ADVERTISEMENT

ಯೋಜನೆ ನಿಲ್ಲದು: ಸಿದ್ದರಾಮಯ್ಯ

ಮೇಕೆದಾಟು: 22ಕ್ಕೆ ಪ್ರಧಾನಿ ನರೇಂದ್ರ ಮೋದಿ ಬಳಿ ಸರ್ವಪಕ್ಷ ನಿಯೋಗ ಕರೆದೊಯ್ಯಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2015, 19:30 IST
Last Updated 18 ಏಪ್ರಿಲ್ 2015, 19:30 IST
ಯೋಜನೆ ನಿಲ್ಲದು: ಸಿದ್ದರಾಮಯ್ಯ
ಯೋಜನೆ ನಿಲ್ಲದು: ಸಿದ್ದರಾಮಯ್ಯ   

ಬೆಂಗಳೂರು: ‘ಮೇಕೆದಾಟು ಯೋಜನೆ ರಾಜ್ಯದ ಹಕ್ಕು. ಯಾರು ಎಷ್ಟೇ ಅಡ್ಡಿಪಡಿಸಿದರೂ, ಯೋಜನೆ ನಿಲ್ಲಿಸುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ರಾಜ್ಯಕ್ಕೆ ಯೋಜನೆಯ ಅಗತ್ಯ ಎಷ್ಟಿದೆ ಎಂಬುದನ್ನು ಪ್ರಧಾನಿ ಅವರಿಗೆ ಮನವರಿಕೆ ಮಾಡಲು ಏಪ್ರಿಲ್‌ 22ರಂದು ದೆಹಲಿಗೆ ಸರ್ವಪಕ್ಷ ನಿಯೋಗವನ್ನು ಕರೆದುಕೊಂಡು ಹೋಗಲಾಗುವುದು ಎಂದರು.
ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ತಮಿಳುನಾಡು ನಿಲುವು ಖಂಡಿಸಿ ಮತ್ತು ಯೋಜನೆಯ ತ್ವರಿತ ಅನುಷ್ಠಾನಕ್ಕೆ ಒತ್ತಾಯಿಸಿ ವಾಟಾಳ್‌ ನಾಗರಾಜ್‌ ನೇತೃತ್ವದ ಕನ್ನಡ ಪರ  ಹೋರಾಟಗಾರರ ನಿಯೋಗ ಸಲ್ಲಿಸಿದ ಮನವಿಯನ್ನು ಸ್ವೀಕರಿಸಿದ ಸಿದ್ದರಾಮಯ್ಯ,  ಯೋಜನೆ ಕಾಮಗಾರಿಯನ್ನು ಶೀಘ್ರದಲ್ಲಿ ಆರಂಭಿಸಲಾಗುವುದು ಎಂಬ ಭರವಸೆ ನೀಡಿದರು.

‘ಯೋಜನೆ ಅನುಷ್ಠಾನ ವಿಚಾರದಲ್ಲಿ ತಮಿಳುನಾಡು ವಿನಾ ಕಾರಣ ತಗಾದೆ ತೆಗೆಯುತ್ತಿದೆ. ಈ ಯೋಜನೆಗೆ ತಡೆ ಒಡ್ಡಲು ಆ ರಾಜ್ಯಕ್ಕೆ ಯಾವುದೇ ಹಕ್ಕಿಲ್ಲ, ಈ ಯೋಜನೆಯನ್ನು ಬಜೆಟ್‌ನಲ್ಲೇ ಪ್ರಸ್ತಾಪಿಸಲಾಗಿದೆ. ವರದಿ ಸಿದ್ಧಪಡಿಸಲು  25 ಕೋಟಿ ಮೀಸಲಿಡಲಾಗಿದೆ. ಸಮಗ್ರ ಯೋಜನಾ ವರದಿ ಬಂದ ತಕ್ಷಣ ಕಾಮ ಗಾರಿ ಆರಂಭಿಸಲಾಗುವುದು’ ಎಂದರು.

‘ಈ ಯೋಜನೆಗೆ ಯಾವುದೇ ತೊಡಕಿಲ್ಲ. ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ ಸೇರಿದಂತೆ ಇತರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವುದಕ್ಕಾಗಿ ಎತ್ತಿನಹೊಳೆ ಮತ್ತು ಮೇಕೆದಾಟು ಯೋಜನೆಗಳನ್ನು  ರೂಪಿಸಲಾಗಿದೆ’ ಎಂದರು.

ಗೋವಾದಲ್ಲಿ ಕನ್ನಡಿಗರು ಎದುರಿಸುತ್ತಿರುವ ಸಂಕಷ್ಟದ ಕುರಿತಂತೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಈ ವಿಚಾರದ ಕುರಿತು ಗೋವಾ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ. ಅವರೊಂದಿಗೆ ದೂರವಾಣಿ ಮೂಲಕವೂ ಮಾತನಾಡಿದ್ದೇನೆ.  ಪ್ರವಾಸೋದ್ಯಮ ಸಚಿವ ಆರ್‌.ವಿ. ದೇಶಪಾಂಡೆ ಕೂಡ ಗೋವಾಕ್ಕೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಅಲ್ಲಿ ನೆಲೆಸಿರುವ ಕನ್ನಡಿಗರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ’ ಎಂದರು.

ಮೇಕೆದಾಟಿಗೆ ಮುಖ್ಯಕಾರ್ಯದರ್ಶಿ ಭೇಟಿ: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ ಅವರು ಶನಿವಾರ ಕನಕಪುರ ತಾಲ್ಲೂಕಿನ ಗಾಳಿಬೋರೆ, ಸಂಗಮ, ಮೇಕೆದಾಟಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಮೊದಲಿಗೆ ಗಾಳಿಬೋರೆಯ ಜಂಗಲ್‌ ರೆಸಾರ್ಟ್ಸ್‌ನಲ್ಲಿ ವಿಶ್ರಾಂತಿ ಪಡೆದ ಅವರು, ಬಳಿಕ ಜಿಲ್ಲಾಧಿಕಾರಿ ಎಫ್‌.ಆರ್‌. ಜಮಾದಾರ್‌ ಮತ್ತು ಕನಕಪುರ ತಹಶೀಲ್ದಾರ್‌ ಹನುಮಂತರಾಯಪ್ಪ ಅವರೊಡನೆ ಸಮಾಲೋಚನೆ ನಡೆಸಿದರು ಎಂದು ಗೊತ್ತಾಗಿದೆ. ಆ ನಂತರ ಅವರು ಸಂಗಮ, ಮೇಕೆದಾಟಿಗೆ ಭೇಟಿ ನೀಡಿದ್ದರು ಎಂದು ಉನ್ನತ ಮೂಲಗಳು ತಿಳಿಸಿವೆ.  ಆದರೆ ಮುಖ್ಯ ಕಾರ್ಯದರ್ಶಿ ಅವರ ಭೇಟಿ ಕುರಿತು ಪ್ರತಿಕ್ರಿಯಿಸಲು ಜಿಲ್ಲಾಧಿಕಾರಿ ಜಮಾದಾರ್‌ ಮತ್ತು ತಹಶೀಲ್ದಾರ್‌ ಹನುಮಂತರಾಯಪ್ಪ ನಿರಾಕರಿಸಿದ್ದಾರೆ.

ಪ್ರತ್ಯೇಕ ರಾಜ್ಯದ ಹೇಳಿಕೆಗೆ ಆಕ್ಷೇಪ
ಕೆಲವು ರಾಜಕೀಯ ನಾಯಕರು ಪ್ರತ್ಯೇಕ ರಾಜ್ಯದ ಬಗ್ಗೆ ಹೇಳಿಕೆ ನೀಡುತ್ತಿರುವುದಕ್ಕೆ ಕನ್ನಡ ಪರ ಸಂಘಟನೆಗಳ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ‘ರಾಜ್ಯದ ಎಲ್ಲ ಭಾಗಗಳು ಅಭಿವೃದ್ಧಿಯಾದರೆ ಮಾತ್ರ ರಾಜ್ಯ ಸರ್ವಾಂಗೀಣ ಪ್ರಗತಿ ಕಾಣಲು ಸಾಧ್ಯ. ನಮ್ಮ ಸರ್ಕಾರ ಎಲ್ಲ ಪ್ರದೇಶಗಳಿಗೂ ಸಮನಾದ ಆದ್ಯತೆ ನೀಡುತ್ತದೆ. ಇದಕ್ಕಾಗಿಯೇ ಹೈದರಾಬಾದ್‌– ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಿ ಸಾವಿರ ಕೋಟಿ ಅನುದಾನ ನೀಡಲಾಗಿದೆ’ ಎಂದರು.

ADVERTISEMENT

ತಮಿಳುನಾಡು ಸರ್ಕಾರ ಹೊಗೇನಕಲ್ ಯೋಜನೆ ರೂಪಿಸಿದಾಗ ನಾವು ವಿರೋಧ ಮಾಡಲಿಲ್ಲ. ಮೇಕೆದಾಟು ಯೋಜನೆಗೆ ತಕರಾರು ಮಾಡುತ್ತಿದೆ. ನಾವು ಸೊಪ್ಪು ಹಾಕುವುದಿಲ್ಲ.
ಸಿದ್ದರಾಮಯ್ಯ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.