ADVERTISEMENT

ರಾಜ್ಯದ ಹಲವೆಡೆ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2017, 19:30 IST
Last Updated 19 ಆಗಸ್ಟ್ 2017, 19:30 IST
ತುಮಕೂರಿನಲ್ಲಿ ಶನಿವಾರ ಸಂಜೆ ಧಾರಾಕಾರ ಮಳೆ ಸುರಿಯುತ್ತಿದ್ದಾಗ ಮಾರುಕಟ್ಟೆ ಪ್ರದೇಶದ ರಸ್ತೆಯಲ್ಲಿ ಕಂಡು ಬಂದ ನೋಟ
ತುಮಕೂರಿನಲ್ಲಿ ಶನಿವಾರ ಸಂಜೆ ಧಾರಾಕಾರ ಮಳೆ ಸುರಿಯುತ್ತಿದ್ದಾಗ ಮಾರುಕಟ್ಟೆ ಪ್ರದೇಶದ ರಸ್ತೆಯಲ್ಲಿ ಕಂಡು ಬಂದ ನೋಟ   

ಬೆಂಗಳೂರು: ಮಲೆನಾಡು, ಘಟ್ಟಪ್ರದೇಶ, ದಾವಣಗೆರೆ ಹಾಗೂ ಚಿಕ್ಕಬಳ್ಳಾಪುರದ ವಿವಿಧೆಡೆ ಶನಿವಾರ ಉತ್ತಮ ಮಳೆಯಾಗಿದೆ. ಕರಾವಳಿಯಲ್ಲಿ ಮಧ್ಯಾಹ್ನ ಕೆಲ ಕಾಲ ಮಳೆ ಸುರಿಯಿತು. ನಂತರ ಬಿಸಿಲಿನ ವಾತಾವರಣ ಇತ್ತು.

ಕೊಡಗು ಜಿಲ್ಲೆಯಲ್ಲಿ ಮಳೆ ಬಿರುಸುಗೊಂಡಿದ್ದು ಧಾರಾಕಾರ ಮಳೆ ಸುರಿಯಿತು. ಮಡಿಕೇರಿ, ನಾಪೋಕ್ಲು, ತಲಕಾವೇರಿ, ಭಾಗಮಂಡಲದಲ್ಲಿ ದಿನವಿಡೀ ಮಳೆ ಸುರಿಯಿತು.
ವಿರಾಜಪೇಟೆ, ಸೋಮವಾರಪೇಟೆ ತಾಲ್ಲೂಕಿನಲ್ಲೂ ಉತ್ತಮ ಮಳೆಯಾಗಿದೆ. ಕಾವೇರಿ ನದಿಯಲ್ಲಿ ನೀರಿನ ಹರಿವು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ.

ಚಿಕ್ಕಬಳ್ಳಾಪುರ ನಗರದಲ್ಲಿ ಸಂಜೆ ಭಾರಿ ಮಳೆ ಸುರಿಯಿತು. ಅನೇಕ ದಿನಗಳಿಂದ ಮಳೆ ಇಲ್ಲದೆ ಬರಗಾಲದ ಛಾಯೆ ಆವರಿಸುತ್ತಿರುವ ಹೊತ್ತಿನಲ್ಲಿ ವರುಣನ ಈ ಆರ್ಭಟ ಕಂಡು ತಾಲ್ಲೂಕಿನ ರೈತರು ಸಂತಸಗೊಂಡರು.

ಚಿಂತಾಮಣಿ, ಗುಡಿಬಂಡೆ, ಬಾಗೇಪಲ್ಲಿ, ಶಿಡ್ಲಘಟ್ಟ ತಾಲ್ಲೂಕುಗಳಲ್ಲಿ ತುಂತುರು ಮಳೆ ಸುರಿದರೆ, ಮೇವಿನ ಕೊರತೆ ತೀವ್ರವಾಗಿ ಕಾಡುತ್ತಿರುವ ಗೌರಿಬಿದನೂರು ತಾಲ್ಲೂಕಿನಲ್ಲಿ ಮಳೆ ಕಾಣಿಸಿಕೊಂಡಿಲ್ಲ. ತುಮಕೂರು ನಗರದಲ್ಲೂ ಮಧ್ಯಾಹ್ನ ಮಳೆ ಸುರಿಯಿತು.

ಉತ್ತಮ ಮಳೆ: ಸಾಗರ, ಭದ್ರಾವತಿ, ಹೊಸನಗರ, ಶಿಕಾರಿಪುರ, ತೀರ್ಥಹಳ್ಳಿ ತಾಲ್ಲೂಕಿನ ಭಾಗದಲ್ಲಿ ಉತ್ತಮ ಮಳೆ ಸುರಿದಿದೆ. ಶಿವಮೊಗ್ಗ ನಗರದಲ್ಲಿ ಸಾಧಾರಣ ಮಳೆಯಾಗಿದೆ.

ದಾವಣಗೆರೆಯಲ್ಲಿ ಮಳೆ: ಕೆಲವು ದಿನಗಳ ವಿರಾಮದ ನಂತರ ದಾವಣಗೆರೆ ನಗರದಲ್ಲಿ ಶನಿವಾರ ಮಧ್ಯಾಹ್ನ ಸುಮಾರು ಒಂದು ಗಂಟೆ ಕಾಲ ಉತ್ತಮ ಮಳೆಯಾಗಿದೆ.
ಚನ್ನಗಿರಿ ತಾಲ್ಲೂಕಿನಲ್ಲೂ ಬಿರುಸಿನ ಮಳೆಯಾಗಿದೆ. ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗ ಸೇರಿದಂತೆ ಕೆಲಭಾಗಗಳಲ್ಲಿ ಮಳೆಯಾಗಿದೆ.

ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಮತ್ತು ಒಳನಾಡಿನ ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಆಗುಂಬೆಯಲ್ಲಿ 10 ಸೆಂ.ಮೀ., ಮಂಕಿಯಲ್ಲಿ 9 ಸೆಂ.ಮೀ., ಶಿರಾಲಿಯಲ್ಲಿ 7 ಸೆಂ.ಮೀ., ಸಿದ್ದಾಪುರದಲ್ಲಿ 6 ಸೆಂ.ಮೀ, ಮಂಗಳೂರು, ಸುಳ್ಯ, ಕೋಟ, ಕಾರ್ಕಳ, ಕುಂದಾಪುರ, ಭಾಗಮಂಡಲ, ಮಾದಾಪುರ, ಸೋಮವಾರಪೇಟೆಯಲ್ಲಿ ತಲಾ 5 ಸೆಂ.ಮೀ. ಮಳೆಯಾಗಿದೆ.
*
ಸಿಡಿಲಿಗೆ ಯುವಕ ಬಲಿ
ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮ ಹೋಬಳಿಯ ಮುಂಜನಹಳ್ಳಿ ಗ್ರಾಮ ಸಮೀಪ ಶನಿವಾರ ಬೆಳಿಗ್ಗೆ ಸಿಡಿಲು ಬಡಿದು ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಿಕ್ಕಭೇರ್ಯ ಗ್ರಾಮದ ನಿವಾಸಿ ಸೀನೇಗೌಡ ಎಂಬುವರ ಪುತ್ರ ರಮೇಶ್ (25) ಮೃತಪಟ್ಟವರು. ಅಂಗಡಿಯಿಂದ ಸಾಮಗ್ರಿ ತರಲು ಬೈಕಿನಲ್ಲಿ ಕೆ.ಆರ್.ನಗರಕ್ಕೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಮಳೆ ಆರಂಭಗೊಂಡಿದ್ದು, ಮುಂಜನಹಳ್ಳಿ ಬಳಿ ಮರದ ಕೆಳಗೆ ನಿಂತಿದ್ದರು. ಈ ವೇಳೆ ಸಿಡಿಲು ಬಡಿದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.