ADVERTISEMENT

ಮೈಗಳ್ಳ ಸಚಿವರಿಂದ ಹಾನಿ

ಸಿ.ಎಂ ಸಮ್ಮುಖದಲ್ಲೇ ಪೂಜಾರಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2016, 19:30 IST
Last Updated 6 ಫೆಬ್ರುವರಿ 2016, 19:30 IST
ಜನಾರ್ದನ ಪೂಜಾರಿ
ಜನಾರ್ದನ ಪೂಜಾರಿ   

ಮೈಸೂರು: ‘ಈ ಸಚಿವ ಸಂಪುಟದಲ್ಲಿ ಕೆಲಸ ಮಾಡದ ಬಹಳಷ್ಟು ಸಚಿವರಿದ್ದಾರೆ. ಇವರನ್ನು ಕಿತ್ತೆಸೆಯುವ ಧೈರ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡದೇ ಇದ್ದಲ್ಲಿ ಭವಿಷ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕಷ್ಟ’ ಎಂದು ಪಕ್ಷದ ಹಿರಿಯ ಮುಖಂಡ ಜನಾರ್ದನ ಪೂಜಾರಿ ಎಚ್ಚರಿಕೆ ನೀಡಿದರು.

ಇಲ್ಲಿ ಶನಿವಾರ ಚಾಲನೆಗೊಂಡ ಕಾಂಗ್ರೆಸ್ ‘ಗ್ರಾಮ ಸ್ವರಾಜ್’ ಸಮಾವೇಶದಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿ ವೇದಿಕೆಯಲ್ಲಿದ್ದ ಪ್ರಮುಖರು ಪೂಜಾರಿ ಅವರ ವಾಗ್ದಾಳಿಯನ್ನು ಮೌನವಾಗಿ ಆಲಿಸಿದರು.

‘ಗ್ರಾಮಾಂತರ ಮಟ್ಟದಲ್ಲಿ ನಾನು ಸಂಚರಿಸಿದ್ದೇನೆ. ಕಾರ್ಯಕರ್ತರು, ನಾಗರಿಕರ ದೂರು ಒಂದೇ; ನಾಗರಿಕರಿಗೆ, ಕಾರ್ಯಕರ್ತರಿಗೆ ಕಾಂಗ್ರೆಸ್ ಸಚಿವರು ಗೌರವ ಕೊಡುತ್ತಿಲ್ಲ ಎನ್ನುವುದು. ನಮ್ಮದು ಕಾರ್ಯಕರ್ತರಿಂದ ಹುಟ್ಟಿದ ಪಕ್ಷ. ಕಾರ್ಯಕರ್ತರಿಗೆ ಗೌರವ ಕೊಡದೇ ಇದ್ದರೆ ಹೇಗೆ? ಮುಖ್ಯಮಂತ್ರಿಗಳೇ ಕಾರ್ಯಕರ್ತರನ್ನು ಕಡೆಗಣಿಸಬೇಡಿ’ ಎಂದು ಗುಡುಗಿದರು.

‘ಅನೇಕ ಸಚಿವರು ಕೆಲಸ ಮಾಡುತ್ತಿಲ್ಲ ಎನ್ನುವ ಆರೋಪ ಇದೆ. ಅವರನ್ನು ಸಚಿವ ಸಂಪುಟದಿಂದ ಕಿತ್ತುಹಾಕಿ. ಇಂಥವರಿಂದ ಯಾರಿಗೂ ಪ್ರಯೋಜನವಿಲ್ಲ. ಇದು ಕಾರ್ಯಕರ್ತರ ಅಭಿಪ್ರಾಯವೂ ಹೌದು’ ಎಂದರು.

ಧೈರ್ಯ ಎಲ್ಲಿ ಹೋಯಿತು: ‘ಸಿದ್ದರಾಮಯ್ಯನವರೇ! ನಿಮಗಿದ್ದ  ಧೈರ್ಯ ಈಗ ಎಲ್ಲಿಗೆ ಹೋಯಿತು? ಇನ್ನಾದರೂ ಧೈರ್ಯ ಮಾಡಿ. ಸೋಂಭೇರಿಗಳನ್ನು ಕಿತ್ತೆಸೆದು ಕಾಂಗ್ರೆಸ್ ಉಳಿಸಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.