ADVERTISEMENT

ಭಾರತವಾಣಿ ನಿಘಂಟು: 16 ಸಾವಿರ ಡೌನ್‌ಲೋಡ್‌

20 ಲಕ್ಷ ಪದಗಳ ಕಸಾಪ ಕನ್ನಡ–ಕನ್ನಡ ನಿಘಂಟು ಶೀಘ್ರ ಸೇರ್ಪಡೆ

ನೇಸರ ಕಾಡನಕುಪ್ಪೆ
Published 4 ಜನವರಿ 2017, 19:30 IST
Last Updated 4 ಜನವರಿ 2017, 19:30 IST
ಭಾರತವಾಣಿ ನಿಘಂಟು: 16 ಸಾವಿರ ಡೌನ್‌ಲೋಡ್‌
ಭಾರತವಾಣಿ ನಿಘಂಟು: 16 ಸಾವಿರ ಡೌನ್‌ಲೋಡ್‌   

ಮೈಸೂರು: ಕೇಂದ್ರ ಸರ್ಕಾರದ ‘ಭಾರತವಾಣಿ ಯೋಜನೆ’ಯು ರೂಪಿಸಿರುವ ಬಹುಭಾಷಾ ನಿಘಂಟಿನ ಅಪ್ಲಿಕೇಷನ್‌ ಡೌನ್‌ಲೋಡ್‌ 16 ಸಾವಿರ ದಾಟಿದೆ.
ಒಂದೇ ವೇದಿಕೆಯಲ್ಲಿ ಕನ್ನಡವೂ ಸೇರಿದಂತೆ 43 ವಿವಿಧ ನಿಘಂಟುಗಳಿದ್ದು, ಬಳಕೆದಾರಸ್ನೇಹಿ ಆಗಿರುವುದು ಪ್ರಸಿದ್ಧಿಗೆ ಕಾರಣವಾಗಿದೆ. ಅಲ್ಲದೆ, ಭಾರತವಾಣಿಯ ವೆಬ್‌ಸೈಟ್‌ನಲ್ಲಿ (www.english.bharatavani.in) ಈಗ 220 ವಿವಿಧ ನಿಘಂಟುಗಳು ಲಭ್ಯವಿವೆ.

2016ರ ಮೇ 25ರಂದು ಬಿಡುಗಡೆಯಾಗಿರುವ ಭಾರತವಾಣಿ ಯೋಜನೆಯು ಮೊಬೈಲ್‌ ಅಪ್ಲಿಕೇಷನ್‌ ಹಾಗೂ ಕಂಪ್ಯೂಟರ್‌ ಆಧಾರಿತ ವೆಬ್‌ಸೈಟ್‌ ಈಗಾಗಲೇ ಸಾಕಷ್ಟು ಜನಮನ್ನಣೆ ಗಳಿಸಿದೆ. ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ (ಸಿಐಐಎಲ್‌) ಕಾರ್ಯನಿರ್ವಹಿಸುತ್ತಿರುವ ಈ ಯೋಜನೆಯು ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಪರಿಷತ್ತಿನ ಸಹಯೋಗದಲ್ಲಿ ಮತ್ತಷ್ಟು ನಿಘಂಟು ಸೇವೆ ನೀಡಲು ಮುಂದಾಗಿದೆ.

3 ಲಕ್ಷ ಪದಗಳು:  ಭಾರತದ ವಿವಿಧ ಭಾಷೆಗಳ ನಿಘಂಟುಗಳು ಭಾರತವಾಣಿ ಅಪ್ಲಿಕೇಷನ್‌ನಲ್ಲಿ ಒಂದೇ ಕಡೆ ಸಿಗುತ್ತಿವೆ. ಒಟ್ಟು 3 ಲಕ್ಷ ಪದಗಳಿಗೆ ಈಗಾಗಲೇ ಅರ್ಥ ಹಾಗೂ ವ್ಯಾಖ್ಯಾನ ಸಿಗುತ್ತಿದೆ. ಪ್ರತಿದಿನ ಈ ಅಪ್ಲಿಕೇಷನ್ ಪರಿಷ್ಕೃತವಾಗುತ್ತಿದ್ದು (ಅಪ್‌ಡೇಟ್‌) ಪದಗಳ ಸೇರ್ಪಡೆ ಹೆಚ್ಚುತ್ತಲೇ ಇರುವುದು, ಬಳಕೆದಾರರ ಮೆಚ್ಚುಗೆಗೆ ಕಾರಣವಾಗಿದೆ.
‘ಗೂಗಲ್‌ ಪ್ಲೇ ಸ್ಟೋರ್‌’ನಲ್ಲಿ ಈಗ 16 ಸಾವಿರ ಡೌನ್‌ಲೋಡ್‌ ಆಗಿದೆ. ಡೌನ್‌ಲೋಡ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ‘ಫೇಸ್‌ಬುಕ್‌’ ಪುಟ ಹಾಗೂ ‘ಟ್ವಿಟರ್‌’ನ ಬಳಕೆ ಮಾಡಿಕೊಳ್ಳಲಾಗಿದೆ.

ಇದರ ಜತೆಗೆ, ಕನ್ನಡ ಸಾಹಿತ್ಯ ಪರಿಷತ್‌ ಒಂದು ತಿಂಗಳ ಹಿಂದೆಯಷ್ಟೇ ಬಿಡುಗಡೆಗೊಳಿಸಿದ್ದ ನಿಘಂಟನ್ನು (ಕಸಾಪ ಸಂಕ್ಷಿಪ್ತ ನಿಘಂಟು) ಇದೀಗ ಭಾರತವಾಣಿಗೆ ಸೇರಿಸಲಾಗಿದೆ. ಯಾವುದೇ ಕನ್ನಡ ಪದವನ್ನು ಅಪ್ಲಿಕೇಷನ್‌ನಲ್ಲಿ ಟೈಪ್‌ ಮಾಡಿದರೆ, ಅದರ ಅರ್ಥವು ಕಸಾಪಕನ್ನಡ ಸಾಹಿತ್ಯ ಪರಿಷತ್‌ ನಿಘಂಟಿನಲ್ಲೂ ತೆರೆದುಕೊಳ್ಳುತ್ತಿದೆ.
ಶೀಘ್ರವೇ ಕನ್ನಡ–ಕನ್ನಡ ನಿಘಂಟು ಸೇರ್ಪಡೆ: ಕನ್ನಡ ಸಾಹಿತ್ಯ ಪರಿಷತ್‌ ಕನ್ನಡ–ಕನ್ನಡ ನಿಘಂಟು ಶೀಘ್ರವೇ ಭಾರತವಾಣಿಗೆ ಸೇರ್ಪಡೆಯಾಗುತ್ತಿದೆ.

ಈ ಬಗ್ಗೆ ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್‌ ಜತೆಗೆ ಒಡಂಬಡಿಕೆ ಆಗಿದೆ. ಒಟ್ಟು 8 ಸಂಪುಟಗಳಲ್ಲಿ ಈ ನಿಘಂಟಿದ್ದು, ಅವಷ್ಟನ್ನೂ ಡಿಜಿಟಲೀಕರಣ ಮಾಡಲಾಗುತ್ತಿದೆ. ಒಟ್ಟಾರೆಯಾಗಿ 20 ಲಕ್ಷ ಪದಗಳು ಈ ನಿಘಂಟಿನ ಮೂಲಕ ಭಾರತವಾಣಿ ಅಪ್ಲಿಕೇಷನ್‌ಗೆ ಸೇರಲಿವೆ. 20 ಸಾವಿರ ಪುಟಗಳ ಈ ಸಂಪುಟಗಳನ್ನು ಡಿಜಿಟಲೀಕರಿಸುವ ಕಾರ್ಯ ಈಗಾಗಲೇ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.