ADVERTISEMENT

ರಾಜ್ಯದ ಹಲವೆಡೆ ತಂಪೆರೆದ ಮಳೆ: ಸಿಡಿಲಿಗೆ ಮೂವರ ಬಲಿ

​ಪ್ರಜಾವಾಣಿ ವಾರ್ತೆ
Published 3 ಮೇ 2016, 19:30 IST
Last Updated 3 ಮೇ 2016, 19:30 IST
ಚಿಕ್ಕಮಗಳೂರು ನಗರದಲ್ಲಿ ಮಂಗಳವಾರ ಮಧ್ಯಾಹ್ನ ಮಳೆ ಸುರಿದಾಗ ಕಂಡು ಬಂದ ದೃಶ್ಯ.–ಪ್ರಜಾವಾಣಿ ಚಿತ್ರ
ಚಿಕ್ಕಮಗಳೂರು ನಗರದಲ್ಲಿ ಮಂಗಳವಾರ ಮಧ್ಯಾಹ್ನ ಮಳೆ ಸುರಿದಾಗ ಕಂಡು ಬಂದ ದೃಶ್ಯ.–ಪ್ರಜಾವಾಣಿ ಚಿತ್ರ   

ಬೆಂಗಳೂರು: ಹಾಸನ, ಚಿಕ್ಕಮಗಳೂರು, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ, ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳ ಹಲವೆಡೆ ಮಂಗಳವಾರ ಗುಡುಗು–ಸಿಡಿಲಿನಿಂದ ಕೂಡಿದ ಆಲಿಕಲ್ಲು ಮಳೆಯಾಗಿದೆ. ಅನೇಕ ಕಡೆ ವಿದ್ಯುತ್‌ ವ್ಯತ್ಯಯವಾಗಿದೆ.

ಚಿತ್ರದುರ್ಗ ಜಿಲ್ಲೆ ಭರಮಸಾಗರ ಸಮೀಪದ ಗೊಲ್ಲರಹಟ್ಟಿ ಬಳಿ ಸಿಡಿಲು ಬಡಿದು ಹಂಪಳರಾಜು (27) ಎಂಬುವವರು ಸಾವನ್ನಪ್ಪಿದ್ದಾರೆ.
ಸಿಡಿಲು ಬಡಿದು ಹಿರಿಯೂರು ತಾಲ್ಲೂಕಿನ ಎಂ.ಡಿ.ಕೋಟೆಯಲ್ಲಿ ಲಕ್ಷ್ಮಿ (36, ಶಿವಮೊಗ್ಗ ತಾಲ್ಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಮಹಾಬಲ (45) ಎಂಬುವವರು ಮೃತಪಟ್ಟಿದ್ದಾರೆ.

ಭದ್ರಾವತಿ ತಾಲ್ಲೂಕು ಮತ್ತು ಸಾಗರ ತಾಲ್ಲೂಕಿನ ಆನಂದಪುರ, ದಾವಣಗೆರೆ ನಗರ, ಚನ್ನಗಿರಿ, ಹರಿಹರ ತಾಲ್ಲೂಕಿನ ಹಲವೆಡೆ ಮಳೆಯಾಗಿದೆ. ಹರಪನಹಳ್ಳಿಯಲ್ಲಿ ಮಂಗಳವಾರ ರಾತ್ರಿ ಆಲಿಕಲ್ಲು ಮಳೆ ಬಿತ್ತು.

ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಹಾಗೂ ಕೊಡಗು ಜಿಲ್ಲೆಗಳಲ್ಲಿ ಬಿದ್ದ ಮಳೆಯಿಂದ ವಾತಾವರಣ ಸ್ವಲ್ಪ ತಂಪಾಯಿತು.

ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕು, ಹುಣಸೂರು ತಾಲ್ಲೂಕಿನಲ್ಲಿ ಸೋಮವಾರ ರಾತ್ರಿ ಮಳೆ ಸುರಿದಿದೆ.ಮಡಿಕೇರಿ ನಗರದಲ್ಲಿ  ಮಂಗಳವಾರ ಗುಡುಗು, ಮಿಂಚು ಸಹಿತ ಮಳೆ ಆರ್ಭಟಿಸಿತು.

ಬರಪೀಡಿತ ಕಡೂರು ಸೇರಿದಂತೆ ಚಿಕ್ಕಮಗಳೂರು ಹಾಗೂ ಮೂಡಿಗೆರೆ ತಾಲ್ಲೂಕಿನ ಹಲವೆಡೆ ಮಂಗಳವಾರ ಗುಡುಗು ಸಹಿತ ಧಾರಾಕಾರ ಮಳೆ ಆರ್ಭಟಿಸಿದೆ.

ಚಿಕ್ಕಮಗಳೂರು ತಾಲ್ಲೂಕಿನ ಹಿರೇಕೊಳಲೆ, ಆವತಿ, ಮಲ್ಲಂದೂರು, ವಸ್ತಾರೆ, ಆಲ್ದೂರು ಮತ್ತಿತರ ಕಡೆಗಳಲ್ಲಿ ಹದಮಳೆ ಬಿದ್ದಿದೆ. ಮಳೆ ಇಲ್ಲದೆ ಸಂಪೂರ್ಣ ಒಣಗುವ ಸ್ಥಿತಿಗೆ ತಲುಪಿದ್ದ ಕಾಫಿ, ಮೆಣಸು, ಅಡಿಕೆ, ತೆಂಗು ಮತ್ತಿತರ ಬೆಳೆಗಳಿಗೆ ಕೊಂಚ ಚೇತರಿಕೆ ಸಿಕ್ಕಿದೆ.

ಸಾಧಾರಣ ಮಳೆ : ಪುತ್ತೂರಿನ ಗಡಿ ಭಾಗಗಳಾದ ಈಶ್ವರಮಂಗಲ, ಪಳ್ಳತ್ತೂರು ಸೇರಿದಂತೆ ಗ್ರಾಮೀಣ ಪ್ರದೇಶದ ಹಲವು ಕಡೆಗಳಲ್ಲಿ  ಸಾಧಾರಣ ಮಳೆಯಾಗಿದೆ.

ಬಳ್ಳಾರಿ ನಗರ ಮಾತ್ರವಲ್ಲದೆ ಬಿಸಿಲಹಳ್ಳಿ, ಬೇವಿನಹಳ್ಳಿ, ಕಕ್ಕಬೇವಿನಹಳ್ಳಿ, ಅಮರಾಪುರ, ಕೆ. ವೀರಾಪುರ, ಪರಮದೇವನಹಳ್ಳಿ, ಭೈರದೇವನಹಳ್ಳಿ, ಚಾಗನೂರು, ಸಿರಿವಾರ, ಸಂಗನಕಲ್ಲು, ಕಪ್ಪಗಲ್‌ ಸೇರಿದಂತೆ ಇತರ ಗ್ರಾಮಗಳಲ್ಲಿ ಮಳೆಯಾಗಿದೆ.

ಬಳ್ಳಾರಿಯಲ್ಲಿ ಮೂರ್ನಾಲ್ಕು ದಿನಗಳಿಂದ ತಾಪಮಾನ 43 ಡಿಗ್ರಿ ಸೆಲ್ಸಿಯಸ್‌ಗೆ ಸ್ಥಿರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.