ADVERTISEMENT

ರಾಮಕಥಾ ಗಾಯಕಿ ಕುಟುಂಬಸ್ಥರಿಗೆ ಜೀವ ಬೆದರಿಕೆ: ದೂರು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2015, 20:12 IST
Last Updated 8 ಅಕ್ಟೋಬರ್ 2015, 20:12 IST

ಪುತ್ತೂರು: ರಾಮಕಥಾ ಗಾಯಕಿ ಪ್ರೇಮಲತಾ ದಿವಾಕರ್ ಅವರ ಸಹೋದರ ಪುತ್ತೂರು ನಿವಾಸಿ ವೆಂಕಟಕೃಷ್ಣ ಕೆ.ಕೆ. ಮತ್ತು ಸಂಬಂಧಿಕ ಕೆದಿಲ ನಿವಾಸಿ ಕೆ. ಗಣೇಶ್ ಅವರಿಗೆ ಬೆದರಿಕೆ ಪತ್ರ ಬಂದಿರುವುದಾಗಿ ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿದೆ.

ವೆಂಕಟಕೃಷ್ಣ ಮತ್ತು ಡಾ. ಗಣೇಶ್ ಅವರಿಗೆ ಅ.3ರಂದು ಅಂಚೆ ಮೂಲಕ ಕಂಪ್ಯೂಟರ್‌ನಲ್ಲಿ ಟೈಪ್ ಮಾಡಿದ ಪತ್ರ ಬಂದಿದ್ದು, ಈ ಪತ್ರದಲ್ಲಿ ‘ಶ್ಯಾಮಶಾಸ್ತ್ರಿಯವರು ಮೃತಪಡಲು ನೀವೇ ಕಾರಣ. ಸತ್ಯ ಒಪ್ಪಿಕೊಂಡು ನಾಟಕಕ್ಕೆ ಕೊನೆಯ ಪರದೆ ಎಳೆಯುವಂತೆ ಹೇಳುತ್ತಾ ಇದ್ದೇವೆ. ತಪ್ಪಿದಲ್ಲಿ ಮುಂದಿನ ಅನಾಹುತಗಳಿಗೆ ನೀವೇ ಜವಾಬ್ದಾರರು- ಶ್ಯಾಮಶಾಸ್ತ್ರಿಗಳ ಅಭಿಮಾನಿ ಬಳಗ’ ಎಂದು ಬರೆಯಲಾಗಿದೆ. ಈ ಪತ್ರ ಬಂದ ಬಳಿಕ ವೆಂಕಟಕೃಷ್ಣ ಕೆ.ಕೆ. ಮತ್ತು ಕೆ. ಗಣೇಶ್ ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಶ್ಯಾಮಶಾಸ್ತ್ರಿ ಅಭಿಮಾನಿ ಬಳಗ ನಮಗೆ ಪತ್ರ ಬರೆಯಲು ಸಾಧ್ಯವಿಲ್ಲ. ನಾವೆಲ್ಲಾ ಶ್ಯಾಮಶಾಸ್ತ್ರಿ ಅಭಿಮಾನಿ ಬಳಗದಲ್ಲಿದ್ದೇವೆ. ಇದು ರಾಘವೇಶ್ವರ ಸ್ವಾಮೀಜಿ ಅವರ ಕಡೆಯವರ ಕೃತ್ಯ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅವರು ಆರೋಪಿಸಿದ್ದಾರೆ.

ಸ್ವಾಮೀಜಿಗಳು ತನ್ನ ವಿರೋಧಿಗಳ ಸದ್ದನ್ನು ಅಡಗಿಸಬೇಕು ಎಂದು ಕರೆ ಕೊಟ್ಟಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ನಿಟ್ಟಿನಲ್ಲಿ ಸ್ವಾಮೀಜಿ ಅವರ ಮೇಲಿರುವ ಆರೋಪವನ್ನು ತಪ್ಪಿಸಲು ಮಾಡುವ ಪೂರ್ವಯೋಜಿತ ತಂತ್ರ ಇದಾಗಿರಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.