ADVERTISEMENT

ಮಠಗಳ ದುರಾಡಳಿತ ನಿಯಂತ್ರಣಕ್ಕೆ ಕಾಯ್ದೆ ಅಗತ್ಯ

ಅರೆ ನ್ಯಾಯಿಕ ವಿಚಾರಣೆ–ವಕೀಲ ಶ್ರೀರಂಗ ಪ್ರತಿಪಾದನೆ

ಬಿ.ಎಸ್.ಷಣ್ಮುಖಪ್ಪ
Published 14 ಡಿಸೆಂಬರ್ 2016, 19:30 IST
Last Updated 14 ಡಿಸೆಂಬರ್ 2016, 19:30 IST

ಬೆಂಗಳೂರು: ‘ಭಕ್ತರು, ಸಾರ್ವಜನಿಕರಿಂದ ದೇಣಿಗೆ ಮತ್ತು ಕೊಡುಗೆ ಸ್ವೀಕರಿಸುವ ಮಠಾಧಿಪತಿಗಳು  ಸ್ಥಿರ ಹಾಗೂ ಚರಾಸ್ತಿ  ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬ ಆಪಾದನೆ ಕೇಳಿಬಂದರೆ ಅಂತಹ ಮಠಗಳನ್ನು ಸರ್ಕಾರ ವಶಕ್ಕೆ ಪಡೆದು ಅವುಗಳಿಗೆ ಆಡಳಿತಾಧಿಕಾರಿ ನೇಮಕ ಮಾಡುವ ದಿಸೆಯಲ್ಲಿ ಕೂಡಲೇ ಕಾಯ್ದೆ ರೂಪಿಸಬೇಕು’ ಎಂದು ವಕೀಲ ಶ್ರೀರಂಗ ಅವರು   ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದರು.

ಎದುರ್ಕುಳ ಈಶ್ವರ ಭಟ್‌ ಮತ್ತು ಇತರರು ಸಲ್ಲಿಸಿರುವ ಈ ಮನವಿಯನ್ನು ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಖುಂಟಿಆ ಅವರು ಬುಧವಾರ ವಿಚಾರಣೆ ನಡೆಸಿದರು.

ಅರ್ಜಿದಾರರ ಪರ ವಾದ ಮಂಡಿಸಿದ ಶ್ರೀರಂಗ, ‘ಹೊಸನಗರದ ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತೀ ಶ್ರೀಗಳು ಮಠಕ್ಕೆ ಸಂದಾಯವಾಗುವ ಕೋಟ್ಯಂತರ ಮೊತ್ತದ ದೇಣಿಗೆಯನ್ನು ತಾವೇ ಮುಖ್ಯಸ್ಥರಾಗಿರುವ ಟ್ರಸ್ಟ್‌ಗಳಿಗೆ ವರ್ಗಾಯಿಸಿಕೊಂಡು ವೈಯಕ್ತಿಕ ಕಾರಣಗಳಿಗೆ ಬಳಸಿಕೊಳ್ಳುತ್ತಿದ್ದಾರೆ.  ಆದ್ದರಿಂದ ಕೂಡಲೇ ಅವರನ್ನು ಪೀಠಾಧಿಪತಿ ಸ್ಥಾನದಿಂದ ಕೆಳಗಿಳಿಸಿ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಬೇಕು’ ಎಂದು ಕೋರಿದರು.

‘ರಾಘವೇಶ್ವರ ಶ್ರೀಗಳು ಸನ್ಯಾಸಿ ಎಂಬ ಪದಕ್ಕೆ ಸಂಪೂರ್ಣ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅವರ ವಿರುದ್ಧ ಮತ್ತೊಂದು ಅತ್ಯಾಚಾರ ಆರೋಪದ ಪ್ರಕರಣವಿದೆ. ಇಂತಹವರು ಪೀಠದಲ್ಲಿ ಇರಬಾರದು ಎಂಬುದೇ ಮನವಿದಾರರ ಅಹವಾಲು’ ಎಂದರು.

‘ಸಂವಿಧಾನದ 162 ನೇ ವಿಧಿಯನ್ನು ಉಪಯೋಗಿಸಿಕೊಂಡು, ರಾಜ್ಯ ಸರ್ಕಾರ ರಾಜ್ಯದಲ್ಲಿನ ಮಠಗಳ ದುರಾಡಳಿತಕ್ಕೆ ನಿಯಂತ್ರಣ ಹೇರಲು ಮುಂದಾಗಬೇಕು. ಈ ದಿಸೆಯಲ್ಲಿ ಕಾನೂನು ರೂಪಿಸಲು ರಾಜ್ಯ ಸರ್ಕಾರ ತನ್ನ ಸಂವಿಧಾನಾತ್ಮಕ ಅಧಿಕಾರ ಚಲಾಯಿಸಬೇಕು’ ಎಂದು ಶ್ರೀರಂಗ ಹೇಳಿದರು.

ಇದಕ್ಕೂ ಮುನ್ನ ಶ್ರೀಗಳ ಪರ ಹಾಜರಿದ್ದ ವಕೀಲ ಶಂಭು ಶರ್ಮಾ ಅವರು, ‘ಅರ್ಜಿದಾರರು ದುರುದ್ದೇಶದಿಂದ ಈ ಮನವಿ ಸಲ್ಲಿಸಿದ್ದಾರೆ. ಶ್ರೀಗಳ ವಿರುದ್ಧದ ಆರೋಪಗಳಿಗೆ ಅವರ ಬಳಿ ಯಾವುದೇ ಪುರಾವೆ ಇಲ್ಲ. ಶ್ರೀಗಳ ವಿರುದ್ಧ ಕ್ರಿಮಿನಲ್‌, ಸಿವಿಲ್‌ ಹಾಗೂ ಎಲ್ಲಾ ಸ್ವರೂಪದ ವ್ಯಾಜ್ಯಗಳನ್ನು ದಾಖಲಿಸುವುದೇ ಅವರಿಗೆ ಅಭ್ಯಾಸವಾಗಿದೆ’ ಎಂದು ಆಕ್ಷೇಪಿಸಿದರು.

‘ಶ್ರೀಮಠವು ತನ್ನ ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕ ಕಾಯ್ದುಕೊಂಡು ಹೋಗುತ್ತಿದೆ. ಶಾಸನತಂತ್ರದ ಮೂಲಕ ಎಲ್ಲ ಲೆಕ್ಕಪತ್ರಗಳನ್ನೂ ಜತನವಾಗಿ ಕಾಯ್ದಿರಿಸಲಾಗಿದೆ. ಮಠಕ್ಕೆ ತನ್ನದೇ ಆದ ಹೊಣೆಗಾರಿಕೆ ಇದೆ. ಒಂದು ವೇಳೆ ಮಠಕ್ಕೆ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಲು ನಿರ್ಧರಿಸಿದರೆ ಅದಕ್ಕೂ ಮುನ್ನ ಮಠದ ಎಲ್ಲ ವ್ಯವಹಾರಗಳನ್ನು ಸೂಕ್ತ ಅಧಿಕಾರಿ ಮುಖಾಂತರ ತಪಾಸಣೆ ನಡೆಸಲು ನಿರ್ದೇಶಿಸಬೇಕು’ ಎಂದು ಕೋರಿದರು.

ಮಠಗಳ ಪೀಠಾಧಿಪತಿಗಳನ್ನು  ದುರಾಡಳಿತ ಆರೋಪದ ಮೇಲೆ ಕೆಳಗಿಳಿಸಿ ಅವುಗಳಿಗೆ ಆಡಳಿತಾಧಿಕಾರಿ  ನೇಮಕ ಮಾಡುವುದಕ್ಕೆ ಸಂಬಂಧಿಸಿದಂತೆ ಕಾನೂನು ರೂಪಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌  ಮನವಿ ಮಾಡಿರುವ ಮೇರೆಗೆ ಈ ವಿಚಾರಣೆ ನಡೆಯುತ್ತಿದೆ.

ಪೆಚ್ಚಾದ ಶಂಭು ಶರ್ಮಾ
‘ಮಠದಲ್ಲಿ ಬೆಲೆ ಬಾಳುವ ಆನೆ ದಂತದ ಸಿಂಹಾಸನವಿದೆ’ ಎಂದು ಶಂಭು ಶರ್ಮಾ ಹೇಳಿದರು.

‘ಇದು ಎಷ್ಟು ಪುರಾತನವಾದದ್ದು’ ಎಂದು ಖುಂಟಿಆ ಪ್ರಶ್ನಿಸಿದರು. ‘ಸಾವಿರಾರು ವರ್ಷಗಳಷ್ಟು’ ಎಂದ ಶಂಭು ಶರ್ಮಾ ಅವರು ತಕ್ಷಣವೇ ಸಾವರಿಸಿಕೊಂಡು, ‘ಸಾವಿರದ ಒಂದು ನೂರು ವರ್ಷದಷ್ಟು ಹಳೆಯದು. ಶ್ರೀಕೃಷ್ಣದೇವರಾಯ ಇದನ್ನು ಮಠಕ್ಕೆ ಕೊಟ್ಟಿದ್ದ’ ಎಂದರು.

‘ಶ್ರೀಕೃಷ್ಣ ದೇವರಾಯ ಸಾವಿರ ವರ್ಷದ ಹಿಂದೆ ಇದ್ದನಾ’ ಎಂದು ಖುಂಟಿಆ ಪ್ರಶ್ನಿಸಿದಾಗ ಶಂಭುಶರ್ಮಾ ಪೆಚ್ಚಾದರು.
‘ಮಠವು ತನ್ನ ಧಾರ್ಮಿಕ ಚಟುವಟಿಕೆ ಮತ್ತು ಕೈಂಕರ್ಯಗಳನ್ನು ವೇದಗಳಲ್ಲಿ ಹೇಳಿರುವಂತೆಯೇ ಪಾಲಿಸುತ್ತಿದೆ’ ಎಂದು ಶರ್ಮಾ ಹೇಳಿದರು.
‘ಯಾವ ವೇದ ಹೇಳಿದೆ’ ಎಂದು ಖುಂಟಿಆ ಪ್ರಶ್ನಿಸಿದರು.

‘ಋಗ್ವೇದ, ಯಜುರ್ವೇದ, ಅಥರ್ವಣ, ಸಾಮವೇದ  ಹಾಗೂ ಐದನೆಯ ವೇದವಾದ ಆಯುರ್ವೇದದಲ್ಲೂ ಹೇಳಲಾಗಿದೆ’ ಎಂದು ಶರ್ಮಾ ಹೇಳಿದಾಗ ಖುಂಟಿಆ ಅವರಿಗೂ ನಗು ತಡೆಯಲಾಗಲಿಲ್ಲ.

ಶ್ರೀಗಳ ವಿರುದ್ಧದ ಆರೋಪಗಳು
* ಶ್ರೀಗಳು ತಮ್ಮ ಹೆಸರಿನಲ್ಲಿ ಭಾರಿ ಮೊತ್ತದ ಸ್ಥಿರಾಸ್ತಿ ಹಾಗೂ ಎಲ್ಐಸಿ ಬಾಂಡ್‌ಗಳನ್ನು ಇರಿಸಿಕೊಂಡಿದ್ದಾರೆ.

* ಆಸ್ತಿಗಳನ್ನು ಖರೀದಿ ಮಾಡಿ ಮಾರಾಟ ಮಾಡುತ್ತಾರೆ. ಮಠದ ಆರ್ಥಿಕ ವ್ಯವಹಾರಗಳಲ್ಲಿ ತೆರಿಗೆ ಕಳ್ಳತನ ನಡೆಯುತ್ತಿದೆ.
* ಮಠ ಖಾಸಗಿ ಸಂಸ್ಥೆ ಅಲ್ಲ. ಅದು ಸಾರ್ವಜನಿಕ ಸಂಸ್ಥೆ.  ಇಂತಹ ಸಂಸ್ಥೆ ಪ್ರವಾಹ ಪೀಡಿತರಿಗೆ ನೆರವಾಗಲು ದೇಣಿಗೆ ಸಂಗ್ರಹಿಸಿತ್ತು. ಆದರೆ ಇದನ್ನು ಬಳಕೆ ಮಾಡಿಯೇ ಇಲ್ಲ ಹಾಗೂ ಇದರ ಲೆಕ್ಕ ಕೊಟ್ಟಿಲ್ಲ.
* ರಾಮಕಥಾ ಗಾಯಕಿ ಜೊತೆ ಶೀಲಗೆಟ್ಟ ಸಂಬಂಧ ಹೊಂದುವ ಮೂಲಕ ಸನ್ಯಾಸ ಪದಕ್ಕೆ ಕಳಂಕ ತಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.