ADVERTISEMENT

ಮೈಸೂರು ಸಂಗೀತ ವಿವಿಯಲ್ಲಿ ‘ಅಪಶ್ರುತಿ’

ಗಣ್ಯರ ಸಮ್ಮುಖದಲ್ಲೇ ಕುಲಪತಿ–ಕುಲಸಚಿವರ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2013, 19:30 IST
Last Updated 22 ಅಕ್ಟೋಬರ್ 2013, 19:30 IST
ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಕುಲಪತಿ ಡಾ.ಹನುಮಣ್ಣ ನಾಯಕ ದೊರೆ ಮತ್ತು ಕುಲಸಚಿವ ಡಾ.ಎಂ. ಬಸವಣ್ಣ ಅವರ ನಡುವೆ ಮಾತಿನ ಚಕಮಕಿ ನಡೆದಾಗ ವಿವಿಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಸಮಾಧಾನಪಡಿಸಿದರು
ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಕುಲಪತಿ ಡಾ.ಹನುಮಣ್ಣ ನಾಯಕ ದೊರೆ ಮತ್ತು ಕುಲಸಚಿವ ಡಾ.ಎಂ. ಬಸವಣ್ಣ ಅವರ ನಡುವೆ ಮಾತಿನ ಚಕಮಕಿ ನಡೆದಾಗ ವಿವಿಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಸಮಾಧಾನಪಡಿಸಿದರು   

ಮೈಸೂರು: ಬಸವ ಜಯಂತಿ ಆಚರಿಸಿಲ್ಲ ಎಂದು ವಾಲ್ಮೀಕಿ ಜಯಂತಿ ಕಾರ್ಯಕ್ರಮದ ವೇದಿಕೆ­ಯಲ್ಲೇ ಕುಲಪತಿ ಹಾಗೂ ಕುಲಸಚಿವರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಇಲ್ಲಿಯ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾ­ನಿಲಯದಲ್ಲಿ ಮಂಗಳವಾರ ನಡೆಯಿತು.

ಕುಲಪತಿ ಡಾ.ಹನುಮಣ್ಣ ನಾಯಕ ದೊರೆ ಮತ್ತು ಕುಲಸಚಿವ ಡಾ.ಎಂ. ಬಸವಣ್ಣ ಅವರ ನಡುವೆ ಮಾತಿನ ಚಕಮಕಿ ನಡೆದಿದ್ದು, ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್‌. ರಂಗಪ್ಪ, ಸಾಹಿತಿ ಪ್ರೊ.­ಕಾಳೇಗೌಡ ನಾಗವಾರ, ಹಿರಿಯ ರಂಗ ಕಲಾವಿದ ವೈ.ಎಂ. ಪುಟ್ಟಣ್ಣಯ್ಯ, ಸಂಗೀತ ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ.ಎಂ.ಎಸ್‌. ಶೇಖರ್‌ ಮೂಕ ಪ್ರೇಕ್ಷಕರಾದರು.  

ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ಆರಂಭಿ ಸಿದ ಡಾ.ಎಂ. ಬಸವಣ್ಣ ‘ಮುಂದಿನ ದಿನಗಳಲ್ಲಿ ಎಲ್ಲಾ ಜಯಂತಿಗಳನ್ನು ಸಂಗೀತ ವಿವಿ ಆಚರಿಸುವಂತಾಗಬೇಕು. ಇದಕ್ಕೆ ಕುಲಪತಿ ಅವರು ಮನಸ್ಸು ಮಾಡಬೇಕು. ಬಸವ ಜಯಂತಿಯನ್ನು ಎರಡು ವರ್ಷಗಳಿಂದ ಆಚರಿಸಿಲ್ಲ. ಇದಕ್ಕೆ ಕುಲಪತಿ ಅವರ ಸಹಕಾರ ಅಗತ್ಯ’ ಎನ್ನುತ್ತಿದ್ದಂತೆ ಮುಜುಗರಕ್ಕೆ ಒಳಗಾದ ಕುಲಪತಿ ಹನುಮಣ್ಣ ನಾಯಕ ದೊರೆ, ‘ಆಚರಣೆ ಕಾರ್ಯಕ್ರಮಗಳು ನಡೆಯದಿರಲು ನೀವೂ ಜವಾಬ್ದಾರರು’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಬಸವಣ್ಣ ‘ಅದಕ್ಕೆ ನಾನು ಹೊಣೆ­ಯಲ್ಲ’ ಎನ್ನುತ್ತಿದ್ದಂತೆ ಕುಲಪತಿ ‘ಜಗಳಗಂಟತನ­ವನ್ನೂ ಮೊದಲು ಬಿಡಿ’ ಎಂದಾಗ ಕುಲಸಚಿವ ‘ಹೌದು, ಎಲ್ಲರಿಗೂ ಗೊತ್ತು ಜಗಳಗಂಟ ಯಾರೂ ಅಂತ...’ ಎಂದರು.

ಸಿಡಿಮಿಡಿಗೊಂಡ ಕುಲಪತಿ ಅವರು, ನೀವು ದಲಿತ ವಿರೋಧಿ, ಪೂರ್ವಗ್ರಹಪೀಡಿತರಾಗಿ ವರ್ತಿಸ ಬೇಡಿ ಎಂದರು. ಆಗ ಕುಲಸಚಿವರು ಸಮಾಜಾಯಷಿ ನೀಡಿ ಕ್ಷಮೆ ಕೇಳಿದರು.

ಸ್ವಲ್ಪ ಹೊತ್ತು ಶಾಂತವಾಗಿದ್ದ ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಪತಿ ಕೆ.ಎಸ್‌. ರಂಗಪ್ಪ ಅವರನ್ನು ಸ್ವಾಗತಿಸಿದ ಕುಲಸಚಿವ ಬಸವಣ್ಣ ‘ವಿಶ್ವವಿದ್ಯಾನಿಲಯದ ಪರವಾಗಿ ಸ್ವಾಗತ’ ಎಂದಾಗ ಕುಲಪತಿ ‘ಬಿ ಆಫ್‌ ಅವರ್‌ ವೈಸ್‌ ಛಾನ್ಸಲರ್’ ಎಂದಾಗ ಬಸವಣ್ಣ ಕೈ ತೋರುತ್ತ ಕುಲಪತಿಗಳಿದ್ದಲ್ಲಿಗೆ ಬಂದು ‘ಯು ಆರ್‌ ಟಾಕಿಂಗ್‌ ಅನ್‌ಪಾರ್ಲಿಮೆಂಟರಿ ವರ್ಡ್ಸ್’ ಎಂದರು. ಕುಲಪತಿ, ನೀವು ಕೋಮುವಾದಿ ಎನ್ನುತ್ತಿದ್ದಂತೆ ಇಬ್ಬರ ಜಗಳ ತೀವ್ರತೆ ತಲುಪಿತು. ಸಭಿಕರೇ ಎದ್ದು ಸಮಾಧಾನಿಸಿದರು.

ಕಾರ್ಯಕ್ರಮದ ಉದ್ದಕ್ಕೂ ಇಬ್ಬರ ಸಿಟ್ಟು– ಸೆಡವು ಕಣ್ಣಿನಲ್ಲೇ ನಡೆಯುತ್ತಿತ್ತು. ಪ್ರೊ.ಕಾಳೇಗೌಡ ನಾಗವಾರ ಪ್ರಧಾನ ಭಾಷಣ ಕಾರ್ಯ ಕ್ರಮದಲ್ಲಿ ಕುಲಪತಿ ಹನುಮಣ್ಣ ನಾಯಕ ದೊರೆ ಆಯತಪ್ಪಿ ವೇದಿಕೆಯಿಂದ ಬಿದ್ದು ಕೆ.ಆರ್‌. ಆಸ್ಪತ್ರೆಗೆ ದಾಖಲಾದರು.

ಇರುಸುಮುರಿಸಿನಲ್ಲೇ ನಡೆದ ಉದ್ಘಾಟನೆ: ಮಾತಿನ ಚಕಮಕಿ ಮುಗಿದ ನಂತರ ಇರುಸು ಮುರುಸಿನಲ್ಲೇ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಮೈಸೂರು ವಿವಿ ಕುಲಪತಿ ಕೆ.ಎಸ್‌. ರಂಗಪ್ಪ ಉದ್ಘಾಟಿಸಿ ವಾಲ್ಮೀಕಿ ಜಯಂತಿಯನ್ನು ಎಲ್ಲರೂ ಆಚರಿಸುವಂತಾಗಬೇಕು. ಹಲವು ಕವಿಗಳಿಗೆ ವಾಲ್ಮೀಕಿ ರಚಿಸಿದ ರಾಮಾಯಣ ಮಾರ್ಗದರ್ಶಿಯಾಗಿದ್ದು, ಎಲ್ಲರೂ ಓದಲೇ ಬೇಕಾದ ಗ್ರಂಥವಾಗಿದೆ ಎಂದರು.

ವಿಶ್ವವಿದ್ಯಾಲಯ ಮೂಲ ಸೌಕ ರ್ಯಗಳ ಕೊರತೆಯನ್ನು ಎದುರಿಸುತ್ತಿದೆ. ಸರ್ಕಾರ ದಿಂದ ಅನುದಾನ ದೊರೆತರೆ ಉತ್ತಮ ವಿವಿ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸನ್ಮಾನ: ಮೈಸೂರು ವಿವಿ ಕುಲಪತಿ ಕೆ.ಎಸ್‌. ರಂಗಪ್ಪ, ಸಾಹಿತಿ ಪ್ರೊ. ಕಾಳೇಗೌಡ ನಾಗವಾರ, ಹಿರಿಯ ರಂಗ ಕಲಾವಿದ ವೈ.ಎಂ. ಪುಟ್ಟಣ್ಣಯ್ಯ ಅವರನ್ನು ಸನ್ಮಾನಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.