ADVERTISEMENT

‘ಮತ್ತೆ ವಚನ ತಿದ್ದಿದರೆ ಜೈಲಿಗೆ: ಎಚ್ಚರಿಕೆ ’

ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅವರಿಗೆ ವೀರಶೈವ ಮಹಾಸಭಾ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST
ಮಾತೆ ಮಹಾದೇವಿ
ಮಾತೆ ಮಹಾದೇವಿ   

ಬೆಂಗಳೂರು: ‘ಬಸವಣ್ಣನ ವಚನಗಳ ಅಂಕಿತನಾಮ ತಿರುಚುವ ಕೆಲಸವನ್ನು ಮಾತೆ ಮಹಾದೇವಿ ಮತ್ತೇನಾದರೂ ಮುಂದುವರಿಸಿದರೆ ಅವರನ್ನು ಜೈಲಿಗೆ ಕಳುಹಿಸುವ ಕೆಲಸ ಮಾಡಬೇಕಾದೀತು’ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಎಚ್ಚರಿಸಿದೆ.

ಮಾತೆ ಮಹಾದೇವಿ ಸಂಪಾದಿಸಿರುವ ‘ಬಸವ ವಚನ ದೀಪ್ತಿ’ ಗ್ರಂಥವನ್ನು ನಿಷೇಧಿಸಿದ್ದ ರಾಜ್ಯ ಸರ್ಕಾರದ ಕ್ರಮ ಎತ್ತಿ ಹಿಡಿದಿರುವ ಸುಪ್ರಿಂ ಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಮಹಾಸಭಾ, ‘ಮಾತೆ ಮಹಾದೇವಿ ಇನ್ನೊಮ್ಮೆ ಬಸವಣ್ಣನ ವಚನಗಳ ತಂಟೆಗೆ ಹೋದರೆ ಅವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಹೇಳಿದೆ.

ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾ ಉಪಾಧ್ಯಕ್ಷ ಬಿ.ಎಸ್. ಸಚ್ಚಿದಾನಂದ ಅವರು, ‘ಕೂಡಲ ಸಂಗಮದೇವ ಅಂಕಿತ ನಾಮ ತಿರುಚಿ ಲಿಂಗದೇವಾ ಎಂಬ ಪದ ಬಳಸಿದ ವಚನಗಳು ಎಲ್ಲಾದರೂ ಕಂಡುಬಂದರೆ ಅಂತಹ ಮುದ್ರಿಕೆಗಳನ್ನು ಮುಟ್ಟುಗೋಲು ಹಾಕಿಕೊಂಡು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಬೇಕು’ ಎಂದು ಸಮಾಜ ಬಾಂಧವರು ಹಾಗೂ ಬಸವ ಭಕ್ತರಲ್ಲಿ ಮನವಿ ಮಾಡಿದರು.

ADVERTISEMENT

‘ಮಾತಾಜಿ ವಚನಗಳನ್ನು ಕಲುಷಿಗೊಳಿಸಿದ್ದಾರೆ. ಅಷ್ಟೇ ಅಲ್ಲ, ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸದಲ್ಲೂ ನಿರತರಾಗಿದ್ದಾರೆ. ಜ್ಞಾನ, ವಿದ್ಯೆ, ಅನ್ನ ದಾಸೋಹದ ಕಾಯಕ ಮಾಡುವುದನ್ನು ಬಿಟ್ಟು ಬಸವಣ್ಣನ ಹೆಸರಿನಲ್ಲಿ ರಿಯಲ್‌ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬಸವಾದಿ ಶರಣರ ಹೆಸರಿನಲ್ಲಿ ಹುಟ್ಟಿಕೊಂಡಿರುವ ನಕಲಿ ಅನುಯಾಯಿಗಳು ಮತ್ತು ಸ್ವಯಂ ಘೋಷಿತ ಪೀಠಾಧಿಪತಿಗಳ ಸಮಾಜ ಘಾತುಕ ಕೃತ್ಯಗಳನ್ನು ಮಹಾಸಭಾ ಎಂದೂ ಸಹಿಸುವುದಿಲ್ಲ’ ಎಂದು ಅವರು ಗುಡುಗಿದರು.

ಕಾರ್ಯದರ್ಶಿ ಜಿ.ಗುರುಬಸಪ್ಪ, ಕೆ.ಎನ್‌.ಜಯಲಿಂಗಪ್ಪ, ಎಚ್.ಎಂ.ರೇಣುಕ ಪ್ರಸನ್ನ, ನಟರಾಜ ಸಾಗರನಹಳ್ಳಿ, ಜಿ.ಎಂ.ಧನಂಜಯ ಅವರು ಇದ್ದರು.

ಎಲ್ಲರೂ ಒಪ್ಪಿದರೆ ‘ಅಖಿಲ ಭಾರತ ಲಿಂಗಾಯತ ಮಹಾಸಭಾ’
‘ಅಖಿಲ ಭಾರತ ವೀರಶೈವ ಮಹಾಸಭಾದ ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ದೊರೆತರೆ ಸಭಾದ ಹೆಸರನ್ನು ಅಖಿಲ ಭಾರತ ಲಿಂಗಾಯತ ಮಹಾಸಭಾ' ಎಂದು ಬದಲಿಸಲು ಸಿದ್ಧ' ಎಂದು ಮಹಾಸಭಾ' ಸ್ಪಷ್ಟಪಡಿಸಿದೆ.

ಈ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚ್ಚಿದಾನಂದ, ‘ಇದರಿಂದ ವೀರಶೈವ ಮಹಾಸಾಭಕ್ಕೆ ಯಾವುದೇ ನಷ್ಟವಿಲ್ಲ. ಉದ್ದೇಶ ಈಡೇರಿದರೆ ಆಯ್ತು’ ಎಂದರು.

ತಜ್ಞರ ಸಮಿತಿ: ‘ಲಿಂಗಾಯತ ಮತ್ತು ವೀರಶೈವ ಪ್ರತಿಪಾದನೆಯ ಎರಡೂ ಬಣಗಳ ತಜ್ಞರ ಸಮಿತಿ ಶೀಘ್ರವೇ ರಚನೆಯಾಗಲಿದೆ. ಈ ಸಮಿತಿಯಲ್ಲಿ 10ರಿಂದ 15 ಜನ ಇರುತ್ತಾರೆ. ಲಿಂಗಾಯತ ಪ್ರತಿಪಾದನೆ ಬಣದಿಂದ ಪಟ್ಟಿ ನಿರೀಕ್ಷೆ ಮಾಡಲಾಗುತ್ತಿದೆ’ ಎಂದರು.

ಇದೇ 24ರಂದು ಕಲಬುರ್ಗಿಯಲ್ಲಿ ನಡೆಯುತ್ತಿರುವ ಲಿಂಗಾಯತ ರ‍್ಯಾಲಿಗೆ ನಮ್ಮ ವಿರೋಧವೇನೂ ಇಲ್ಲ ಎಂದೂ ಅವರು ತಿಳಿಸಿದರು.

ಸಿದ್ದಗಂಗಾ ಶ್ರೀಗಳ ಬಗ್ಗೆ ಕೀಳು ಮಾತು ಸಲ್ಲದು
‘ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳ ಬಗ್ಗೆ ಮಾತೆ ಮಹಾದೇವಿ ಆಡಿರುವ ಮಾತುಗಳು ಕೀಳು ಅಭಿರುಚಿಯಿಂದ ಕೂಡಿವೆ. ಈ ಕುರಿತಂತೆ ಅವರ ವಿರುದ್ಧ ಖಾಸಗಿ ದೂರು ದಾಖಲಿಸಲಾಗುವುದು’ ಎಂದೂ ಸಚ್ಚಿದಾನಂದ ತಿಳಿಸಿದರು.

‘ಶ್ರೀಗಳ ಬಗ್ಗೆ ಮಹಾದೇವಿ ತುಚ್ಛವಾಗಿ ಮಾತನಾಡಿದ್ದಾರೆ. ಶ್ರೀಗಳು ಯಾವತ್ತೂ ಯಾವ ಆಮಿಷಕ್ಕೂ ಒಳಗಾದವರಲ್ಲ. ಬಹುಶಃ ಮಾತೆ ಮಹಾದೇವಿಗೆ ಸ್ಮೃತಿ ಭ್ರಮಣೆ ಆದಂತಿದೆ’ ಎಂದು ಅವರು ಕುಟುಕಿದರು.

*
ನನಗೆ ರಿಯಲ್‌ ಎಸ್ಟೇಟ್‌ ವ್ಯವಹಾರದ ಯಾವುದೇ ಆಸಕ್ತಿ ಇಲ್ಲ. ಈ ರೀತಿಯ ಆರೋಪಗಳು ಹೊಟ್ಟೆಕಿಚ್ಚಿನಿಂದ ಕೂಡಿವೆ.
–ಮಾತೆ ಮಹಾದೇವಿ,
ಬಸವಧರ್ಮ ಪೀಠಾಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.