ADVERTISEMENT

ಮೈಸೂರಿನಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣ: ಎನ್‌ಐಎ ದೋಷಾರೋಪ ಪಟ್ಟಿ

​ಪ್ರಜಾವಾಣಿ ವಾರ್ತೆ
Published 24 ಮೇ 2017, 19:55 IST
Last Updated 24 ಮೇ 2017, 19:55 IST

ಬೆಂಗಳೂರು: ಮೈಸೂರು ನ್ಯಾಯಾಲಯ ಆವರಣದಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ವಿರುದ್ಧ  ವಿಶೇಷ ನ್ಯಾಯಾಲಯದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬುಧವಾರ ದೋಷಾರೋಪ ಪಟ್ಟಿ ಸಲ್ಲಿಸಿದೆ.

2016ರ ಆಗಸ್ಟ್ 1ರಂದು ನ್ಯಾಯಾಲಯದ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ  ಬಾಂಬ್‌ ಸ್ಫೋಟಗೊಂಡಿತ್ತು. ಈ ಕುರಿತು  ಲಕ್ಷ್ಮೀಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸೆ. 20ರಂದು ಪ್ರಕರಣದ ತನಿಖೆ ಕೈಗೆತ್ತಿಕೊಂಡ ಎನ್‌ಐಎ, ಐದು ಮಂದಿಯನ್ನು ಬಂಧಿಸಿತ್ತು. ಈ ಪೈಕಿ ಇದೀಗ ಎನ್‌ಐಎ, ಮದುರೈನ ಇಸ್ಮಾಯಿಲ್‌ ಪುರ ನಿವಾಸಿ ಎನ್‌. ಅಬ್ಬಾಸ್‌ ಅಲಿ,  ಕೆ. ಪುದೂರು ನಿವಾಸಿ ಸ್ಯಾಮ್ಸನ್‌ ಕರೀಂ ರಾಜ ಮತ್ತು ಚೆನ್ನೈ ಪಾಲವಕ್ಕಂ ನಿವಾಸಿ ದಾವೂದ್‌ ಸುಲೈಮಾನ್‌ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ.

ADVERTISEMENT

ಇದೇ ಪ್ರಕರಣದಲ್ಲಿ ಬಂಧಿತರಾಗಿರುವ ಇತರ ಆರೋಪಿಗಳಾದ ಮೊಹಮದ್‌ ಅಯೂಬ್‌ ಮತ್ತು ಸಂಶುದ್ದೀನ್‌ ಕರ್ವಾ ಎಂಬವರ ವಿರುದ್ಧ ಎನ್‌ಐಎ ತನಿಖೆ ಮುಂದುವರಿಸಿದೆ. ಆರೋಪಿಗಳ ಪೈಕಿ ಅಬ್ಬಾಸ್‌ ಅಲಿ ಎಂಬಾತ ‘ಅಲ್‌ ಖೈದಾ’  ಮಾದರಿಯಲ್ಲಿ ‘ಬೇಸ್‌ ಮೂವ್‌ಮೆಂಟ್‌’ ಎಂಬ  ಉಗ್ರವಾದಿ ಸಂಘಟನೆ ರಚಿಸಿಕೊಂಡು ಕಾನೂನುಬಾಹಿರ ಚಟುವಟಿಕೆ ನಡೆಸಲು ಮುಂದಾಗಿದ್ದ ಎನ್ನುವುದು ಎನ್‌ಐಎ ತನಿಖೆ ವೇಳೆ ಬಯಲಾಗಿದೆ.

ನ್ಯಾಯಾಲಯದ ಆವರಣಗಳು ಸೇರಿದಂತೆ ದೇಶದ ವಿವಿಧೆಡೆ ಬಾಂಬ್‌ ಸ್ಫೋಟ ನಡೆಸಲು ಸಂಚು ಈತ ರೂಪಿಸಿದ್ದ. ಸುಧಾರಿತ ಬಾಂಬ್‌ಗಳನ್ನು ತಯಾರಿಸುತ್ತಿದ್ದ ಈ ಆರೋಪಿಗಳು, ವಿವಿಧ ನ್ಯಾಯಾಲಯ ಆವರಣಗಳಲ್ಲಿ ಸ್ಫೋಟಿಸುವ ಯೋಜನೆ ಸಿದ್ಧಪಡಿಸಿದ್ದರು. ಅದರ ಭಾಗವಾಗಿ ಮೈಸೂರು ನ್ಯಾಯಾಲಯ ಆವರಣದಲ್ಲಿ   ಸ್ಫೋಟ ನಡೆಸಲಾಗಿತ್ತು ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿಗಳು ವಿವಿಧ ಜೈಲುಗಳು, ಸರ್ಕಾರಿ ಕಚೇರಿಗಳು, ‘ದಿನಮಲರ್‌’ ಪತ್ರಿಕಾ ಕಚೇರಿ, ‘ಫ್ರೆಂಚ್‌ ಕಾನ್ಸುಲೆಟ್‌’ಗೂ  ಬೆದರಿಕೆ ಪತ್ರಗಳನ್ನು ಕಳುಹಿಸಿದ್ದರು. ಅಲ್ಲದೇ, ದಕ್ಷಿಣ ಭಾರತದ ಐದು ವಿವಿಧ ನ್ಯಾಯಾಲಯಗಳ ಆವರಣದಲ್ಲಿ ಬಾಂಬ್‌ ಸ್ಫೋಟಿಸುವುದಾಗಿಯೂ ತಿಳಿಸಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.