ADVERTISEMENT

ಮತದಾನ ಪ್ರಕ್ರಿಯೆ ಆರಂಭ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2016, 4:09 IST
Last Updated 13 ಫೆಬ್ರುವರಿ 2016, 4:09 IST
ಮತದಾನ ಪ್ರಕ್ರಿಯೆ ಆರಂಭ
ಮತದಾನ ಪ್ರಕ್ರಿಯೆ ಆರಂಭ   

ಬೆಂಗಳೂರು: ಉಪಚುನಾವಣೆ ನಡೆಯುತ್ತಿರುವ ಹೆಬ್ಬಾಳ, ಬೀದರ್‌ ಮತ್ತು ದೇವದುರ್ಗ ವಿಧಾನಸಭಾ ಕ್ಷೇತ್ರಗಳಲ್ಲಿ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯುವ 15 ಜಿಲ್ಲೆಗಳಲ್ಲಿ ಶನಿವಾರ ಮತದಾನ ಆರಂಭವಾಗಿದೆ.

ಬಹುತೇಕ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ಇನ್ನೂ ವಿರಳವಾಗಿದೆ. ಚುನಾವಣೆಗಳಲ್ಲಿ ಬೆಳಿಗ್ಗೆ ಮತಗಟ್ಟೆಗಳ ಎದುರು ಮತದಾರರ ಸರತಿ ಸಾಲು ಸಾಮಾನ್ಯ. ಆದರೆ, ಶನಿವಾರ ಬಹುತೇಕ ಮತಗಟ್ಟೆಗಳಲ್ಲಿ ಈ ಬಗೆಯ ದೃಶ್ಯ ಕಂಡುಬಂದಿಲ್ಲ.

ಪ್ರತ್ಯೇಕ ಗ್ರಾಮ ಪಂಚಾಯ್ತಿಗೆ ಒತ್ತಾಯಿಸಿ ಧಾರವಾಡದ ನವಲಗುಂದ ತಾಲೂಕಿನ ಅರೆಕುರಹಟ್ಟಿ ಗ್ರಾಮದ ಮತದಾರರು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ADVERTISEMENT

ಕಾರವಾರದ ಮುಂಡಗೋಡ ತಾಲ್ಲೂಕಿನ ಕೊಳಗಿಯ ಮತದಾರರು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದರು. ತಹಶೀಲ್ದಾರ್‌ ಭೇಟಿ ನೀಡಿ ಮನವೊಲಿಸಿದ ಬಳಿಕ ಮತದಾನ ಪ್ರಕ್ರಿಯೆ ಆರಂಭವಾಗಿದೆ.

ಶಿರಸಿ ತಾಲ್ಲೂಕಿನ ಹಂಚಿನಕೇರಿಯಲ್ಲಿ ಮತಯಂತ್ರದ ತಾಂತ್ರಿಕದೋಷದಿಂದ ಅರ್ಧ ಗಂಟೆ ವಿಳಂಬವಾಗಿ ಮತದಾನ ಆರಂಭವಾಗಿದೆ.

ಉಪ ಚುನಾವಣೆ ನಡೆಯುವ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ 20, ಬೀದರ್‌ ಕ್ಷೇತ್ರದಲ್ಲಿ 11 ಮತ್ತು ದೇವದುರ್ಗ ಕ್ಷೇತ್ರದಲ್ಲಿ ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ತಾಲ್ಲೂಕು ಪಂಚಾಯಿತಿಗೆ ಮೊದಲ ಹಂತದಲ್ಲಿ 15 ಜಿಲ್ಲೆಗಳಲ್ಲಿ ಚುನಾವಣೆ ನಡೆಯುತ್ತಿದೆ. ಈ ಜಿಲ್ಲೆಗಳ 552 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ ಎರಡು ಕಡೆ ಅವಿರೋಧ ಆಯ್ಕೆ ನಡೆದಿದೆ. ಮತದಾನ ನಡೆಯುವ 550 ಕ್ಷೇತ್ರಗಳಲ್ಲಿ ಒಟ್ಟು 2,087 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಈ ಜಿಲ್ಲೆಗಳ 1,945 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪೈಕಿ 11 ಕಡೆ ಅವಿರೋಧ ಆಯ್ಕೆ ನಡೆದಿದೆ. 1,934 ಕ್ಷೇತ್ರಗಳಲ್ಲಿ 6,288 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.