ADVERTISEMENT

ಯುವ ಕವಿ ಉಚ್ಚಂಗಿ ಪ್ರಸಾದ್ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2015, 12:55 IST
Last Updated 23 ಅಕ್ಟೋಬರ್ 2015, 12:55 IST

ದಾವಣಗೆರೆ: ಯುವ ಕವಿ ಉಚ್ಚಂಗಿ ಪ್ರಸಾದ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ನಗರದ ಡಿಸಿಎಂ ಟೌನ್ ಸಮೀಪ ಬುಧವಾರ ತಡರಾತ್ರಿ ನಡೆದಿದೆ.

ಘಟನೆ ಹಿನ್ನೆಲೆ: ‘ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ನಿಮ್ಮ ತಾಯಿ ಸಂತೇಬೆನ್ನೂರು ಯಶೋದಮ್ಮ ಅವರಿಗೆ ಹೃದಯಾಘಾತವಾಗಿ ನಗರದ ಸಿ.ಜಿ.ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ನಂಬಿಸಿ ಬೈಕ್ ನಲ್ಲಿ ಕರೆದುಕೊಂಡು ಹೋದ. ಡಿಸಿಎಂ ಟೌನ್ ಸಮೀಪ ಬರುತ್ತಿದ್ದಂತೆ ಏಕಾಏಕಿ 6 ರಿಂದ 9ಮಂದಿ ಅಪರಿಚಿತರು ಸೇರಿಕೊಂಡು ನನ್ನ ಮೇಲೆ ಹಲ್ಲೆ ನಡೆಸಿದರು’ಎಂದು ಉಚ್ಚಂಗಿ ಪ್ರಸಾದ್ ದೂರಿದ್ದಾರೆ.

‘ದಲಿತನಾಗಿ ನೀನು ಹುಟ್ಟಿರುವುದು ನಿನ್ನ ಹಳೇ ಜನ್ಮದ ಪಾಪ. ಹಿಂದೂ ಧರ್ಮಕ್ಕೆ ಸಂಬಂಧ ಕಲ್ಪಿಸಿ ಕಥೆ, ಕವನ ಬರೆದರೆ ನಿನ್ನ ಸಾವು ಖಚಿತ. ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ವಾಟ್ಸ್ ಆ್ಯಪ್ ಮತ್ತು ಪೇಸ್ ಬುಕ್ ನಲ್ಲಿ ಬರೆದರೆ ಕೈ ಕತ್ತರಿಸುವುದಾಗಿ ಬೆದರಿಕೆವೊಡ್ಡಿ, ಬ್ಲೇಡ್ ನಿಂದ ಕೈ ಬೆರಳುಗಳು ಕತ್ತರಿಸಲು ಮುಂದಾದರು. ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಗ ಕೈಬೆರಳುಗಳಿಗೆ ಗಾಯವಾಗಿದೆ’ ಎಂದು ಘಟನೆ ಕುರಿತು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ದಾವಣಗೆರೆ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದಲ್ಲಿ ಅಂತಿಮ ಪದವಿ ವ್ಯಾಸಂಗ ಮಾಡುತ್ತಿರುವ ಉಚ್ಚಂಗಿ ಪ್ರಸಾದ್, ಬಾಡಾ ಕ್ರಾಸ್ ಬಳಿಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಾಸ್ಟೆಲ್ ನಲ್ಲಿ ವಾಸವಾಗಿದ್ದಾರೆ. ಘಟನೆ ಕುರಿತು ಆರ್ ಎಂಸಿ  ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT