ADVERTISEMENT

ರಾಜ್ಯ ಪೊಲೀಸರ ವೇತನ ಶೇ 30–35ರಷ್ಟು ಹೆಚ್ಚಳಕ್ಕೆ ಶಿಫಾರಸು

ಸರ್ಕಾರಕ್ಕೆ ಎಡಿಜಿಪಿ ರಾಘವೇಂದ್ರ ಔರಾದಕರ ಅವರಿಂದ ಪೊಲೀಸ್‌ ವೇತನ ಪರಿಷ್ಕರಣಾ ಸಮಿತಿಯ ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 19:30 IST
Last Updated 26 ಸೆಪ್ಟೆಂಬರ್ 2016, 19:30 IST
ರಾಜ್ಯ ಪೊಲೀಸರ ವೇತನ ಶೇ 30–35ರಷ್ಟು ಹೆಚ್ಚಳಕ್ಕೆ ಶಿಫಾರಸು
ರಾಜ್ಯ ಪೊಲೀಸರ ವೇತನ ಶೇ 30–35ರಷ್ಟು ಹೆಚ್ಚಳಕ್ಕೆ ಶಿಫಾರಸು   

ಬೆಂಗಳೂರು: ರಾಜ್ಯ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿ ವೇತನವನ್ನು ಶೇ 30 ರಿಂದ 35ರಷ್ಟು ಹೆಚ್ಚಿಸುವಂತೆ ಪೊಲೀಸ್‌ ವೇತನ ಪರಿಷ್ಕರಣಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಸಮಿತಿಯ ಶಿಫಾರಸು ಆಧರಿಸಿ ವೇತನ ಪರಿಷ್ಕರಿಸಿದರೆ ಅಧಿಕಾರಿ ಮತ್ತು ಸಿಬ್ಬಂದಿಗೆ ₹6,500 ರಿಂದ ₹8,500 ರವರೆಗೆ ಹೆಚ್ಚಳವಾಗಲಿದೆ. ಹಾಲಿ ಕರ್ತವ್ಯದಲ್ಲಿರುವ ಸಿಬ್ಬಂದಿ ವೇತನ ಹೆಚ್ಚಿಸಿದರೆ ಸರ್ಕಾರಕ್ಕೆ ವಾರ್ಷಿಕ ₹600 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ.

ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ರಾಘವೇಂದ್ರ ಔರಾದಕರ ಅವರ ನೇತೃತ್ವದಲ್ಲಿ ರಚಿಸಿದ ವೇತನ ಪರಿಷ್ಕರಣಾ ಸಮಿತಿ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರಿಗೆ ಸೋಮವಾರ ವರದಿ ಸಲ್ಲಿಸಿತು.

ವರದಿ ಸ್ವೀಕರಿಸಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಜಿ. ಪರಮೇಶ್ವರ್‌ ಅವರು, ವರದಿಯ ಶಿಫಾರಸುಗಳ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು. ಹಣಕಾಸು ಇಲಾಖೆಯ ಅನುಮೋದನೆ ಪಡೆದ ಬಳಿಕ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ವೇತನ ಪರಿಷ್ಕರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ವೇತನ ಪರಿಷ್ಕರಿಸಿದರೆ ಹೆಡ್‌ ಕಾನ್‌ಸ್ಟೆಬಲ್‌ಗಳು ಪಡೆಯುತ್ತಿರುವ ವೇತನ ಕಾನ್‌ಸ್ಟೆಬಲ್‌ಗಳಿಗೆ ಸಿಗಲಿದೆ. ಈಗ ಇರುವ ವೇತನ ಪದ್ಧತಿಯನ್ವಯ ಕಾನ್‌ಸ್ಟೆಬಲ್‌ಗಳಿಗೆ ಮೂಲವೇತನ ಮತ್ತು ವಿವಿಧ ಭತ್ಯೆ ಸೇರಿ ₹19,606  ಮಾಸಿಕ ಸಂಬಳ ಸಿಗುತ್ತಿದೆ. ಪರಿಷ್ಕರಿಸಿದ ಬಳಿಕ ಈ ಮೊತ್ತ ₹ 23,350 ಕ್ಕೆ ಏರಿಕೆಯಾಗಲಿದೆ ಎಂದು ವಿವರಿಸಿದರು.

ಈ ಪರಿಷ್ಕರಣೆ ಐಪಿಎಸ್‌ ಶ್ರೇಣಿಯ ಅಧಿಕಾರಿಗಳಿಗೆ ಅನ್ವಯವಾಗುವುದಿಲ್ಲ. ಕರ್ನಾಟಕ ಪೊಲೀಸ್‌ ಸೇವೆಯ ಅಧಿಕಾರಿಗಳಿಗೆ ಸದ್ಯ ₹60,608 ಮಾಸಿಕ ವೇತನ ಸಿಗುತ್ತಿದ್ದು, ಈ ಮೊತ್ತ ₹66,483ಕ್ಕೆ ಹೆಚ್ಚಳವಾಗಲಿದೆ ಎಂದು ಪರಮೇಶ್ವರ್‌ ಹೇಳಿದರು.

ಶೇ 39ರಷ್ಟು ಮಂದಿ ಹೊರಕ್ಕೆ: ಪೊಲೀಸ್ ಇಲಾಖೆಗೆ ಸೇರಿ ಒಂದು ವರ್ಷ ಪೂರ್ಣಗೊಳಿಸುವುದಕ್ಕೆ ಮುನ್ನವೇ ಕೆಲಸಕ್ಕೆ ರಾಜೀನಾಮೆ ನೀಡುವವರ ಪ್ರಮಾಣ  ಶೇ 39ರಷ್ಟಿದೆ.  10 ವರ್ಷಗಳ ಹಿಂದೆ ಶೇ 0.88 ರಷ್ಟಿದ್ದ ಈ ಪ್ರಮಾಣ ಏಕಾಏಕಿ ಏರಿಕೆಯಾಗಿದೆ ಎಂದು ಪರಮೇಶ್ವರ್‌   ಹೇಳಿದರು.
ಸರ್ಕಾರ ಅಥವಾ ಖಾಸಗಿ ಸಂಸ್ಥೆಯಲ್ಲಿ ಉತ್ತಮ ಸಂಬಳದ  ಉದ್ಯೋಗ ಸಿಕ್ಕಿದ್ದರಿಂದಾಗಿ ಕೆಲವರು ರಾಜಿನಾಮೆ ನೀಡಿದ್ದಾರೆ. ವೇತನ ಕಡಿಮೆ ಎಂಬ ಕಾರಣಕ್ಕೆ ಮತ್ತೆ ಕೆಲವರು ರಾಜಿನಾಮೆ ನೀಡಿದ್ದಾರೆ. ಪೊಲೀಸ್‌ ಇಲಾಖೆಯಲ್ಲೂ ಒಳ್ಳೆಯ ವೇತನ ಸಿಗುತ್ತಿದ್ದು, ಸೇವೆ ಸಲ್ಲಿಸುವ ಉತ್ತಮ ವಾತಾವರಣವಿದೆ ಎಂಬ ಭರವಸೆ ಮೂಡಿಸಲು ಇಲಾಖೆ ಯತ್ನಿಸುತ್ತಿದೆ ಎಂದರು.

ಪೊಲೀಸರ ವೇತನ ಪರಿಷ್ಕರಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದಲೂ ಇತ್ತು. ಈ  ಕಾರಣದಿಂದಾಗಿ ಪರಿಷ್ಕರಣಾ ಸಮಿತಿ ರಚಿಸಲಾಗಿತ್ತು. ವಿವಿಧ ರಾಜ್ಯಗಳಲ್ಲಿನ ಪೊಲೀಸ್‌ ಸಿಬ್ಬಂದಿ ವೇತನ ಶ್ರೇಣಿಯನ್ನು ಅಧ್ಯಯನ ಮಾಡಿ ಸಮಿತಿ ವರದಿ ಸಲ್ಲಿಸಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ದೇಶದಲ್ಲಿ ಎಂಟನೆ ಸ್ಥಾನದಲ್ಲಿದೆ. ವೇತನ ಪರಿಷ್ಕರಣೆಯಾದ ಬಳಿಕ ಕರ್ನಾಟಕ ಐದನೆ ಸ್ಥಾನಕ್ಕೆ ಏರಲಿದೆ ಎಂದು ಹೇಳಿದರು.

ಹಗಲು ರಾತ್ರಿಯೆನ್ನದೆ ಕರ್ತವ್ಯ ನಿರ್ವಹಿಸುವವರಿಗೆ ವಿಶೇಷ ಭತ್ಯೆಯನ್ನು ನೀಡುವ ಕುರಿತು ಪೊಲೀಸ್‌ ವೇತನ ಪರಿಷ್ಕರಣಾ ಸಮಿತಿ ಶಿಫಾರಸು ಮಾಡಿದೆ ಎಂದು ಪರಮೇಶ್ವರ್‌ ಹೇಳಿದರು.

ವಿಶೇಷ ಭತ್ಯೆಗೆ ಸಮಿತಿ ಶಿಫಾರಸುಗಳು
* ನಾಗರಿಕ ಮತ್ತು ಸಂಚಾರ ಪೊಲೀಸರಿಗೆ ವಿಶೇಷ ಭತ್ಯೆ ₹1,000
*
 ದೈಹಿಕ ಆರೋಗ್ಯ ಭತ್ಯೆ ₹500
*
 ಸಮವಸ್ತ್ರ ಭತ್ಯೆ ₹500
*
 3 ದಿನ ವಿಶ್ರಾಂತಿರಹಿತ ಸೇವಾ ಭತ್ಯೆ  ₹2,500

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.