ADVERTISEMENT

ಮೆಟ್ರೋ ಬಂದ್!

ಮನ ಕಲಕಿದ ಅಜ್ಜಿಯ ಕಾಲ್ನಡಿಗೆ...

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2015, 15:36 IST
Last Updated 26 ಸೆಪ್ಟೆಂಬರ್ 2015, 15:36 IST

ಬೆಂಗಳೂರು: ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ಬೆಂಗಳೂರಿನಲ್ಲಿ ಒಂದೆಡೆ ಪ್ರತಿಭಟನೆ ನಡೆಯುತ್ತಿದ್ದರೆ, ಇತ್ತ ಬಿಎಂಟಿಸಿ, ಆಟೋರಿಕ್ಷಾ ಸೇವೆಯೂ ಇಲ್ಲದೆ ಜನ ಪರದಾಡುತ್ತಿದ್ದಾರೆ. ಇದರ ಜತೆಗೆ ‘ನಮ್ಮ ಮೆಟ್ರೊ’ ಕೂಡಾ ಸಂಚಾರ ಸ್ಥಗಿತಗೊಳಸಿದೆ.

ಬೆಳಿಗ್ಗೆಯಿಂದಲೇ ಮೆಟ್ರೋ ಸಂಚಾರ ಸ್ಥಗಿತಗೊಳಿಸಿದೆ. ಮೆಟ್ರೋ ನಿಲ್ದಾಣಗಳು ಬಾಗಿಲು ಮುಚ್ಚಿದ್ದು, ಭದ್ರತಾ ಸಿಬ್ಬಂದಿ ಪರಸ್ಪರ ಕುಶಲೋಪರಿಯಲ್ಲಿ ತೊಡಗಿ ಕಾಲ ಕಳೆಯುತ್ತಿದ್ದ ದೃಶ್ಯ ಕಂಡುಬಂತು.

ಅಜ್ಜಿಯ ಕಾಲ್ನಡಿಗೆ: ದೂರದ ಉತ್ತರ ಕರ್ನಾಟಕದ ಜಿಲ್ಲೆಯೊಂದರಿಂದ ಬಂದಿದ್ದ ವಯಸ್ಕ ಮಹಿಳೆಯೊಬ್ಬರು ಬ್ರಿಗೇಡ್ ರಸ್ತೆಯಲ್ಲಿ ನಿಂತು ‘ಅಪ್ಪಾ ಹುಚ್ಚಾಸ್ಪತ್ರೆಗೆ ಹೋಗೋದೆಂಗೆ. ಅಲ್ಲಿ ನಮ್ಮ ಕಡೆಯೋರ್ನ್ನ ಕರಕಂಡು ಬಂದು ಸೇರಿಸಿದಾರಂತೆ. ಇನ್ನು ಎಷ್ಟು ದೂರ, ನಡ್ಕೊಂಡು ಹೋಗ್ತೇನೆ. ಹೋಗೊ ದಾರಿ ಯಾವುದು? ಯಾವ ಕಡೆಯಿಂದ ಹೋದ್ರೆ ಸಮೀಪ ಆಗುತ್ತೆ ಹೇಳಿ ಸ್ವಾಮಿ. 100 ರೂಪಾಯಿ ಕೊಡ್ತೇನೆ ಅಂದ್ರು ಆಟೋದೋರು ಬರಲ್ಲಾ ಅಂತಾರೆ. ಏನ್ಮಾಡೋದು’ ಎಂದು ದಾರಿಹೋಕರಿಗೆ ಕೈ ಮುಗಿದು ಕೇಳಿದ್ದು ಮನ ಕಲಕುವಂತಿತ್ತು.

ಕ್ರಿಕೆಟ್: ಬ್ರಿಗೆಡ್ ರಸ್ತೆ ಬಿಕೋ ಎನ್ನುತ್ತಿತ್ತು. ಮಧ್ಯಾಹ್ನದ ವೇಳೆಗೆ ಕಾರು, ಬೈಕ್ ಗಳ ಸಂಚಾರ ಸ್ವಲ್ಪ ಹೆಚ್ಚಾಯಿತು. ವ್ಯಾಪಾರ ವಹಿವಾಟು ಸ್ಥಗಿತವಾಗಿದ್ದರಿಂದ ಬಿಡುವಿನಲ್ಲಿದ್ದ ಇಲ್ಲಿಯ ಅಂಗಡಿ ಮತ್ತು ಚಿತ್ರ ಮಂದಿರದ ಕೆಲಸಗಾರರು ರೆಕ್ಸ್ ಚಿತ್ರ ಮಂದಿರದ ಆವರಣದಲ್ಲಿ ಕ್ರಿಕೆಟ್ ಆಡಿ ಕಾಲ ಕಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.