ಬೆಂಗಳೂರು: ಚೆನ್ನೈನ ಪೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎರಡೂವರೆ ವರ್ಷದ ಮಗುವಿಗೆ ಜೋಡಿಸಲು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಿಂದ ಶುಕ್ರವಾರ ಬೆಳಿಗ್ಗೆ ಜೀವಂತ ಹೃದಯವನ್ನು ರವಾನಿಸಲಾಯಿತು.
ಇದು ಬೆಂಗಳೂರಿನ ಎಂಟು ತಿಂಗಳ ಮಗುವಿನ ಹೃದಯ. ಈ ಮಗುವಿನ ಮಿದುಳು ನಿಷ್ಕ್ರೀಯವಾದ ಹಿನ್ನೆಲೆಯಲ್ಲಿ ಹೃದಯ ದಾನ ಮಾಡಲಾಗುತ್ತಿದೆ.
ಈ ಹೃದಯವನ್ನು ಬೆಂಗಳೂರಿನ ಎಚ್ಎಎಲ್ ಏರ್ಪೋರ್ಟ್ನಿಂದ ವಿಶೇಷ ವಿಮಾನದಲ್ಲಿ ಚೆನ್ನೈಗೆ ಸಾಗಿಸಲಾಯಿತು. ಹೃದಯವನ್ನು ತ್ವರಿತವಾಗಿ ಸಾಗಿಸಲು ಎರಡೂ ನಗರಗಳಲ್ಲಿ ಸಂಚಾರ ಪೊಲೀಸರು ಅಗತ್ಯ ವ್ಯವಸ್ಥೆ ಮಾಡಿಕೊಂಡಿದ್ದರು.
‘ಮಿಡಿಯುತ್ತಿದ್ದ ಹೃದಯ’ ಹೊತ್ತ ಆಂಬುಲೆನ್ಸ್ನ ನಿರಾತಂಕ ಸಂಚಾರಕ್ಕಾಗಿ ರಸ್ತೆಯುದ್ದಕ್ಕೂ ಇತರ ವಾಹನಗಳ ಓಡಾಟ ನಿಯಂತ್ರಿಸಲಾಗಿದ್ದು, ಸಿಗ್ನಲ್ ಮುಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮೊದಲ ಪ್ರಕರಣ
ಕಳೆದ ಏಪ್ರಿಲ್ ತಿಂಗಳಲ್ಲಿ ಇದೇ ರೀತಿ ಮಿದುಳು ನಿಷ್ಕ್ರಿಯಗೊಂಡಿದ್ದ (ಬ್ರೇನ್ ಡೆತ್) ಮಹಿಳೆಯೊಬ್ಬರ ‘ಜೀವಂತ ಹೃದಯ’ವನ್ನು ಬೆಂಗಳೂರಿನಿಂದ ವಿಮಾನದಲ್ಲಿ ಚೆನ್ನೈಗೆ ಸಾಗಿಸಿ ರೋಗಿಯೊಬ್ಬರಿಗೆ ಯಶಸ್ವಿ ಕಸಿ ಮಾಡಲಾಗಿತ್ತು. ಈ ಅಪರೂಪದ ಕೀರ್ತಿಗೆ ಬಿಜಿಎಸ್ ಗ್ಲೋಬಲ್ ಮತ್ತು ಫೋರ್ಟಿಸ್ ಆಸ್ಪತ್ರೆಗಳು ಸಾಕ್ಷಿಯಾಗಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.