ADVERTISEMENT

ರವಿ ಸಾವಿನ ತನಿಖೆ ಶೀಘ್ರ ಪೂರ್ಣ

ಸಿಬಿಐ ನಿರ್ದೇಶಕ ಅನಿಲ್‌ ಕುಮಾರ್‌ ಸಿನ್ಹಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2015, 19:51 IST
Last Updated 27 ಜುಲೈ 2015, 19:51 IST

ಬೆಂಗಳೂರು: ಐಎಎಸ್‌ ಅಧಿಕಾರಿ ಡಿ.ಕೆ. ರವಿ ಸಾವಿನ ಪ್ರಕರಣದ ತನಿಖೆ ಶೀಘ್ರದಲ್ಲೇ ಮುಗಿಯಲಿದೆ ಎಂದು ಕೇಂದ್ರ ತನಿಖಾ ದಳದ (ಸಿಬಿಐ)  ನಿರ್ದೇಶಕ ಅನಿಲ್‌ ಕುಮಾರ್‌ ಸಿನ್ಹಾ ಸೋಮವಾರ ಹೇಳಿದರು.

ಬೆಂಗಳೂರಿನ ಸಿಬಿಐ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಕರಣದ ತನಿಖೆ ತ್ವರಿತವಾಗಿ ನಡೆಯುತ್ತಿದೆ. ಎಲ್ಲ ದೃಷ್ಟಿಕೋನದಿಂದ ತನಿಖೆ ನಡೆಸಲಾಗುತ್ತಿದೆ. ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದೆ’ ಎಂದರು. ‘ತನಿಖಾಧಿಕಾರಿಗಳ ಮೇಲೆ ಒತ್ತಡ ಹಾಕುವುದಕ್ಕೆ ನಾನು ಬಯಸುವುದಿಲ್ಲ. ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕವಾಗಿ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದರು.

ಅಕ್ರಮ ಲಾಟರಿ ಪ್ರಕರಣದ ತನಿಖೆಗೆ ಸಂಬಂಧಿಸಿದ ಪ್ರಶ್ನೆಗೆ, ‘ಶೀಘ್ರದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದಷ್ಟೇ ಹೇಳಿದರು.

ನಂಬಿಕೆ ಉಳಿಸಲು ಕ್ರಮ: ‌‘ಸಿಬಿಐ ಸಂಸ್ಥೆ ಮೇಲೆ ದೇಶದ ಜನರಿಗೆ ನಂಬಿಕೆ ಇದೆ. ಅದನ್ನು ಉಳಿಸುವ ಕೆಲಸವನ್ನು ಮಾಡುತ್ತೇವೆ. ಕಾನೂನಿನ ಚೌಕಟ್ಟಿನಲ್ಲಿ ಸಿಬಿಐ ಕಾರ್ಯನಿರ್ವಹಿಸಬೇಕಾಗುತ್ತದೆ.

ಯಾವುದೇ ಪ್ರಕರಣದ ತನಿಖೆ  ನಡೆಸಿದರೂ, ವರದಿಯನ್ನು ನ್ಯಾಯಾಲಯಕ್ಕೆ ಒಪ್ಪಿಸುತ್ತೇವೆ. ಅಂತಿಮ ತೀರ್ಮಾನವನ್ನು  ಕೋರ್ಟ್‌ ತೆಗೆದುಕೊಳ್ಳುತ್ತದೆ. ಸಿಬಿಐ ತನಿಖೆ ನಡೆಸಿದ ಬಹುತೇಕ ಪ್ರಕರಣಗಳಲ್ಲಿ  ಆರೋಪಿಗಳಿಗೆ ಶಿಕ್ಷೆಯಾಗಿದೆ’ ಎಂದು ಸಂಸ್ಥೆಯ ಮೇಲಿನ ರಾಜಕೀಯ ಒತ್ತಡದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಮಧ್ಯಪ್ರದೇಶದ ವ್ಯಾಪಂ ಹಗರಣದ ತನಿಖೆ ಬಗ್ಗೆ ಪ್ರಸ್ತಾಪಿಸಿದ ಅವರು, ‘ಇತರ ಪ್ರಕರಣಗಳಂತೆ ಇದರ ತನಿಖೆಯನ್ನು ನಡೆಸಲಾಗುತ್ತಿದೆ. ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.