗಂಗಾಧರಯ್ಯ,
ಕೆಇಎ ಆಡಳಿತಾಧಿಕಾರಿ
*
ಅಂಕಿಅಂಶ
2,160
ಸಹಾಯಕ ಪ್ರಾಧ್ಯಾಪಕರ ಹುದ್ದೆ ಭರ್ತಿಗೆ ಮಂಜೂರಿ ಸಿಕ್ಕಿದೆ
18 ಸಾವಿರ ಅರ್ಜಿಗಳು ಬಂದಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.