ADVERTISEMENT

ರಾಜ್ಯದ ಎಲ್ಲಾ ಹೋಬಳಿಗಳಿಗೂ ವಿಸ್ತರಣೆ

ಸಣ್ಣ ಹಿಡುವಳಿದಾರರಿಗೆ ಹೆಚ್ಚಿನ ಅನುಕೂಲ, ರೈತರಿಗೆ ಬಾಡಿಗೆಗೆ ಕೃಷಿ ಯಂತ್ರೋಪಕರಣ ಪೂರೈಕೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 19:30 IST
Last Updated 30 ಜೂನ್ 2016, 19:30 IST

ಬಾಗಲಕೋಟೆ: ರೈತಾಪಿ ವರ್ಗದಿಂದ ಬೇಡಿಕೆ ಹೆಚ್ಚಾದ ಕಾರಣ ಕೃಷಿ ಯಂತ್ರೋಪಕರಣಗಳನ್ನು ರಿಯಾಯಿತಿ ದರದಲ್ಲಿ ಬಾಡಿಗೆಗೆ ನೀಡುವ ಯೋಜನೆಯನ್ನು ರಾಜ್ಯದ ಎಲ್ಲಾ 740 ಹೋಬಳಿಗಳಿಗೂ ವಿಸ್ತರಿಸಲು ಸರ್ಕಾರ ಮುಂದಾಗಿದೆ.

ಕೃಷಿ ಕೂಲಿ ಕಾರ್ಮಿಕರ ಕೊರತೆ ನೀಗಿಸಲು ಹಾಗೂ ಸಣ್ಣ ರೈತರಿಗೆ ನೆರವಾಗಲು 2014ರ ಆಗಸ್ಟ್‌ನಲ್ಲಿ ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ (ಎಸ್‌ಕೆಡಿಆರ್‌ಪಿ) ಹಾಗೂ ದೆಹಲಿ ಮೂಲದ ಐಸಾಪ್ಸ್‌ ಸಂಸ್ಥೆ ಸಹಯೋಗದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ಸದ್ಯಕ್ಕೆ ಈ ಯೋಜನೆಯು ರಾಜ್ಯದ 175 ಹೋಬಳಿಗಳಲ್ಲಿ ಜಾರಿಯಲ್ಲಿದ್ದು 1,28,650 ರೈತರು ಉಪಯೋಗ ಪಡೆದಿದ್ದಾರೆ.

‘ರಾಜ್ಯದ ಇತರೆಡೆಯಿಂದಲೂ ಬೇಡಿಕೆ ಬಂದ ಕಾರಣ ಎಲ್ಲಾ ಹೋಬಳಿಗಳಿಗೂ ಯೋಜನೆಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. ಇದೀಗ ಎರಡನೇ ಹಂತದಲ್ಲಿ 315 ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಾನ್‌ಡೀರ್, ವಿಎಸ್‌ಟಿ ಹಾಗೂ ಮಹೀಂದ್ರಾ ಕಂಪೆನಿಗಳೊಂದಿಗೆ ರಾಜ್ಯ ಸರ್ಕಾರ ಒಪ್ಪಂದ (ಎಂಒಯು) ಮಾಡಿಕೊಂಡಿದೆ. ಆಗಸ್ಟ್‌ ವೇಳೆಗೆ ಎಲ್ಲಾ ಹೋಬಳಿಗಳಲ್ಲೂ ಈ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ’ ಎಂದು ಕೃಷಿ ಇಲಾಖೆ ಕೇಂದ್ರ ಕಚೇರಿಯ ಜಂಟಿ ನಿರ್ದೇಶಕ ಸಿ.ವಿದ್ಯಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.

ಮೂರನೇ ಹಂತದಲ್ಲಿ 250 ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಲಾಗಿದ್ದು, ಡಿಸೆಂಬರ್‌ ವೇಳೆಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಶೇ 75ರಷ್ಟು ಪಾಲುದಾರಿಕೆ:  ಒಪ್ಪಂದದ ಅನ್ವಯ ಪ್ರತಿ ಹೋಬಳಿಯಲ್ಲಿ ₹ 50 ಲಕ್ಷ ಮೊತ್ತದ ಉಪಕರಣಗಳನ್ನು ಖರೀದಿಸಿ ರೈತರಿಗೆ ದಿನ ಹಾಗೂ ಗಂಟೆಗಳ ಲೆಕ್ಕದಲ್ಲಿ ಬಾಡಿಗೆ ನೀಡಲಾಗುವುದು. ಇದರಲ್ಲಿ ಶೇ 75ರಷ್ಟು ಪಾಲುದಾರಿಕೆಯನ್ನು ಸರ್ಕಾರ ಹೊಂದಲಿದೆ. ಶೇ 25ರಷ್ಟು ಹಣವನ್ನು ಆಯಾ ಕಂಪೆನಿಗಳು ಭರಿಸಲಿವೆ. ಎರಡನೇ ವರ್ಷ ಸರ್ಕಾರದ ಪಾಲುದಾರಿಕೆ ಪ್ರಮಾಣ ಶೇ 50ಕ್ಕೆ ಇಳಿಯಲಿದೆ.

ಬೆಲೆ ನಿಗದಿ: ‘ಕೃಷಿ ಯಂತ್ರೋಪಕರಣಗಳ ಬಾಡಿಗೆಯನ್ನು ನಿರ್ಧರಿಸಲು ಆಯಾ ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗುತ್ತಿದೆ. ಆ ಭಾಗದಲ್ಲಿ ಹೆಚ್ಚು ಬಳಕೆಯಾಗುವ ಕೃಷಿ ಉಪಕರಣಗಳಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಇರುವ ಬಾಡಿಗೆಯ ಮಾಹಿತಿ ಪಡೆದು ಸಮಿತಿ ಬೆಲೆ ನಿಗದಿ ಮಾಡಲಿದೆ’ ಎಂದು ಬಾಗಲಕೋಟೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಪಿ.ರಮೇಶಕುಮಾರ್‌ ಹೇಳುತ್ತಾರೆ.

‘ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ನೀಡುವುದರಿಂದ ಸಣ್ಣ ಹಿಡುವಳಿದಾರರಿಗೆ ಹೆಚ್ಚು ಅನುಕೂಲವಾಗಲಿದೆ. ಜಾನ್‌ಡೀರ್ ಕಂಪೆನಿ ಕಡಲೆ ಒಕ್ಕಣೆ ಮಾಡುವ ಯಂತ್ರವನ್ನು ಅಭಿವೃದ್ಧಿಪಡಿಸಿದ್ದು, ಅದೂ ಸೇವಾ ಕೇಂದ್ರಗಳಲ್ಲಿ ದೊರೆಯಲಿದೆ’ ಎಂದು ಅವರು ತಿಳಿಸಿದರು.

ಬಾಡಿಗೆಗೆ ಲಭ್ಯವಿರುವ ಯಂತ್ರೋಪಕರಣಗಳು
ಟ್ರ್ಯಾಕ್ಟರ್, ಪವರ್ ಟಿಲ್ಲರ್, ಕುಂಟೆ, ನೇಗಿಲು, ಎಂಬಿ ಫ್ಲೋ, ರೋಲ್ಟಾವೇಟರ್‌, ಸ್ಪ್ರೇಯರ್‌, ನೀರಿನ ಟ್ಯಾಂಕರ್, ಕಂಬೈನ್ಡ್ ಹಾರ್ವೆಸ್ಟರ್ (ಬೃಹತ್ ಒಕ್ಕಣೆ ಯಂತ್ರ), ಶುಗರ್‌ಕೇನ್‌ ಹಾರ್ವೆಸ್ಟರ್ ಸೇರಿದಂತೆ ಆಯಾ ಪ್ರದೇಶಗಳಲ್ಲಿ ಹೆಚ್ಚು ಬಳಕೆಯಾಗುವ ಕೃಷಿ ಯಂತ್ರೋಪಕರಣಗಳು ಸೇವಾ ಕೇಂದ್ರಗಳಲ್ಲಿ ದೊರೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.