ADVERTISEMENT

ಮಹದಾಯಿ ವಿಚಾರದಲ್ಲಿ ಪರಿಕ್ಕರ್ – ಯಡಿಯೂರಪ್ಪ ರಾಜಕೀಯ ನಾಟಕವಾಡುತ್ತಿದ್ದಾರೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2017, 8:37 IST
Last Updated 28 ಡಿಸೆಂಬರ್ 2017, 8:37 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಶಿರಾ: ‘ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ರಾಜಕೀಯ ನಾಟಕವಾಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ತುಮಕೂರಿನ ಶಿರಾದಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ಮಹದಾಯಿ ವಿವಾದ ಮಾತುಕತೆ ಮೂಲಕವೇ ಬಗೆಹರಿಯಬೇಕು. ಮಾತುಕತೆಗೆ ಕರ್ನಾಟಕ ಸರ್ಕಾರ ತಯಾರಿದೆ. ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಿ ವಿವಾದ ಬಗೆಹರಿಸಲಿ. ಡಿ.15 ಕ್ಕೆ ರೈತರಿಗೆ ಸಿಹಿ ಸುದ್ದಿ ಕೊಡುವೆ ಎಂದು ಯಡಿಯೂರಪ್ಪ ಹೇಳಿದ್ದರು. ಆದರೆ, ಕೊಡಲಿಲ್ಲ. ಇದರಿಂದ ರೈತರಿಗೆ ನಿರಾಸೆಯಾಗಿದೆ’ ಎಂದರು.

‘ಮನೋಹರ್ ಪರಿಕ್ಕರ್ ಮತ್ತು ಯಡಿಯೂರಪ್ಪ ಇಬ್ಬರು ಸೇರಿಕೊಂಡು ನದಿ ನೀರಿನ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಹಾಗೆಂದು ಗೋವಾದ ನೀರಾವರಿ ಸಚಿವರೇ ಹೇಳಿದ್ದಾರೆ. ವಿವಾದ ಬಗೆಯಲು ನಾನೇ ಗೋವಾಗೆ ಬಂದು ಮಾತನಾಡುತ್ತೇನೆ ಎಂದು ಪರಿಕ್ಕರ್‌ ಅವರಿಗೆ ಪತ್ರ ಬರೆದಿದ್ದೆ. ಆದರೆ, ಚುನಾವಣೆ ನಂತರ ಬನ್ನಿ ಎಂದು ಪರಿಕ್ಕರ್ ಹೇಳಿದ್ದಾರೆ.  ಪರಿಕ್ಕರ್ ಮತ್ತು ಯಡಿಯೂರಪ್ಪ ಈ ಇಬ್ಬರಿಂದ ರೈತರು ಮೋಸಹೋಗಿ ಈಗ ಚಳುವಳಿ ಮಾಡುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

‘ನನಗೆ ರಾಜಕೀಯದಲ್ಲಿ 40 ವರ್ಷಕ್ಕೂ ಹೆಚ್ಚು ಅನುಭವ ಇದೆ. ಒಂದು ಪಕ್ಷ ಇನ್ನೊಂದು ಪಕ್ಷದ ಕಚೇರಿ ಎದುರು ಪ್ರತಿಭಟನೆ ನಡೆಸಿರುವುದು ಇದೇ ಮೊದಲು. ತಪ್ಪು ಮಾಡಿ ಸಿಕ್ಕಿಹಾಕಿಕೊಂಡ ಯಡಿಯೂರಪ್ಪ ಈಗ ಜನರ ಗಮನ ಬೇರೆಡೆಗೆ ಹರಿಸಲು ಯತ್ನಿಸುತ್ತಿದ್ದಾರೆ. ವಿವಾದ ಇತ್ಯರ್ಥಕ್ಕೆ ನಮ್ಮ ಸರ್ಕಾರ ಸಿದ್ಧವಿದೆ. ಮಾತುಕತೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಆಸಕ್ತಿ ವಹಿಸಬೇಕು. ಸದಾಶಿವ ಆಯೋಗ ಜಾರಿಗೆ ಪರ– ವಿರೋಧ ಅಭಿಪ್ರಾಯಗಳಿವೆ. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಭೆ ಕರೆದಿದ್ದೇವೆ’ ಎಂದರು.

ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧೆ
ಹೆಬ್ಬಾಳ ಕ್ಷೇತ್ರದಿಂದ ಚುನಾವಣೆಗೆ ಸ್ಫರ್ಧಿಸುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ನಾನು ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಬೇರೆ ಯಾವ ಕ್ಷೇತ್ರಕ್ಕೂ ಹೊಗುವುದಿಲ್ಲ.ನನಗೆ ಟಿಕೆಟ್ ನೀಡುವುದು ರಾಹುಲ್ ಗಾಂಧಿಯವರೇ ಹೊರತು ವದಂತಿ ಹಬ್ಬಿಸುವವರಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.