ADVERTISEMENT

ಮುಖ್ಯಮಂತ್ರಿಯಾಗಲು ವಯಸ್ಸು ಅಡ್ಡಿ ಅಲ್ಲ:ಬಿಎಸ್‌ವೈ

‘ಸರ್ಕಾರ ರಚನೆ ಹೊತ್ತಿಗೆ ನಾನು 75ನೇ ವರ್ಷಕ್ಕೆ ಕಾಲಿಡಲಿದ್ದೇನೆ’

​ಪ್ರಜಾವಾಣಿ ವಾರ್ತೆ
Published 27 ಮೇ 2017, 19:30 IST
Last Updated 27 ಮೇ 2017, 19:30 IST
ಮುಖ್ಯಮಂತ್ರಿಯಾಗಲು ವಯಸ್ಸು ಅಡ್ಡಿ ಅಲ್ಲ:ಬಿಎಸ್‌ವೈ
ಮುಖ್ಯಮಂತ್ರಿಯಾಗಲು ವಯಸ್ಸು ಅಡ್ಡಿ ಅಲ್ಲ:ಬಿಎಸ್‌ವೈ   
ಬೆಂಗಳೂರು: ‘ಮುಖ್ಯಮಂತ್ರಿ ಯಾಗಲು ವಯಸ್ಸು ಅಡ್ಡಿ ಬರುವುದಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.
 
ಬೆಂಗಳೂರು ಪ್ರೆಸ್‌ಕ್ಲಬ್‌ ಹಾಗೂ ವರದಿಗಾರರ ಕೂಟ ಜಂಟಿಯಾಗಿ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಈಗ ನನಗೆ 74  ವರ್ಷ.
 
ಸರ್ಕಾರ ರಚಿಸುವ ಹೊತ್ತಿಗೆ 75ಕ್ಕೆ ಕಾಲಿಡಲಿದ್ದೇನೆ. ನನ್ನನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ನರೇಂದ್ರ ಮೋದಿ, ಅಮಿತ್ ಷಾ ಈಗಾಗಲೇ ಘೋಷಿಸಿದ್ದಾರೆ. ಈ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ’ ಎಂದು ಹೇಳಿದರು.
 
‘150 ಸ್ಥಾನಗಳನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ನನಗೆ ವಹಿಸಿದಾಗಲೇ ಅಮಿತ್‌ ಷಾ ಇದನ್ನು ಸ್ಪಷ್ಟಪಡಿಸಿದ್ದಾರೆ. 75 ವರ್ಷ ಮೀರಿದ
ವರು ಯಾವುದೇ ಹುದ್ದೆಯಲ್ಲಿರಬಾರದು ಎಂಬ ಪಕ್ಷದ ನಿಯಮ ಕರ್ನಾಟಕಕ್ಕೆ ಅನ್ವಯಿಸುವುದಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.
 
‘ತಮ್ಮ ವಿರುದ್ಧ ವಿನಾಕಾರಣ ಮಾಡಿದ ಭ್ರಷ್ಟಾಚಾರ ಆರೋಪಗಳಿಂದ ಮುಕ್ತನಾಗಿದ್ದೇನೆ. ಹೀಗಾಗಿ ಮುಖ್ಯಮಂತ್ರಿಯಾಗಲು ಈ ಪ್ರಕರಣ
ಗಳೂ ಅಡ್ಡಿ ಬರುವುದಿಲ್ಲ. ರಾಜ್ಯವನ್ನು ಆಳಿದ ಎಲ್ಲ ಮುಖ್ಯಮಂತ್ರಿಗಳು ಡಿನೋಟಿಫಿಕೇಶನ್‌ ಮಾಡಿದ್ದಾರೆ. ನಾನೊಬ್ಬನೇ ಮಾಡಿಲ್ಲ. ಡಿನೋಟಿಫಿ
ಕೇಶನ್‌ ಸಂಬಂಧ ಎರಡು ಪ್ರಕರಣಗಳು ಮಾತ್ರ ಇತ್ಯರ್ಥಕ್ಕೆ ಬಾಕಿ ಇವೆ’ ಎಂದು ಹೇಳಿದರು. 
 
ಒಳಜಗಳವಿಲ್ಲ: ‘ಪಕ್ಷದಲ್ಲಿ ಸಣ್ಣಪುಟ್ಟ ವ್ಯತ್ಯಾಸವಿದೆ ವಿನಃ ಒಳಜಗಳ ಇಲ್ಲ’ ಎಂದು ಯಡಿಯೂರಪ್ಪ ಹೇಳಿದರು. ‘ರಾಜ್ಯ ಪ್ರವಾಸದಲ್ಲಿ ಎಲ್ಲ ನಾಯಕರೂ ಒಟ್ಟಾಗಿ ಪಾಲ್ಗೊಳ್ಳುತ್ತಿಲ್ಲವಲ್ಲ’ ಎಂಬ ಪ್ರಶ್ನೆಗೆ, ಪ್ರವಾಸ ಆರಂಭದ ದಿನ ಒಗ್ಗಟ್ಟು ಪ್ರದರ್ಶನ ಮಾಡಿದ್ದೆವು.

ಕೇಂದ್ರ ಸಚಿವರು ವಾರದಲ್ಲಿ ಮೂರು ದಿನ ಪಾಲ್ಗೊಳ್ಳುವುದಾಗಿ ಹೇಳಿದ್ದರು. ವಿರೋಧ ಪಕ್ಷದ ನಾಯಕರಿಗೆ ಅವರದ್ದೇ ಆದ ಕೆಲಸಗಳಿವೆ. ತಮ್ಮ ಎಲ್ಲ ಕೆಲಸ
ವನ್ನೂ ಬಿಟ್ಟು ಪ್ರವಾಸಕ್ಕೆ ಬರಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ’ ಎಂದರು.
 
ಮಹಾದಾಯಿಗೆ ನೇತೃತ್ವ: ‘ಮಹಾದಾಯಿ ವಿಷಯದಲ್ಲಿ ರಾಜ್ಯಕ್ಕೆ ನ್ಯಾಯ ಕೊಡಿಸಲು ಗೋವಾ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳನ್ನು ಒಪ್ಪಿಸುವ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳುತ್ತೇನೆ. ಅಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ ನಾಯಕರನ್ನು ಒಪ್ಪಿಸುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಸೋನಿಯಾಗಾಂಧಿ, ರಾಹುಲ್ ಗಾಂಧಿ ವಹಿಸಿಕೊಳ್ಳಲಿ’ ಎಂದು ಯಡಿಯೂರಪ್ಪ ಹೇಳಿದರು.
****
‘ಮಂತ್ರಿಗಳಿಗೆ ದರಿದ್ರ ಬಂದಿದೆಯೇ?’

ರಾಜ್ಯದ ಯಾವುದೇ ಗೋಶಾಲೆಗಳಲ್ಲಿ 5 ಕೆ.ಜಿ. ಮೇವು ಸಂಗ್ರಹವಿಲ್ಲ, ರೈತರಿಗೆ ಊಟದ ವ್ಯವಸ್ಥೆ ಇಲ್ಲ. ಈ ವ್ಯವಸ್ಥೆ ಮಾಡಬೇಕಾದ ಮಂತ್ರಿಗಳಿಗೆ ದರಿದ್ರ ಬಂದಿದೆಯೇ’ ಎಂದು ಯಡಿಯೂರಪ್ಪ ಪ್ರಶ್ನಿಸಿದರು.

‘ಜಾನುವಾರುಗಳನ್ನು ಗೋಶಾಲೆ ಬಿಟ್ಟು, ಮತ್ತೆ ಕರೆದೊಯ್ಯಲು ಅಲ್ಲಿಗೆ ಬರಬೇಕಾದ ದಯನೀಯ ಸ್ಥಿತಿ ಯನ್ನು ರೈತರು ಅನುಭವಿಸುತ್ತಿದ್ದಾರೆ.  ರೈತರ ಬಗ್ಗೆ ಸರ್ಕಾರಕ್ಕೆ ಕಳಕಳಿಯೂ ಇಲ್ಲ, ಸೌಲಭ್ಯ ಕಲ್ಪಿಸುವ ಯೋಗ್ಯತೆಯೂ ಇಲ್ಲ’ ಎಂದು ಜರಿದರು.

****
ಜುಲೈ ತಿಂಗಳ ಒಳಗೆ ರೈತರ ಸಾಲಮನ್ನಾ ಮಾಡದೇ ಇದ್ದರೆ ಮೂರು ಲಕ್ಷ ರೈತರನ್ನು ಬೆಂಗಳೂರಿಗೆ ಕರೆತಂದು ಪ್ರತಿಭಟನೆ ನಡೆಸುತ್ತೇನೆ
ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT