ADVERTISEMENT

ಮೆಟ್ರೊ: ಕನ್ನಡಿಗ ನೌಕರರಿಗೆ ಕಿರುಕುಳ ಆರೋಪ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2017, 20:14 IST
Last Updated 23 ನವೆಂಬರ್ 2017, 20:14 IST

ಬೆಳಗಾವಿ: ‘ಬೆಂಗಳೂರಿನ ಮೆಟ್ರೊ ರೈಲು ನಿಗಮದಲ್ಲಿ ಕನ್ನಡಿಗ ನೌಕರರಿಗೆ ಕಿರುಕುಳ ನೀಡಲಾಗುತ್ತಿದೆ’ ಎಂದು ಜೆಡಿಎಸ್‌ನ ಸದಸ್ಯ ಆರ್‌. ಚೌಡರೆಡ್ಡಿ ಆರೋಪಿಸಿದರು.

‘ಸರಿಯಾಗಿ ರಜೆ ನೀಡುತ್ತಿಲ್ಲ. ನೌಕರರೊಬ್ಬರು ತಮ್ಮ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ರಜೆ ಕೇಳಿದರೂ ನೀಡಲಿಲ್ಲ. ಹೇಳಿ ಹೋಗಿದ್ದರೂ, ಅನಧಿಕೃತವಾಗಿ ಹೋಗಿದ್ದಾರೆ ಎಂದು ಇನ್‌ಕ್ರಿಮೆಂಟ್‌ ತಡೆ ಹಿಡಿಯಲಾಗಿದೆ’ ಎಂದು ದೂರಿದರು.

ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌, ‘ಈ ಬಗ್ಗೆ ಸಭೆ ನಡೆಸಲಾಗಿದೆ. ಇನ್‌ಕ್ರಿಮೆಂಟ್‌ ತಡೆದಿರುವುದನ್ನು ವಾಪಸ್‌ ಪಡೆಯಲಾಗಿದೆ’ ಎಂದು ಹೇಳಿದರು.

ADVERTISEMENT

‘ಸಚಿವರು ಸಭೆ ನಡೆಸಿದ ನಂತರವೂ ಕಿರುಕುಳ ನಿಂತಿಲ್ಲ. ವ್ಯವಸ್ಥಾಪಕ ನಿರ್ದೇಶಕರು ಇನ್‌ಕ್ರಿಮೆಂಟ್‌ ಬಗ್ಗೆ ಆದೇಶ ನೀಡಿದ್ದಾರೆ. ಆದರೆ, ಅದು ಇಂದಿನವರೆಗೂ ಜಾರಿಯಾಗಿಲ್ಲ. ನಾಯಂಡಹಳ್ಳಿಯಲ್ಲಿ ಕೆಲಸ ಮಾಡಬೇಕಿದ್ದರೂ, ಎನ್‌ಜಿಎಫ್‌ ಕಚೇರಿಗೆ ಹೋಗಿ ಸಹಿ ಮಾಡುವಂತೆ ಆದೇಶಿಸುವ ಮೂಲಕ ಅನವಶ್ಯಕ ಕಿರುಕುಳ ನೀಡಲಾಗುತ್ತಿದೆ’ ಎಂದು ದೂರಿದರು.

‘ಶೀಘ್ರವೇ ವ್ಯವಸ್ಥಾಪಕ ನಿರ್ದೇಶಕರ ಸಭೆ ಕರೆದು ಚರ್ಚೆ ಮಾಡುತ್ತೇನೆ’ ಎಂದು ಸಚಿವರು ಭರವಸೆ ನೀಡಿದರು.

ಜೆಡಿಎಸ್‌ನ ಬಸವರಾಜ ಹೊರಟ್ಟಿ, ಕೆ.ಟಿ. ಶ್ರೀಕಂಠೇಗೌಡ, ‘ಕನ್ನಡಿಗ ನೌಕರರಿಗೆ ಕಿರುಕುಳ ನೀಡುವ ಅಧಿಕಾರಿಗಳ ಬದಲಾವಣೆಗೂ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ನ ಎಸ್‌. ವೀಣಾ ಅಚ್ಚಯ್ಯ ಪ್ರಶ್ನೆಗೆ, ‘ಪ್ರಯಾಣಿಕರ ಒತ್ತಡ ನಿವಾರಣೆಗೆ ಆರು ನಿಮಿಷಕ್ಕೊಮ್ಮೆ ಇದ್ದ ರೈಲು ಸಂಚಾರವನ್ನು ನಾಲ್ಕು ನಿಮಿಷಕ್ಕೊಮ್ಮೆ ಮಾಡಲಾಗಿದೆ. ಬೋಗಿಗಳ ಸಂಖ್ಯೆಯನ್ನು ಮೂರರಿಂದ ಆರಕ್ಕೆ ಹೆಚ್ಚಿಸಲು ಯೋಜಿಸಲಾಗಿದೆ. ಮಹಿಳೆಯರಿಗೆ ಪ್ರತ್ಯೇಕ ಬೋಗಿ ಅಳವಡಿಕೆಯನ್ನೂ ಪರಿಶೀಲಿಸಲಾಗುವುದು’ ಎಂದು ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.