ADVERTISEMENT

ಮುಳ್ಳುಹಂದಿಯ ಮುಳ್ಳು ಚುಚ್ಚಿ ಹುಲಿ ಸಾವು

​ಪ್ರಜಾವಾಣಿ ವಾರ್ತೆ
Published 22 ಜನವರಿ 2017, 19:30 IST
Last Updated 22 ಜನವರಿ 2017, 19:30 IST
ನಿಟ್ಟೂರಿನ ಲಕ್ಷ್ಮಣತೀರ್ಥ ಹೊಳೆ ಕೆರೆಯಲ್ಲಿ ಭಾನುವಾರ ಮೃತಪಟ್ಟ ಹುಲಿಯ ದವಡೆಯಲ್ಲಿ ಮುಳ್ಳುಹಂದಿಯ ಮುಳ್ಳು ಚುಚ್ಚಿಕೊಂಡಿರುವುದು
ನಿಟ್ಟೂರಿನ ಲಕ್ಷ್ಮಣತೀರ್ಥ ಹೊಳೆ ಕೆರೆಯಲ್ಲಿ ಭಾನುವಾರ ಮೃತಪಟ್ಟ ಹುಲಿಯ ದವಡೆಯಲ್ಲಿ ಮುಳ್ಳುಹಂದಿಯ ಮುಳ್ಳು ಚುಚ್ಚಿಕೊಂಡಿರುವುದು   
ಗೋಣಿಕೊಪ್ಪಲು: ಇಲ್ಲಿಗೆ ಸಮೀಪದ ಮಲ್ಲೂರಿನಲ್ಲಿ ಮೂರು ದಿನಗಳ ಹಿಂದೆ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿದ್ದ ಹುಲಿ, ಮುಳ್ಳುಹಂದಿಯ ಮುಳ್ಳುಚುಚ್ಚಿ ಸತ್ತಿರುವುದು ಭಾನುವಾರ ಬೆಳಕಿಗೆ ಬಂದಿದೆ.
 
ನಿಟ್ಟೂರು ಗ್ರಾಮದಲ್ಲಿರುವ ಲಕ್ಷ್ಮಣತೀರ್ಥ ಹೊಳೆ ಕೆರೆ ಪೈಸಾರಿ ಜಾಗದಲ್ಲಿ ಭಾನುವಾರ ಹುಲಿಯ ಕಳೆಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
 
ಅಂದಾಜು 9ರಿಂದ 10 ವರ್ಷದ ಗಂಡುಹುಲಿಯ ಮುಖದ ತುಂಬ ಗಾಯವಾಗಿದ್ದು, ಮುಖದಲ್ಲಿ ಮುಳ್ಳುಹಂದಿಯ ಮುಳ್ಳೊಂದು ಚುಚ್ಚಿಕೊಂಡೇ ಇತ್ತು ಎಂದು ಮತ್ತಿಗೋಡು ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಕಿರಣ್‌ಕುಮಾರ್‌ ತಿಳಿಸಿದ್ದಾರೆ.
 
‘ಮುಳ್ಳುಹಂದಿಯನ್ನು ಹಿಡಿಯಲು ಹೋದ ವೇಳೆ ಅದರ ಮುಳ್ಳು ಮುಖಕ್ಕೆ ಚುಚ್ಚಿಕೊಂಡಿರಬಹುದು’ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಹುಣಸೂರು ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಉಮಾಶಂಕರ್ ಹೇಳಿದರು.
 
‘ಹುಲಿ ಗಾಯಗೊಂಡಿದ್ದರಿಂದ ಪ್ರಾಣಿಗಳನ್ನು ಬೇಟೆಯಾಡಲು ಸಾಧ್ಯವಾಗದೆ ಅರಣ್ಯದಿಂದ ಹೊರಬಂದು ಜಾನುವಾರು ಬೇಟೆಯಲ್ಲಿ ತೊಡಗಿತ್ತು. ಶುಕ್ರವಾರ ಮಲ್ಲೂರಿನಲ್ಲಿ ಕಾರ್ಮಿಕನೊಬ್ಬನ ಮೇಲೆ ದಾಳಿ  ಮಾಡಿದ ಹುಲಿ ಇದೇ ಎಂಬುದು ಖಚಿತವಾಗಿದೆ’ ಎಂದು ಅವರು ಹೇಳಿದರು.
 
ಸಿಸಿಎಫ್ ಮನೋಜಕುಮಾರ್, ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಮಣಿಕಂಠ, ತಿತಿಮತಿ ವಲಯ ಅರಣ್ಯಾಧಿಕಾರಿ ಗೋಪಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಒಂದೇ ವಾರದಲ್ಲಿ ನಿಟ್ಟೂರು, ಕಾನೂರು ವ್ಯಾಪ್ತಿಯಲ್ಲಿ ಎರಡು ಹುಲಿಗಳು ಮೃತಪಟ್ಟಿವೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.