ADVERTISEMENT

ಮಹಾಕಾವ್ಯದೆಡೆಗಿನ ಅಸಹನೆಗೆ ಆಕ್ರೋಶ

ವಿಶಾಲಾಕ್ಷಿ
Published 24 ಜನವರಿ 2016, 19:51 IST
Last Updated 24 ಜನವರಿ 2016, 19:51 IST
ಧಾರವಾಡ ಸಾಹಿತ್ಯ ಸಂಭ್ರಮದ ಕೊನೆಯ ದಿನವಾದ ಭಾನುವಾರ ನಡೆದ ‘ಕನ್ನಡದಲ್ಲಿ ಇಷ್ಟು ಮಹಾಕಾವ್ಯಗಳು ಏಕೆ?’ ಗೋಷ್ಠಿಯಲ್ಲಿ ಭಾಗವಹಿಸಿದ್ದ ಎಚ್‌.ಎಸ್. ವೆಂಕಟೇಶಮೂರ್ತಿ, ಸಿ.ಎನ್‌. ರಾಮಚಂದ್ರನ್‌, ಲತಾ ರಾಜಶೇಖರ ಮತ್ತು ಧರಣಿದೇವಿ ಮಾಲಗತ್ತಿ
ಧಾರವಾಡ ಸಾಹಿತ್ಯ ಸಂಭ್ರಮದ ಕೊನೆಯ ದಿನವಾದ ಭಾನುವಾರ ನಡೆದ ‘ಕನ್ನಡದಲ್ಲಿ ಇಷ್ಟು ಮಹಾಕಾವ್ಯಗಳು ಏಕೆ?’ ಗೋಷ್ಠಿಯಲ್ಲಿ ಭಾಗವಹಿಸಿದ್ದ ಎಚ್‌.ಎಸ್. ವೆಂಕಟೇಶಮೂರ್ತಿ, ಸಿ.ಎನ್‌. ರಾಮಚಂದ್ರನ್‌, ಲತಾ ರಾಜಶೇಖರ ಮತ್ತು ಧರಣಿದೇವಿ ಮಾಲಗತ್ತಿ   

ಧಾರವಾಡ: ಮಹಾಕಾವ್ಯದ ಬಗೆಗಿನ ಅಸಮ್ಮತಿಯ ನಿಲುವುಗಳನ್ನು ಖಂಡಿಸುತ್ತಲೇ ಅದರ ಪ್ರಸ್ತುತತೆಯನ್ನು ಸಮರ್ಥಿಸಿಕೊಳ್ಳುವಲ್ಲಿ ಭಾನುವಾರ ಸಾಹಿತ್ಯ ಸಂಭ್ರಮದಲ್ಲಿ ನಡೆದ ‘ಕನ್ನಡದಲ್ಲಿ ಇಷ್ಟು ಮಹಾಕಾವ್ಯಗಳು ಏಕೆ?’ ಗೋಷ್ಠಿ ಯಶಸ್ವಿಯಾಯಿತು.

ಮಹಾಕಾವ್ಯ ಪರಂಪರೆಯನ್ನು ಛೇದಿಸುವ ಪ್ರಯತ್ನವಾಗಿ ನಡೆದ ಅನೇಕ ಚಳವಳಿಗಳನ್ನು ಪ್ರಸ್ತಾಪಿಸಿದ ಗೋಷ್ಠಿಯ ನಿರ್ದೇಶಕ ಎಚ್.ಎಸ್. ವೆಂಕಟೇಶಮೂರ್ತಿ, ‘ಯಾರೂ ಗಮನಿಸದ ಈ ಪ್ರಕಾರದ ಬಗ್ಗೆ ಒಲವೇಕೆ’ ಎಂಬ ಪ್ರಶ್ನೆಯನ್ನು ಮುಂದುಮಾಡಿ, ಚರ್ಚೆಗೆ ಮುನ್ನುಡಿ ಬರೆದರು.

ಇದಕ್ಕೆ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದ ಸಿ.ಎನ್. ರಾಮಚಂದ್ರನ್, ‘ಯಾರೂ ಗಮನಿಸುವುದಿಲ್ಲ ಎಂದು ಗೊತ್ತಾಗುವುದು ಹೇಗೆ? ನಾವೊಬ್ಬರು ಓದಿಲ್ಲವೆಂದರೆ ಯಾರೂ ಓದಿಲ್ಲವೆಂದು ಅರ್ಥವೇ? ಎಲಿಯಟ್, ಎಡ್ಗರ್ ಅಲನ್ ಯಾವುದೋ ಕಾಲಘಟ್ಟದಲ್ಲಿ ಹೇಳಿದ ಮಾತಿಗೆ ಈಗಲೂ ಜೋತುಬೀಳುವ ಅವಶ್ಯಕತೆ ಏನು?’ ಎಂದು ತರಾಟೆಗೆ ತೆಗೆದುಕೊಂಡರು.

ಯಾವುದೊಂದು ಸಾಹಿತ್ಯ ಪ್ರಕಾರವೂ ಬದುಕುವುದಿಲ್ಲ; ಸಾಯುವುದೂ ಇಲ್ಲ ಎಂದ ಅವರು, ಇನ್ನೂ ನೂರು ವರ್ಷಗಳ ನಂತರದಲ್ಲೂ ಮಹಾಕಾವ್ಯಗಳಿಗೆ ಸಾವಿಲ್ಲ. ಅಂಥದೊಂದು ಪರಂಪರೆ ಇಲ್ಲಿದೆ ಎಂದರು.

ಆಧುನಿಕ ಕಾಲದ ಸಾಹಿತ್ಯ ಎದುರಿಸಿದ ಎಲ್ಲ ಪ್ರಶ್ನೆಗಳನ್ನು ಎದುರಿಸಿದ ಮುದ್ದಣನ ರಾಮಾಶ್ವಮೇಧ, ರಾಮನ ಅವತಾರ ಕಲ್ಪನೆಯನ್ನು ತಿರಸ್ಕರಿಸಿದ ಕುವೆಂಪು ಅವರ ಶ್ರೀರಾಮಾಯಣದರ್ಶನಂ, ಪಾನ ನಿಷೇಧ, ಸಮಾನ ಅವಕಾಶಗಳನ್ನು ಪ್ರತಿಪಾದಿಸುವ ಎಂ.ವೀರಪ್ಪ ಮೊಯಿಲಿ ಅವರ ‘ಶ್ರೀರಾಮಾಯಣ ಮಹಾನ್ವೇಷಣಂ’ ಹೀಗೆ ಪ್ರತಿಯೊಂದು ಮಹಾಕಾವ್ಯಕ್ಕೂ ತನ್ನದೇ ಆದ ಮಹತ್ವವಿದೆ, ಪ್ರಸ್ತುತತೆ ಇದೆ ಎಂದು ಪ್ರತಿಪಾದಿಸಿದರು.

ನಂತರ ಲತಾ ರಾಜಶೇಖರ ಅವರಿಗೆ ತಮ್ಮ ಮಹಾಕಾವ್ಯದ ಭಾಗವೊಂದನ್ನು ಓದುವಂತೆ ಕೋರಿದ ವೆಂಕಟೇಶಮೂರ್ತಿ, ಹರಿಶ್ಚಂದ್ರ ಕಾವ್ಯದಂತೆ ಈಗಿನ ಮಹಾಕಾವ್ಯದ ಓದು ಪರಿಣಾಮ ಬೀರೀತೇ? ಎಂಬ ಅನುಮಾನವನ್ನು ವೇದಿಕೆಯ ಮುಂದಿಟ್ಟರು. ತಮ್ಮ ‘ಶ್ರೀರಾಮದರ್ಶನ’ದ ಮೊದಲ ಸೋಪಾನದ ‘ಮಿಥ್ಯೆಯಾಗಲಹುದೇ ಸತ್ಯವ್ರತನ ವಚನ..’ ಎಂಬ ಭಾಗವನ್ನು  ಅವರು ಪ್ರಸ್ತುತಪಡಿಸಿದ ಲತಾ, ಮಹಾಕಾವ್ಯ ರಚನೆಯ ಸಂದರ್ಭದಲ್ಲಿ ಎದುರಿಸಿದ ಸವಾಲು, ಸಂಕಟಗಳನ್ನು ಹಂಚಿಕೊಂಡರು.

ಗೋಷ್ಠಿಯ ಪ್ರಶ್ನೆಯಲ್ಲಿಯೇ ವಿಲಕ್ಷಣತೆ, ಅಸಹನೆ, ವಿಚಾರಣೆಯ ಧ್ವನಿಯನ್ನು ಗುರುತಿಸಿದ ಧರಣಿದೇವಿ ಮಾಲಗತ್ತಿ, ಮಹಾಕಾವ್ಯವೊಂದು ಇಂದಿಗೂ ಸಲ್ಲಬಹುದಾದ ಬಗೆಯನ್ನು ಬಿಡಿಸಿಟ್ಟರು. ಮಹಿಳಾ ಅಧ್ಯಯನದಿಂದ ತಮಗೆ ದಕ್ಕಿದ ಅನುಭವ ಮತ್ತು ಕಾಣದ ದೃಶ್ಯ, ಕೇಳದ ದನಿಗಳನ್ನು ಪುರಾಣ ಕಥೆಯ ಚೌಕಟ್ಟಿನೊಳಗೆ ತಮ್ಮ ‘ಇಳಾಭಾರತಂ’ದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾಗಿ ಹೇಳಿದರು. ಮಹಾಕಾವ್ಯವೊಂದು ಹೀಗೆ ಇರಬೇಕು, ಇರಬಾರದು ಎಂಬ ನಿಯಮಗಳು ಬೇಕೇಬೇಕು ಎನ್ನುವುದಾದರೆ ಅದಕ್ಕೊಂದು ಸಾಫ್ಟ್‌ವೇರ್ ರೂಪಿಸಬಹುದೇನೋ. ಆದರೆ ಅದು ಸಾಧ್ಯವೂ ಇಲ್ಲ, ಸಾಧುವೂ ಅಲ್ಲ ಎಂದರು.

ತಮ್ಮ ‘ಇಳಾಭಾರತಂ’ದ ವಿಶ್ವಾಮಿತ್ರ-ಮೇನಕೆ, ಪರಾಶರ-ಸತ್ಯವತಿ ಪ್ರಸಂಗಗಳನ್ನು ವಾಚಿಸಿದ ಅವರು, ಎಲ್ಲ ಮಹಾಕಾವ್ಯಗಳು ಆಯಾ ಕಾಲಘಟ್ಟದಲ್ಲಿ ಯಾರಿಗೆ ಏನು ಬೇಕು ಎಂಬುದನ್ನೇ ಹೇಳಿವೆ. ಈ ಕಾಲದ ಮಹಿಳಾ ಅಭಿವ್ಯಕ್ತಿಯಾಗಿ ತಮ್ಮ ಕಾವ್ಯ ಬಂದಿದ್ದು, ಅದು ಸಹೃದಯರಿಗಲ್ಲದೇ ಅದರ ಬಗೆಗೆ ಅಘೋಷಿತ ನಿರ್ಬಂಧವನ್ನು ಹೇರಿಕೊಂಡವರಿಗಲ್ಲ ಎಂದು ಸ್ಪಷ್ಟಪಡಿಸಿದರು.

ಗಾತ್ರ, ಛಂದೋಬದ್ಧ ವಿಲಾಸವಿದ್ದ ಮಾತ್ರಕ್ಕೆ ಮಹಾಕಾವ್ಯ ಎನ್ನಲಾಗದು. ಸಮಗ್ರ ಜೀವನ ದರ್ಶನದಿಂದ ಮಾತ್ರವೇ ಅದು ಮಹಾಕಾವ್ಯವಾಗುವ ಅರ್ಹತೆ ಪಡೆಯುತ್ತದೆ. ಈಗಿನ ಕಾವ್ಯಗಳಿಂದ ಅದು ಸಾಧ್ಯವಾಗಿದ್ದೇ ಆದಲ್ಲಿ ಅವು ಖಂಡಿತ ಮಹಾಕಾವ್ಯಗಳು ಎಂದು ವೆಂಕಟೇಶ ಮೂರ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.