ADVERTISEMENT

‘ಮೋದಿ ಮಕ್ಕಳಂತೆ ವರ್ತನೆ’

ಬೊಳುವಾರು ಸಾಹಿತ್ಯ–ಮುಖಾಮುಖಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2017, 20:09 IST
Last Updated 12 ಮಾರ್ಚ್ 2017, 20:09 IST

ಬಂಟ್ವಾಳ: ‘ನರೇಂದ್ರ ಮೋದಿಗೆ ಅವರಿಗೆ ಹುಟ್ಟದೇ ಇದ್ದರೂ, ನಾವೆಲ್ಲ ಮೋದಿ ಅವರ ಮಕ್ಕಳಂತೆ ವರ್ತನೆ ಮಾಡುತ್ತಿದ್ದೇವೆ’ ಎಂದು ಹಿರಿಯ ಸಾಹಿತಿ ಬೊಳುವಾರ್ ಮೊಹಮ್ಮದ್‌ ಕುಂಞಿ ವಿಷಾದಿಸಿದ್ದಾರೆ.

ಬಂಟ್ವಾಳ ತಾಲ್ಲೂಕಿನ ಸಾಹಿತ್ಯಕ ಸಾಂಸ್ಕೃತಿಕ ವೇದಿಕೆ ‘ಅಭಿರುಚಿ ಜೋಡುಮಾರ್ಗ’ದ ವತಿಯಿಂದ ಭಾನುವಾರ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಭಾಭವನದಲ್ಲಿ ಆಯೋಜಿಸಿದ್ದ ಬೊಳುವಾರು ಸಾಹಿತ್ಯ- ಮುಖಾಮುಖಿ ಕಾರ್ಯಕ್ರಮದಲ್ಲಿ ಅವರು ಈ ವಿಷಾದ ತೋಡಿಕೊಂಡರು.

‘ಯಾರೂ ಕೂಡಾ ಅರ್ಜಿ ಹಾಕಿ ಹುಟ್ಟುವುದಿಲ್ಲ. ಅರ್ಜಿ ಹಾಕಿ ಹುಟ್ಟುತ್ತಿದ್ದರೆ, ನಾವೆಲ್ಲ ಮೋದಿ ಅವರ ಮಕ್ಕಳಾಗುತ್ತಿದ್ದೆವು. ನಾವೆಲ್ಲ ಮೋದಿ ಅವರಂತೆ  ವರ್ತನೆ ಮಾಡುತ್ತಿದ್ದೇವೆ’ ಎಂದು  ಖಾರವಾಗಿ ಪ್ರತಿಕ್ರಿಯಿಸಿದರು.

ADVERTISEMENT

ಕಲ್ಲು ಬಿಸಾಕಿದವರು ಪ್ರಶಂಸಿದರು: ‘25ವರ್ಷಗಳ ಹೆಣ್ಮಕ್ಕಳ ಸ್ವಾತಂತ್ರ್ಯದ ಕುರಿತಾಗಿ ಬರೆದ ಜಿಹಾದ್ ಬಗ್ಗೆ ಅಲ್ಲೋಲ-ಕಲ್ಲೋಲ ಉಂಟಾಗಿ ನಾನು ಜೈಲು ವಾಸ ಅನುಭವಿಸಿದೆ. ಆ ದಿನದಲ್ಲಿ ನನ್ನ ಮೇಲೆ ಹಲ್ಲೆಯೂ ನಡೆದಿತ್ತು. ನನ್ನ ಮೇಲೆ ಕಲ್ಲು ಬಿಸಾಕಿದ್ದ ಒಬ್ಬ ವ್ಯಕ್ತಿ, ಬೆಂಗಳೂರಿನಲ್ಲಿ ನಡೆದ ನನ್ನ ಸ್ವಾತಂತ್ರ್ಯದ ಓಟ-ಕೃತಿಯ ಕುರಿತಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮುಸ್ಲಿಂ ಹೆಣ್ಮಕ್ಕಳು ಇಂದು ಶಿಕ್ಷಣ ಕ್ಷೇತ್ರದಲ್ಲಿ ಮುಂದುವರೆಸಲು ಬೊಳುವಾರರ ಜಿಹಾದ್ ಕಾರಣ ಎಂದಾಗ, ಮನದಲ್ಲಿ ತೃಪ್ತಿ ಭಾವ ಮೂಡಿತು’ ಎಂದು ಬೊಳುವಾರು ಹೇಳಿದರು.

ಸಂವಾದದ ನಡುವೆ ಸಭಿಕರೊಬ್ಬರು ಏಕರೂಪದ ನಾಗರಿಕ ಸಂಹಿತೆ ಯಾಕೆ ಜಾರಿಗೊಳ್ಳುತ್ತಿಲ್ಲ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಲು ಹೊರಟ ಬೊಳುವಾರರನ್ನು ತಡೆದ ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ, ‘ನೀವು ನಿಮ್ಮ ಕತೆ, ಕಾದಂಬರಿ ಬಗ್ಗೆ ಮಾತ್ರ ಚರ್ಚಿಸಿ. ನಿಮ್ಮ ಸಾಹಿತ್ಯವನ್ನು ನಾವೆಲ್ಲ ಅತ್ಯಂತ ಗೌರವದಿಂದ ಕಾಣುತ್ತೇವೆ. ಅದರ ಹೊರತು, ಬೇರಾವ ವಿಚಾರಗಳನ್ನು ಇಲ್ಲಿ ಚರ್ಚೆ ಮಾಡಬೇಡಿ’ ಎಂದು ಸಲಹೆ ನೀಡಿದರು.

ಏರ್ಯರ ಸೂಚನೆ ಪಾಲಿಸಿದ ಬೊಳುವಾರು, ಸಾಹಿತ್ಯ ಮೀಮಾಂಸೆ ಬಗ್ಗೆ ಮಾತ್ರ ಚರ್ಚಿಸಿ ಸಂವಾದ ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.