ADVERTISEMENT

ಮೆಹದಿ ಪೊಲೀಸ್‌ ಕಸ್ಟಡಿ ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2014, 19:30 IST
Last Updated 18 ಡಿಸೆಂಬರ್ 2014, 19:30 IST

ಬೆಂಗಳೂರು: ಇಸ್ಲಾಮಿಕ್ ಸ್ಟೇಟ್‌ ಭಯೋತ್ಪಾ­ದನಾ ಸಂಘಟನೆ ಕುರಿತ ‘@shami witness’ ಟ್ವಿಟರ್ ಖಾತೆ ನಿರ್ವಹಣೆ ಮಾಡುತ್ತಿದ್ದ ಆರೋಪದ ಮೇಲೆ ಬಂಧಿತನಾಗಿರುವ ಮೆಹದಿ ಮಸ್ರೂರ್ ಬಿಸ್ವಾಸ್‌ನ ಪೊಲೀಸ್‌ ಕಸ್ಟಡಿ ಅವಧಿಯನ್ನು 15 ದಿನ ವಿಸ್ತರಿಸಿ ನಗರ ಸಿವಿಲ್‌ ನ್ಯಾಯಾಲಯ ಆದೇಶ ಹೊರಡಿಸಿದೆ.

ಮೆಹದಿಯ ಐದು ದಿನಗಳ ಪೊಲೀಸ್ ಕಸ್ಟಡಿ ಅವಧಿ ಕೊನೆಗೊಂಡ ಕಾರಣ ಸಿಸಿಬಿ ಅಧಿಕಾರಿಗಳು ಆತನನ್ನು ಗುರುವಾರ ಮಧ್ಯಾಹ್ನ ನಗರ ಸಿವಿಲ್‌ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

‘ಮೆಹದಿಯ ಟ್ವಿಟರ್‌ ಖಾತೆಯಿಂದ ಸಂಗ್ರಹಿಸಿರುವ ಸುಮಾರು 1.30 ಲಕ್ಷ ಟ್ವೀಟ್‌ಗಳ ಬಗ್ಗೆ ವಿಚಾರಣೆ ನಡೆಸಲು ಹೆಚ್ಚಿನ ಕಾಲಾವಕಾಶ ಬೇಕು. ಅಲ್ಲದೇ, ಆ ಟ್ವೀಟ್‌ಗಳು ಅರೆಬಿಕ್ ಮತ್ತು ಇಂಗ್ಲಿಷ್‌ ಭಾಷೆ ಯ ಲ್ಲಿವೆ. ಆದ್ದರಿಂದ ಆರೋಪಿಯ ಪೊಲೀಸ್‌ ಕಸ್ಟಡಿ ಅವ ಧಿಯನ್ನು 25 ದಿನಗಳ­ವರೆಗೆ ವಿಸ್ತರಿಸಬೇಕು’ ಎಂದು ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮೆಹದಿ ಪರ ವಕೀಲ ಜಾಫರ್‌ ಷಾ ಅವರು, ‘ಕಕ್ಷಿದಾರನನ್ನು ಈಗಾಗಲೇ ಐದು ದಿನ ಪೊಲೀಸ್‌ ಕಸ್ಟಡಿಗೆ ಒಪ್ಪಿಸ ಲಾ ಗಿತ್ತು. ಈ ಪ್ರಕರಣದಲ್ಲಿ ಕಕ್ಷಿದಾರನನ್ನು 25 ದಿನ ಗಳವರೆಗೆ ಪೊಲೀಸ್‌ ಕಸ್ಟಡಿಗೆ ನೀಡುವ ಅಗತ್ಯವಿಲ್ಲ’ ಎಂದು ವಾದ ಮಂಡಿಸಿದರು. ನಂತರ ನ್ಯಾಯಾಧೀಶ ಸೋಮ­ರಾಜ್‌ ಅವರು, ‘ಪೊಲೀಸರು ವಿಚಾರಣೆ ವೇಳೆ ಏನಾದರೂ ಕಿರುಕುಳ ನೀಡಿದರೇ, ಊಟದ ವ್ಯವಸ್ಥೆ ಸರಿ ಇತ್ತೇ’ ಎಂದು ಆರೋಪಿ ಮೆಹದಿಯನ್ನು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಮೆಹದಿ, ‘ಪೊಲೀಸರು ಪೋಷಕರನ್ನು ಭೇಟಿ­ಯಾಗಲು ಅವಕಾಶ ಕಲ್ಪಿಸಿ ಕೊಟ್­ಟಿದ್ದಾರೆ. ಅವರಿಂದ ಯಾವುದೇ ತೊಂದರೆಯಾಗಿಲ್ಲ’ ಎಂದು ಹೇಳಿದ. ಬಳಿಕ ನ್ಯಾಯಾಧೀಶರು 2015ರ ಜ.2 ರವರೆಗೆ ಪೊಲೀಸ್‌ ಕಸ್ಟಡಿ ಅವಧಿ ವಿಸ್ತರಿಸಿ ಆದೇಶ ಹೊರಡಿಸಿದರು.

ಮೆಹದಿಯನ್ನು ನ್ಯಾಯಾಲಯಕ್ಕೆ ಕರೆತಂದ ಕಾರಣ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡ­ಲಾಗಿತ್ತು. ಡಿಸಿಪಿ, ಮೂವರು ಎಸಿಪಿ­ಗಳು, ಆರು ಇನ್‌ಸ್ಪೆಕ್ಟರ್‌ಗಳು ಸೇರಿದಂತೆ ಸುಮಾರು 50 ಮಂದಿ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.