ADVERTISEMENT

ಭಾವನ ವಿರುದ್ಧವೇ ರಾಜ್ಯ ಮಹಿಳಾ ಆಯೋಗಕ್ಕೆ ದೂರು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2017, 19:30 IST
Last Updated 16 ಡಿಸೆಂಬರ್ 2017, 19:30 IST

ಬೆಂಗಳೂರು/ ಧಾರವಾಡ: ಧಾರವಾಡ ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯ ಯೋಗೀಶ್‌ ಗೌಡ ಗೌಡರ ಕೊಲೆ ಪ್ರಕರಣ ಶನಿವಾರ ಹೊಸ ತಿರುವು ಪಡೆದುಕೊಂಡಿದ್ದು, ಯೋಗೀಶ್‌ ಪತ್ನಿ ಮಲ್ಲಮ್ಮ ತನ್ನನ್ನು ಅಪಹರಣ ಮಾಡಲಾಗಿದೆ ಎಂದು ಆರೋಪಿಸಿದ್ದ ಭಾವನ ವಿರುದ್ಧವೇ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

ಮಲ್ಲಮ್ಮ ಅವರನ್ನು ಅಪಹರಿಸಲಾಗಿದ್ದು, ಕಾಂಗ್ರೆಸ್‌ ಸೇರುವಂತೆ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಯೋಗೀಶ್‌ ಸಹೋದರ ಗುರುನಾಥಗೌಡ ಗೌಡರ ಶುಕ್ರವಾರ ಆರೋಪಿಸಿದ್ದರು.

ಆದರೆ, ಶನಿವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಮಲ್ಲಮ್ಮ, ‘ನನ್ನನ್ನು ಯಾರೂ ಅಪಹರಣ ಮಾಡಿಲ್ಲ. ನನ್ನ ಬಗ್ಗೆ ಕೇಳಿ ಬರುತ್ತಿರುವ ಎಲ್ಲ ಮಾಹಿತಿಗಳು ಸುಳ್ಳು, ನನ್ನನ್ನು ಕಾಂಗ್ರೆಸ್‌ ಪಕ್ಷದ ಯಾರೂ ಸಂಪರ್ಕಿಸಿಲ್ಲ’ ಎಂದಿದ್ದಾರೆ.

ADVERTISEMENT

‘ನನ್ನ ಗಂಡನ ಹತ್ಯೆಯಲ್ಲಿ ಸಚಿವ ವಿನಯ ಕುಲಕರ್ಣಿ ಪಾತ್ರ ಇದೆ ಎಂದು ನಾನು ಸುಮ್ಮನೆ ಆರೋಪ ಮಾಡಲ್ಲ. ಗಂಡನನ್ನು ಕೊಂದವರಿಗೆ ಶಿಕ್ಷೆ ಆಗಬೇಕು. ನನಗೂ ನನ್ನ ನಾಲ್ಕು ಮಕ್ಕಳಿಗೂ ನ್ಯಾಯ ಸಿಗಬೇಕು ಅಷ್ಟೆ’ ಎಂದಿದ್ದಾರೆ.

‘ರಾತ್ರೋ ರಾತ್ರಿ ಮಲ್ಲಮ್ಮ ಅವರನ್ನು ಕಾಂಗ್ರೆಸ್‌ ನಾಯಕರು ಕರೆದೊಯ್ದಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಶ್‌ಗೌಡ ಹಾಗೂ ನಾಗರಾಜ ಗೌರಿ ಮೂಲಕ ಕಾಂಗ್ರೆಸ್‌ಗೆ ಸೇರುವಂತೆ ಒತ್ತಾಯಿಸಿದ್ದು, ಜೀವಬೆದರಿಕೆ ಒಡ್ಡಿ ಕಾಂಗ್ರೆಸ್‌ಗೆ ಸೇರಿಸುವ ಯತ್ನ ನಡೆದಿದೆ’ ಎಂದು ಗುರುನಾಥ್ ಗೌಡ ಆರೋಪಿಸಿದ್ದರು.

‘ಬಿಜೆಪಿ, ಭಾವನಿಂದ ಜೀವಭಯ’: ‘ನನ್ನ ಭಾವ ಹಾಗೂ ಬಿಜೆಪಿ ಮುಖಂಡರಿಂದ ಜೀವ ಭಯವಿದ್ದು, ರಕ್ಷಣೆ ನೀಡಬೇಕು’ ಎಂದು ರಾಜ್ಯ ಮಹಿಳಾ ಆಯೋಗಕ್ಕೆ ನೀಡಿದ ದೂರಿನಲ್ಲಿ ಮಲ್ಲಮ್ಮ ತಿಳಿಸಿದ್ದಾರೆ.

ಮಹಿಳಾ ಆಯೋಗದ ಕಚೇರಿಗೆ ಶನಿವಾರ ತೆರಳಿ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಅವರಿಗೆ ದೂರು ಸಲ್ಲಿಸಿದರು.

‘ಎರಡು ತಿಂಗಳಿನಿಂದ ಗುರುನಾಥ ಗೌಡ ಕರೆ ಮಾಡಿ ಪೀಡಿಸುತ್ತಿದ್ದಾರೆ. ವೈಯಕ್ತಿಕ ಕೆಲಸಕ್ಕಾಗಿ ಹೊರಗೆ ಹೋದರೂ ಮಾನಸಿಕ ಹಿಂಸೆ ನೀಡುತ್ತಾರೆ. ಮಾತು ಕೇಳದಿದ್ದರೆ ನನಗೆ ಮತ್ತು ನನ್ನ ಮಕ್ಕಳಿಗೆ ಭಯ ಹುಟ್ಟಿಸುವಂತೆ ಮಾಡುತ್ತಿದ್ದಾರೆ. ಮನೆಗೆ ಬರುವ ಯಾವುದೇ ವ್ಯಕ್ತಿಗೆ ಗೂಂಡಾಗಳನ್ನು ಬಿಟ್ಟು
ಹೊಡೆಸುತ್ತಿದ್ದಾರೆ. ಇದರಿಂದ ಜೀವನವೇ ಬೇಸರವಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಹೋರಾಟ ನಿಲ್ಲದು: ‘ಮಲ್ಲಮ್ಮ ಗೌಡರ (ಕೊಲೆಯಾದ ಯೋಗೀಶಗೌಡ ಗೌಡರ ಪತ್ನಿ) ಕಾಂಗ್ರೆಸ್ ಸೇರಿದರೂ ನನ್ನ ಸಹೋದರನ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಹೋರಾಟ ನಿಲ್ಲದು’ ಎಂದು ಯೋಗೀಶಗೌಡ ಗೌಡರ ಸೋದರ ಗುರುನಾಥಗೌಡ
ಸ್ಪಷ್ಟಪಡಿಸಿದರು.

‘ಈ ಪ್ರಕರಣದ ಮೊದಲ ದಿನದಿಂದಲೂ ಇಡೀ ಕುಟುಂಬವೇ ಒಗ್ಗಟ್ಟಾಗಿ ಹೋರಾಟ ನಡೆಸುತ್ತಿದೆ. ಆದರೆ, ಇದನ್ನು ಹತ್ತಿಕ್ಕುವ ಸಲುವಾಗಿಯೇ ಮಲ್ಲಮ್ಮನ ಮೇಲೆ ಕಾಂಗ್ರೆಸ್‌ ಒತ್ತಡ ತಂದಿದೆ. ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿರುವುದು ಮಾತ್ರವಲ್ಲ, ಕುಟುಂಬದವರ ವಿರುದ್ಧವೇ ಆರೋಪ ಮಾಡುವಂತೆ ಮಾಡಿದೆ. ಇವರ ಪ್ರಯತ್ನ ಎಂದಿಗೂ ಫಲಿಸದು’ ಎಂದು ಶನಿವಾರ ತಾಲ್ಲೂಕಿನ ಗೋವನಕೊಪ್ಪದ ತಮ್ಮ ತೋಟದ ಮನೆಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಮಗನ ಹ್ವಾದ್‌ಮ್ಯಾಲ ಆಕಿ ಕಸಬರಗಿ ಇದ್ದಂಗ’: ‘ಮಲ್ಲಮ್ಮಗ ಅನ್ಯಾಯ ಮಾಡೇವಿ ಅನ್ನೋದಾದ್ರ, ಹೋಗಿ ಆಕಿ ತೌರು ಮನೀಯವ್ರನ್ನ ಕೇಳಿ ಬರ್ರಿ. ಸತ್ಯ ಗೊತ್ತಾಕ್ಕೇತಿ. ಈಗ ನನ್ನ ಮಗನ... ಹೋಗ್ಯಾನ ಅಂದ ಮ್ಯಾಲ ಆಕಿ ಕಸಬರಗಿ ಇದ್ದಂಗ’ ಎಂದು ಯೋಗೀಶಗೌಡ ಗೌಡರ ತಾಯಿ ತುಂಗಮ್ಮ ಗೌಡರ ಬೇಸರ ವ್ಯಕ್ತಪಡಿಸಿದರು.

‘ಇಂಥಾ ಕೆಲ್ಸಾ ಮಾಡ್ದೋರಿಗೆ ಪುಣ್ಯಾ ಹತ್ತಲಿ. ಅವರಿಗೂ ಮಕ್ಕಳು ಮರಿ ಅದಾವು. ಇದರಿಂದ ಆಕಿ ಏನು ಸಾಧಿಸೀದ್ಲು? ಗೌಡ್ರು ಮನಿ ಮರ್ಯಾದಿ ಏನ್‌ ಮಾಡ್ಯಾಳ ನೀವ... ನೋಡ್ರಿ’ ಎಂದು ಕಣ್ಣೀರಿಟ್ಟರು.

ಕಾಂಗ್ರೆಸ್‌ನಿಂದ ಮಲ್ಲಮ್ಮ ಗೌಡರ ಹೈಜಾಕ್‌: ಜಗದೀಶ ಶೆಟ್ಟರ್‌ ಆರೋಪ

ಹುಬ್ಬಳ್ಳಿ: ‘ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲೆಂದೇ ಅವರ ಪತ್ನಿ ಮಲ್ಲಮ್ಮ ಗೌಡರ ಅವರನ್ನು ಕಾಂಗ್ರೆಸ್‌ನವರು ಹೈಜಾಕ್‌ ಮಾಡಿದ್ದಾರೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್‌ ಶನಿವಾರ ಇಲ್ಲಿ ಆರೋಪಿಸಿದರು.

‘ಈ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಕಾಂಗ್ರೆಸ್‌ ಯತ್ನಿಸುತ್ತಿದೆ. ಒಂದೊಂದೇ ಸಾಕ್ಷ್ಯಗಳು ಹೊರಬರುತ್ತಿವೆ. ಕಾಂಗ್ರೆಸ್‌ ಸೇರುವುದಾಗಿ ಬೆಂಗಳೂರಿನಲ್ಲಿ ಮಲ್ಲಮ್ಮ ನೀಡಿರುವ ಹೇಳಿಕೆ ಗಮನಿಸಿದರೆ ಆಕೆ ಒತ್ತಡಕ್ಕೆ ಒಳಗಾದಂತಿದೆ’ ಎಂದು ಅಭಿಪ್ರಾಯಪಟ್ಟರು.

ಯೋಗೀಶಗೌಡ ಸಹೋದರ ಗುರುನಾಥಗೌಡ ಅವರು ಸಚಿವ ವಿನಯ ಕುಲಕರ್ಣಿ ವಿರುದ್ಧ ದೂರು ನೀಡಿದ್ದರೂ ಪೊಲೀಸರು ಇನ್ನೂ ಎಫ್‌ಐಆರ್‌ ದಾಖಲಿಸಿಲ್ಲ ಎಂದು ದೂರಿದ ಅವರು, ಪ್ರಕರಣದ ಸತ್ಯಾಸತ್ಯತೆಯನ್ನು ಪತ್ತೆ ಹಚ್ಚಲು ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಯೋಗಿ ಆದಿತ್ಯನಾಥ ಹುಬ್ಬಳ್ಳಿಗೆ
ಬಿಜೆಪಿ ಆಯೋಜಿಸಿರುವ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇದೇ 21ರಂದು ಹುಬ್ಬಳ್ಳಿಗೆ ಭೇಟಿ ನೀಡಲಿದ್ದಾರೆ. ಈ ಸಂಬಂಧ ಈಗಾಗಲೇ ಅವರಿಗೆ ಆಹ್ವಾನ ನೀಡಲಾಗಿದ್ದು, ಬರಲು ಒಪ್ಪಿಕೊಂಡಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.