ADVERTISEMENT

ಮಳೆ ಅಬ್ಬರ: ಐವರು ಸಾವು

ಕೊಚ್ಚಿ ಹೋದ ಕಾರು, ಸೇತುವೆ * 600 ಕುರಿ ಸಾವು

​ಪ್ರಜಾವಾಣಿ ವಾರ್ತೆ
Published 7 ಜೂನ್ 2017, 19:30 IST
Last Updated 7 ಜೂನ್ 2017, 19:30 IST
ಬಾದಾಮಿ ತಾಲ್ಲೂಕು ಅನವಾಲದ ಹಳ್ಳದಲ್ಲಿ ಕೊಚ್ಚಿಹೋದ ಕಾರು
ಬಾದಾಮಿ ತಾಲ್ಲೂಕು ಅನವಾಲದ ಹಳ್ಳದಲ್ಲಿ ಕೊಚ್ಚಿಹೋದ ಕಾರು   

ಬಾಗಲಕೋಟೆ/ಬಳ್ಳಾರಿ/ಕಲಬುರ್ಗಿ: ಬಿಸಿಲು ಮತ್ತು ಬರದಿಂದ ಬಸವಳಿದು ಹೋಗಿದ್ದ ಹೈದರಾಬಾದ್‌ ಕರ್ನಾಟಕದ ಬಹುತೇಕ ಜಿಲ್ಲೆಗಳು ಮತ್ತು ಬಾಗಲಕೋಟೆ ಜಿಲ್ಲೆಯ ವಿವಿಧೆಡೆ ಮಂಗಳವಾರ ರಾತ್ರಿ ಮತ್ತು ಬುಧವಾರ ಭಾರಿ ಮಳೆಯಾಗಿದೆ.

ಮಳೆ ಸಂಬಂಧಿ ಅವಘಡಗಳಲ್ಲಿ ಐದು ಮಂದಿ ಮೃತಪಟ್ಟಿದ್ದು, ಬೆಳೆ, ಆಸ್ತಿ ಸೇರಿದಂತೆ ಅಪಾರ ನಷ್ಟ ಉಂಟಾಗಿದೆ.

ಬಾದಾಮಿ ತಾಲ್ಲೂಕು ಅನವಾಲ ಬಳಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕಾರು ಕೊಚ್ಚಿ ಹೋಗಿ ಪಕ್ಕದ ಯಂಡಿಗೇರಿಯ ಹೊಳೆಬಸಪ್ಪ ಶಿರಗುಪ್ಪಿ (55), ಯಮನಪ್ಪ ಹಡಪದ (45), ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕು ಕರಡಿಗುಡ್ಡದ ಅಶೋಕ ಸಾತಪ್ಪನವರ (40) ಹಾಗೂ ರುದ್ರಪ್ಪ ಗುರಪ್ಪನವರ (55) ಮೃತಪಟ್ಟಿದ್ದಾರೆ.

ADVERTISEMENT

ಹೊಳೆಬಸಪ್ಪ ಅವರ ಅಣ್ಣನ ಮಗ ಬಸಲಿಂಗಪ್ಪ ಶಿರಗುಪ್ಪಿ (32) ಈಜಿ ಪಾರಾಗಿದ್ದಾರೆ.

ಕಲಬುರ್ಗಿ ಜಿಲ್ಲೆ ಆಳಂದ ತಾಲ್ಲೂಕಿನ ಶಿರೂರು(ಜಿ)–ಗದ್ಲೆಗಾಂವ ಮಾರ್ಗ ಮಧ್ಯದಲ್ಲಿ ಭಾರಿ ಮಳೆಯ ನಡುವೆಯೇ ದುರಸ್ತಿ ಮಾಡಲು ಕಂಬ ಹತ್ತಿದ್ದ ಲೈನ್‌ಮನ್‌ ಅನ್ವರ್‌ಅಲಿ ಮೌಲಾಸಾಬ ನದಾಫ್‌ ಹಡಲಗಿ (21) ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟಿದ್ದಾರೆ.

ತುಳಸಿಗಿರಿ ಕೆರೆ ಕೋಡಿಬಿದ್ದಿದ್ದು, ಇತಿಹಾಸ ಪ್ರಸಿದ್ಧ ಹನುಮಂತ ದೇವರಗುಡಿ ಜಲಾವೃತವಾಗಿದೆ. ಕಲಾದಗಿ ಸುತ್ತಲೂ ಸಾವಿರಾರು ಎಕರೆ ದಾಳಿಂಬೆ, ಚಿಕ್ಕು, ಪೇರಳೆ ತೋಟ, ಕಬ್ಬಿನ ಗದ್ದೆಗಳಲ್ಲಿ ನೀರು ನಿಂತಿದೆ. ಕೆರಕಲಮಟ್ಟಿ– ನೀರಬೂದಿಹಾಳ ರಸ್ತೆಯಲ್ಲಿ ನೂರಾರು ವಿದ್ಯುತ್ ಕಂಬಗಳು ಧರೆಗುರುಳಿವೆ.

600ಕ್ಕೂ ಹೆಚ್ಚು ಕುರಿ ಸಾವು: ಬಳ್ಳಾರಿ ತಾಲ್ಲೂಕಿನಲ್ಲಿ 9 ಗ್ರಾಮಗಳಲ್ಲಿ 600ಕ್ಕೂ ಹೆಚ್ಚು ಕುರಿಗಳು ಸಾವಿಗೀಡಾಗಿವೆ. 57 ಗುಡಿಸಲು ಮತ್ತು ಹಲವು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ.

ಹಳ್ಳಗಳು ಉಕ್ಕಿ ಹರಿದಿದ್ದು, ಮೂರು ಕಡೆ ರಸ್ತೆ –ಸೇತುವೆಗಳಿಗೆ ಹಾನಿಯಾಗಿದೆ. ಕೋಳೂರು–ಮದಿರೆ, ಮದಿರೆ–ಯರ್ರಂಗಳಿಗಿ, ಸೋಮಸಮುದ್ರ–ಯರ್ರಂಗಳಿಗಿ ನಡುವಣ ಸಂಪರ್ಕ ಸೇತುವೆಗಳು ಕೊಚ್ಚಿ ಹೋಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿತ್ತು.

(ಮೊಳಕಾಲ್ಮುರು ತಾಲ್ಲೂಕಿನ ವಿಠಲಾಪುರದಲ್ಲಿ ಮಂಗಳವಾರ ಸುರಿದ ಭಾರೀ ಮಳೆಗೆ ಕೊಚ್ಚಿ ಹೋಗಿರುವ ಬೃಹತ್‌ ಕೃಷಿ ಹೊಂಡ)

ಆಂಧ್ರಕ್ಕೆ ಹರಿದ ನೀರು: ದೇವಸಮುದ್ರದ ಕರಡಿಹಳ್ಳಿ, ತಮ್ಮೇನಹಳ್ಳಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಹಳ್ಳಗಳು ತುಂಬಿ ಹರಿದಿವೆ. ಅಪಾರ ಪ್ರಮಾಣ ನೀರನ್ನು ತಡೆದು ನಿಲ್ಲಿಸಲು ವ್ಯವಸ್ಥೆ ಇರದ ಕಾರಣ ನೀರು ಆಂಧ್ರಕ್ಕೆ ಹರಿದುಹೋಗಿದೆ.

ಗಡಿ ಗ್ರಾಮವಾದ ಆಂಧ್ರದ ಸೋಮಲಾಪುರದಲ್ಲಿ ಕರಡಿಹಳ್ಳಿ ಮೂಲಕ ಸಾಗುವ ಹಳ್ಳಕ್ಕೆ ಅಂದಾಜು 5 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಬೃಹತ್‌ ಚೆಕ್‌ಡ್ಯಾಂ ತುಂಬಿ ಹರಿದಿದೆ. ಇಲ್ಲಿ ಮಳೆಯಾದರೂ ಅನುಕೂಲ ಮಾತ್ರ ಆಂಧ್ರಕ್ಕೆ ಹೆಚ್ಚು ಆಗಿದೆ.

ಬೈಕ್ ಸವಾರ ಪಾರು: ಕಾರು ಕೊಚ್ಚಿ ಹೋಗುವ ಮುನ್ನ, ಅನವಾಲದ ವಿಠ್ಠಲ ಖಾನಾಪುರ ಎಂಬುವವರು ಅದೇ ಸೇತುವೆಯನ್ನು ಬೈಕ್‌ ಮೇಲೆ ದಾಟಲು ಯತ್ನಿಸಿದ್ದು, ನೀರಿನ ಸೆಳೆತಕ್ಕೆ ವಾಹನ ಕೊಚ್ಚಿ ಹೋಗಿದೆ.  ಕಾರಿನಲ್ಲಿದ್ದವರ ರಕ್ಷಣೆಗೆ ಪೊಲೀಸರು ಕಾರ್ಯಾಚರಣೆಗಿಳಿದ ವೇಳೆ ಬೈಕ್ ಪತ್ತೆಯಾಗಿದೆ. ‘ನೋಂದಣಿ ಸಂಖ್ಯೆಯ ಸಹಾಯದಿಂದ ಸವಾರನ ವಿಳಾಸ ಪತ್ತೆ ಮಾಡಿದೆವು. ಅವರು ಈಜಿಕೊಂಡು ಸುರಕ್ಷಿತವಾಗಿ ಮನೆ ಸೇರಿದ್ದು ಗೊತ್ತಾಯಿತು’ಎಂದು ಕೆರೂರು ಪೊಲೀಸರು ತಿಳಿಸಿದರು.

ಚೆನ್ನೈ ವರದಿ: ತಮಿಳುನಾಡಿನ ಬಹುತೇಕ ಕಡೆಗಳಲ್ಲಿ ಮಂಗಳವಾರ ಆರಂಭವಾದ ಮಳೆ ಬುಧವಾರವೂ ಮುಂದುವರಿದಿದೆ. ಮುಂದಿನ 24 ಗಂಟೆಗಳ ಕಾಲ ಮಳೆ ಬೀಳುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು  ಹೇಳಿದ್ದಾರೆ.

ರಾಜಧಾನಿ ಚೆನ್ನೈನಲ್ಲಿ ಸಾಧಾರಣ ಮಳೆಯಾಗಿದ್ದರೂ, ಬಿಸಿ ವಾತಾವರಣ ಮುಂದುವರಿದಿದೆ. ಬುಧವಾರ ನಗರದ ಉಷ್ಣತೆ 42 ಡಿಗ್ರಿ ಸೆಲ್ಸಿಯಸ್‌ಗಳಷ್ಟಿತ್ತು.

ಉಳಿದಂತೆ ಉತ್ತರ ಮತ್ತು ದಕ್ಷಿಣ ತಮಿಳುನಾಡಿನಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಭಾರಿ ಮಳೆಯಾಗಿದೆ.

ಕೊಚ್ಚಿ ಹೋದ ಸೇತುವೆ:  ಬಾಗಲಕೋಟೆ ತಾಲ್ಲೂಕಿನ ಕಲಾದಗಿ ಬಳಿ ಹೆರಕಲ್‌ ಏತ ನೀರಾವರಿ ಯೋಜನೆಯ ಮುಖ್ಯ ಕಾಲುವೆ ಮೇಲಿನ ಸೇತುವೆ ಕೊಚ್ಚಿ ಹೋಗಿದೆ.

ಇದರಿಂದ ಬಾಗಲಕೋಟೆ– ಕಲಾದಗಿ ಹಳೆ ರಸ್ತೆ ಸಂಪರ್ಕ ಕಡಿದುಹೋಗಿದೆ. ₹100 ಕೋಟಿ ವೆಚ್ಚದಲ್ಲಿ  ಕೃಷ್ಣಾ ಭಾಗ್ಯ ಜಲನಿಗಮ ನಿರ್ಮಿಸಿದ್ದ ಹೆರಕಲ್‌ ಏತ ನೀರಾವರಿ ಯೋಜನೆ ಕಳೆದ ಸೆಪ್ಟೆಂಬರ್‌ನಲ್ಲಿ ಉದ್ಘಾಟನೆಗೊಂಡಿತ್ತು.

ರಾತ್ರಿ ಕಳೆದು ಬೆಳಗಾಗುವುದರಲ್ಲಿ ಕಲಾದಗಿ ಸಮೀಪದ ಕಳಸಕೊಪ್ಪ, ತುಳಸಿಗಿರಿ, ನೀರಬೂದಿಹಾಳದ ಕೆರೆಗಳು ಭರ್ತಿಯಾಗಿವೆ.

(ಬಳ್ಳಾರಿ ತಾಲ್ಲೂಕಿನ ಕುರುಗೋಡು ಸಮೀಪದ ಮದಿರೆ –ಕೋಳೂರು ನಡುವಣ ರಸ್ತೆ–ಸೇತುವೆಯು ಮಳೆಯ ನೀರಿನ ರಭಸಕ್ಕೆ  ಕೊಚ್ಚಿಹೋಗಿದೆ)

ಒಂದೇ ರಾತ್ರಿಯಲ್ಲಿ 27 ಸೆಂ.ಮೀ ಮಳೆ

ಕಲಾದಗಿ ಹೋಬಳಿಯಲ್ಲಿ ಕಳೆದ 10 ವರ್ಷಗಳಲ್ಲಿಯೇ ದಾಖಲೆ ಪ್ರಮಾಣದ ಮಳೆ ಮಂಗಳವಾರ ರಾತ್ರಿ ಸುರಿದಿದೆ. 2007ರ ಜೂನ್‌ನಲ್ಲಿ ಇಡೀ ತಿಂಗಳು 15.22 ಸೆಂ.ಮೀ ಮಳೆಯಾಗಿತ್ತು. ಆದರೆ ಈಗ ಒಂದೇ ರಾತ್ರಿ 27.2 ಸೆಂ.ಮೀ ಮಳೆ   ಸುರಿದಿದೆ ಎಂದು ತಹಶೀಲ್ದಾರ್ ವಿನಯ ಕುಲಕರ್ಣಿ ತಿಳಿಸಿದ್ದಾರೆ.

ಮೊಳಕಾಲ್ಮುರು ತಾಲ್ಲೂಕಿನ ದೇವಸಮುದ್ರ ಹೋಬಳಿಯಲ್ಲಿಯೂ ಮಂಗಳವಾರ ರಾತ್ರಿ ಭಾರಿ ಮಳೆಯಾಗಿದೆ. ಸುಮಾರು  70 ಮಿ.ಮೀ. ಮಳೆ ಸುರಿದಿದ್ದು ಇದು ದಶಕದಲ್ಲೇ ಹೆಚ್ಚಿನ ಮಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಲಕಿ ದುರ್ಮರಣ
ಬಳ್ಳಾರಿ ಜಿಲ್ಲೆಯ ಕುರುಗೋಡು ಸಮೀಪದ ಎಚ್. ವೀರಾಪುರ ಗ್ರಾಮದಲ್ಲಿ ಮಳೆ ಸುರಿದ ಸಂದರ್ಭದಲ್ಲಿ ಹಾವೊಂದು ಮನೆಗೆ ನುಗ್ಗಿ, 10 ವರ್ಷದ ಬಾಲಕಿ ಬಸಮ್ಮಳಿಗೆ ಕಚ್ಚಿದೆ.

ರಾತ್ರಿ 2 ಗಂಟೆ ವೇಳೆಗೆ ಬಾಲಕಿಯನ್ನು ಕುರುಗೋಡು ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಕರೆ ತರಲಾಯಿತು. ಅಲ್ಲಿ ವೈದ್ಯರಿಲ್ಲದ ಕಾರಣ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಬಾಲಕಿ ಮೃತಪಟ್ಟಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.