ADVERTISEMENT

ಭಾರಿ ಮಳೆ; ಸಿಡಿಲು ಬಡಿದು ಇಬ್ಬರ ಸಾವು

ಬಳ್ಳಾರಿಯಲ್ಲಿ ಮನೆಗೆ ನುಗ್ಗಿದ ನೀರು: ಸಂಕಷ್ಟಕ್ಕೆ ಸಿಲುಕಿದ ಚಾರಣಿಗರು

​ಪ್ರಜಾವಾಣಿ ವಾರ್ತೆ
Published 29 ಮೇ 2016, 19:30 IST
Last Updated 29 ಮೇ 2016, 19:30 IST
ಬಳ್ಳಾರಿಯಲ್ಲಿ ಭಾನುವಾರ ಸುರಿದ ಭಾರಿ ಮಳೆಯಿಂದಾಗಿ ಮಿಲ್ಲರ್ ಪೇಟೆಯ ಮನೆಯೊಂದಕ್ಕೆ ನುಗ್ಗಿರುವ ನೀರನ್ನು ವ್ಯಕ್ತಿಯೊಬ್ಬರು ಹೊರ ಚೆಲ್ಲುತ್ತಿದ್ದ ದೃಶ್ಯ (
ಬಳ್ಳಾರಿಯಲ್ಲಿ ಭಾನುವಾರ ಸುರಿದ ಭಾರಿ ಮಳೆಯಿಂದಾಗಿ ಮಿಲ್ಲರ್ ಪೇಟೆಯ ಮನೆಯೊಂದಕ್ಕೆ ನುಗ್ಗಿರುವ ನೀರನ್ನು ವ್ಯಕ್ತಿಯೊಬ್ಬರು ಹೊರ ಚೆಲ್ಲುತ್ತಿದ್ದ ದೃಶ್ಯ (   

ಬೆಂಗಳೂರು: ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ರಾಯಚೂರು ಜಿಲ್ಲೆಯ ಕೆಲವು ಕಡೆ ಶನಿವಾರ ರಾತ್ರಿ ಹಾಗೂ ಭಾನುವಾರ ಮಳೆಯಾಗಿದೆ. ಸಿಡಿಲು ಬಡಿದು ಸುಬ್ರಹ್ಮಣ್ಯ ಸಮೀಪದ ಕುಮಾರಪರ್ವತದಲ್ಲಿ ಚಾರಣಿಗರೊಬ್ಬರು, ರಾಯಚೂರು ತಾಲ್ಲೂಕಿನ ಕುರಿಗಾಹಿಯೊಬ್ಬರು ಮೃತಪಟ್ಟಿದ್ದಾರೆ.

ಬಳ್ಳಾರಿ ನಗರದಲ್ಲಿ ಭಾನುವಾರ ಆರು ತಾಸಿಗೂ ಹೆಚ್ಚು ಕಾಲ ಬಿರುಸಿನ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು. ನಸುಕಿನ ಮೂರು ಗಂಟೆಯಿಂದ ಆರಂಭವಾದ ಬಿರುಮಳೆ ಬೆಳಿಗ್ಗೆ 9 ಗಂಟೆವರೆಗೆ ಅದೇ ಗತಿಯಲ್ಲಿ ಸುರಿಯಿತು. ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರ ರಸ್ತೆಯ ಕೆಳಸೇತುವೆ, ಸತ್ಯನಾರಾಯಣ ಪೇಟೆ ಕೆಳಸೇತುವೆ, ದುರ್ಗಮ್ಮ ದೇವಾಲಯದ ಕೆಳಸೇತುವೆಯಲ್ಲಿ ನೀರು ತುಂಬಿಕೊಂಡಿದ್ದರಿಂದ ಕೆಲಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು.

ನೀರಿನ ಪ್ರಮಾಣ ತಗ್ಗಿದ ನಂತರ ವಾಹನಗಳು ನಿಧಾನವಾಗಿ ಸಂಚರಿಸಿದವು. ಒಂದೆರಡು ಕಡೆ ಬೃಹತ್‌ ಮರಗಳು ಉರುಳಿ ವಾಹನಗಳು ಜಖಂಗೊಂಡವು. ಕೌಲ್‌ಬಜಾರ್ ಪ್ರದೇಶದ ಬೀಡಿ ಕಾರ್ಮಿಕರ ಕಾಲೊನಿಯ ಮನೆಯ ಚಾವಣಿಯೊಂದು ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.

ಉತ್ತಮ ಮಳೆ: ತುಂಬಿದ ನಾಲಾಬದು: ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಕೆಲವೆಡೆ ಭಾನುವಾರ ಬೆಳಿಗ್ಗೆ ಸಾಧಾರಣ ಮಳೆಯಾಗಿದೆ. ಚನ್ನಗಿರಿ ತಾಲ್ಲೂಕು ಸೇರಿದಂತೆ ಸಂತೇಬೆನ್ನೂರು ಹೋಬಳಿಯ ದೇವರ ಹಳ್ಳಿ, ಕಾಕನೂರು, ನುಗ್ಗಿಹಳ್ಳಿ, ಸಿದ್ದನ ಮಠ, ದೊಡ್ಡಬ್ಬಿಗೆರೆ, ನಾಗೇನ ಹಳ್ಳಿ, ಗೆದ್ದಲಹಟ್ಟಿ, ಚಿಕ್ಕಬೆನ್ನೂರು, ಕೊಂಡದ ಹಳ್ಳಿ, ದೊಡ್ಡೇರಿಕಟ್ಟೆ, ದಾವಣಗೆರೆ ತಾಲ್ಲೂಕಿನ ಅಣಜಿ  ಮುಂತಾದ ಗ್ರಾಮಗಳಲ್ಲಿ ಬೆಳಿಗ್ಗೆ ಸಾಧಾರಣ ಮಳೆಯಾಗಿದೆ. 

ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಹೊಸದುರ್ಗ, ಮೊಳಕಾಲ್ಮುರು, ಚಳ್ಳಕೆರೆ ಹಾಗೂ ನಾಯಕನಹಟ್ಟಿಯಲ್ಲಿ ಪಟ್ಟಣ ದಲ್ಲೂ ಉತ್ತಮ ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಇಕ್ಕನೂರಿನಲ್ಲಿ 70.4 ಮಿ.ಮೀ., ಮಳೆ ಸುರಿದಿದೆ.

ತುಂಬಿದ ನಾಲಾಬದು: ಹಿರಿಯೂರು ತಾಲ್ಲೂಕಿನ ಎ.ವಿ.ಕೊಟ್ಟಿಗೆ ಗ್ರಾಮದ ಸಮೀಪ ಕೆಲ ದಿನಗಳ ಹಿಂದೆ ಕೃಷಿ ಇಲಾಖೆ ವತಿಯಿಂದ ನಿರ್ಮಿಸಿದ್ದ ನಾಲಾಬದು ಭಾನುವಾರ ಬೆಳಗಿನ ಜಾವ ಸುರಿದ ಮಳೆಗೆ ತುಂಬಿದೆ. ಶಿವಮೊಗ್ಗ ನಗರದಲ್ಲಿ ಬೆಳಿಗ್ಗೆ ಸಾಧಾರಣ ಮಳೆಯಾಗಿದೆ.

ಕನಕಪುರದ ಚಾರಣಿಗ ಸಾವು: ಸುಬ್ರಹ್ಮಣ್ಯ ಸಮೀಪದ ಕುಮಾರ ಪರ್ವತ ಬೆಟ್ಟಕ್ಕೆ ಚಾರಣಕ್ಕೆಂದು ತೆರಳಿದ್ದ ಕನಕಪುರದ ಉಪನ್ಯಾಸಕ ಹರೀಶ್‌ (29) ಬೆಟ್ಟದಲ್ಲಿ ಸಿಡಿಲು ಬಡಿದು ಮೃತಪಟ್ಟ ಘಟನೆ ಭಾನುವಾರ ನಡೆದಿದೆ.

ಮೈಸೂರು ಹಾಗೂ ಬೆಂಗಳೂರುಗಳಲ್ಲಿ ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡುವ ಹವ್ಯಾಸಿ 12 ಮಂದಿ ಪ್ರವಾಸಿಗರ ತಂಡ ಶನಿವಾರ ಸುಬ್ರಹ್ಮಣ್ಯದಿಂದ 8 ಕಿ.ಮೀ. ದೂರದ ಕುಮಾರಪರ್ವತ ಬೆಟ್ಟಕ್ಕೆ ಚಾರಣಕ್ಕೆ ತೆರಳಿತ್ತು. ತಂಡದಲ್ಲಿ ಆರು ಮಂದಿ ಮಹಿಳೆಯರು ಮತ್ತು ಆರು ಮಂದಿ ಪುರುಷರು ಇದ್ದರು.

ಸಂಜೆ ಪರ್ವತದ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ನಡೆಸಿದ ತಂಡದ ಸದಸ್ಯರು ಕಲ್ಲು ಚಪ್ಪರ ಎಂಬ ಸ್ಥಳಕ್ಕೆ ತಲುಪಿ ಅಲ್ಲಿನ ಪಕ್ಕದ ಕರಡಿಬೆಟ್ಟದಲ್ಲಿ  ಪ್ರೇಕ್ಷಣಿಯ ಸ್ಥಳಗಳ ದೃಶ್ಯಗಳನ್ನು ವೀಕ್ಷಿಸಿ ತಮ್ಮ ಮೊಬೈಲ್‌ಗಳಲ್ಲಿ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದರು.

ಇದೇ ವೇಳೆ ಹರೀಶ ಅವರಿಗೆ ಸಿಡಿಲು ಬಡಿಯಿತು. ಆಘಾತಕ್ಕೆ ಜತೆಯಲ್ಲಿದ್ದ ಇಬ್ಬರು ಮಹಿಳೆಯರಿಗೆ ಸಣ್ಣಪುಟ್ಟ ಗಾಯವಾಗಿದೆ. ತೀವ್ರವಾಗ ಅಸ್ವಸ್ಥಗೊಂಡ ಹರೀಶ್‌ ಅವರನ್ನು ಸಮೀಪದ ಅರಣ್ಯ ಇಲಾಖೆಯ ಶೆಡ್‌ಗೆ ತಂದು ಮಲಗಿಸಲಾಯಿತು. ಶನಿವಾರ ರಾತ್ರಿ ಇಡೀ ತಂಡ ಅಲ್ಲೇ ಇತ್ತು. ಸಿಡಿಲಿನ ಆಘಾತದಿಂದ ಹರೀಶ್‌ ಅವರು ರಾತ್ರಿಯೇ ಕೊನೆಯುಸಿರೆಳೆದರು. ಭಾನುವಾರ ಸುಬ್ರಹ್ಮಣ್ಯದಿಂದ ತೆರಳಿದ 8 ಮಂದಿಯ ತಂಡ ಮೃತದೇಹವನ್ನು ಸುಬ್ರಹ್ಮಣ್ಯಕ್ಕೆ ಹೊತ್ತು ತಂದಿತು.

ಸಿಡಿಲು ಬಡಿದು ಯುವಕ ಸಾವು: ರಾಯಚೂರು ತಾಲ್ಲೂಕಿನ ಗೋನ್ವಾರ ಗ್ರಾಮದಲ್ಲಿ ಶನಿವಾರ ರಾತ್ರಿ ಸಿಡಿಲು ಬಡಿದು ಈರೇಶ (35) ಸಾವನ್ನಪ್ಪಿದ್ದು, ಬಿರುಗಾಳಿ, ಮಳೆಗೆ ಗಧಾರ ಗ್ರಾಮದಲ್ಲಿ ನಾಲ್ಕು ಟಿನ್‌ಶೆಡ್‌ ಮನೆಗಳ ಚಾವಣಿ ಹಾರಿಹೋಗಿವೆ. ಇನ್ನು ಟೀನ್‌ ಶೀಟ್‌ ತಗುಲಿ ನರಸಿಂಹಲು (18)ಎಂಬ ಯುವಕ ಗಾಯಗೊಂಡಿದ್ದಾರೆ.
ಈರೇಶ ಅವರು ಹೊಲವೊಂದರ ಕುರಿದೊಡ್ಡಿಯಲ್ಲಿ ಮಲಗಿದ್ದಾಗ ಸಿಡಿಲು ಬಡಿದಿದೆ.

ಶನಿವಾರ ರಾತ್ರಿ ನಗರ ಮತ್ತು ತಾಲ್ಲೂಕಿನ ಸುತ್ತಮುತ್ತ ಜೋರು ಗಾಳಿಯಿಂದ ಕೂಡಿದ ಸಾಧಾರಣ ಮಳೆ ಆಗಿದೆ. ಗಧಾರ ಗ್ರಾಮದಲ್ಲಿ ಬಡೇಸಾಬ್‌ ಮತ್ತು ಮಾರೆಮ್ಮ ಅವರ ಮನೆಗಳ ಟಿನ್‌ಶೆಡ್‌ ಕುಸಿದು ಬಿದ್ದಿವೆ. ಮಟಮಾರಿ ಗ್ರಾಮದಲ್ಲಿ ತಗ್ಗಿನಲ್ಲಿದ್ದ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಯರಗೇರಾ ಭಾಗದಲ್ಲಿ ಅತಿಹೆಚ್ಚು (24 ಮಿ.ಮೀ) ಮಳೆಯಾಗಿದೆ. ಮಾನ್ವಿ ತಾಲ್ಲೂಕಿನ ಕೆಲವು ಕಡೆ ಸಾಧಾರಣ ಮಳೆಯಾದ ವರದಿಯಾಗಿದೆ.

9 ಸೆಂ.ಮೀ ಮಳೆ
ಬೆಂಗಳೂರು:
ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ, ತೊಂಡೆಭಾವಿಯಲ್ಲಿ 9 ಸೆಂ.ಮೀ ಮಳೆಯಾಗಿದೆ. ಬಂಟ್ವಾಳ, ಚಿಂತಾಮಣಿ 7, ಮಧುಗಿರಿ 6, ಧರ್ಮಸ್ಥಳ, ಭರಮ ಸಾಗರ, ಪಾವಗಡ ಎಡಬ್ಲ್ಯೂಎಸ್ 5 ಸೆಂ.ಮೀ ಮಳೆಯಾಗಿದೆ.

ಮುನ್ಸೂಚನೆ: ಮುಂದಿನ 24 ಗಂಟೆಗಳಲ್ಲಿ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವೆಡೆ ಮೇ 30 ರಿಂದ ಜೂನ್ 3 ರವರೆಗೆ  ಸಾಧಾರಣ ಮಳೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT