ADVERTISEMENT

ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಿಸಿ

ದೌರ್ಜನ್ಯ ತಡೆ ಸಮಿತಿಯ ಉಗ್ರಪ್ಪ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2016, 19:30 IST
Last Updated 20 ಡಿಸೆಂಬರ್ 2016, 19:30 IST

ಬೆಂಗಳೂರು: ಅತ್ಯಾಚಾರದ ಆರೋಪ ಎದುರಿಸುತ್ತಿರುವ ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಶ್ರೀಗಳನ್ನು ಪದಚ್ಯುತಗೊಳಿಸಿ, ಮಠಕ್ಕೆ ಆಡಳಿತಾಧಿಕಾರಿ ನೇಮಿಸಬೇಕು ಎಂದು ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಆಗ್ರಹಿಸಿದರು.

ಅಖಿಲ ಹವ್ಯಕರ ಒಕ್ಕೂಟದ ಎಂ.ಎನ್. ಭಟ್ ಮದಗುಣಿ ಮತ್ತಿತರರು ಸಲ್ಲಿಸಿದ ಮನವಿ ಸ್ವೀಕರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿದರು.

‘ರಾಘವೇಶ್ವರ ಭಾರತಿ ಶ್ರೀಗಳು ಮಾನವ ಸಹಜ ದೌರ್ಬಲ್ಯಗಳಿಂದ ಹೊರತಾಗಿಲ್ಲ. ಹೀಗಾಗಿ ಮಠದ ಪಾವಿತ್ರ್ಯಕ್ಕೆ  ಧಕ್ಕೆಯಾಗಿದೆ. ಅವರು ಅತ್ಯಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಪದಚ್ಯುತಿಗೊಳಿಸಿ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡುವಂತೆ ನಿಯೋಗ ಮನವಿ ಮಾಡಿದೆ’ ಎಂದರು.

ADVERTISEMENT

‘ಮಠ ಬಿಟ್ಟು ಹಿಮಾಲಯಕ್ಕೆ ತೆರಳುವುದಾಗಿ ಶ್ರೀಗಳು ತಿಳಿಸಿದ್ದರು. ಆದರೆ, ತಮ್ಮ ನಿರ್ಧಾರ ಬದಲಿಸಿ ಮಠದಲ್ಲಿಯೇ ಮುಂದುವರಿದಿದ್ದಾರೆ. ಮಠಕ್ಕೆ ಆಡಳಿತಾಧಿಕಾರಿ ನೇಮಿಸುವ ಕುರಿತಂತೆ ಮುಖ್ಯ ಕಾರ್ಯದರ್ಶಿ ವಿಚಾರಣೆ ನಡೆಸುತ್ತಿದ್ದಾರೆ. ಆಡಳಿತಾಧಿಕಾರಿ ನೇಮಿಸಲು ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿಗೆ ಶಿಫಾರಸು ಮಾಡಿ ಎಂದು ನಿಯೋಗ ಕೋರಿದೆ’ ಎಂದರು. ‘ಶ್ರೀಗಳ ವಿರುದ್ಧ ಕೇಳಿ ಬಂದ ಅತ್ಯಾಚಾರ ಪ್ರಕರಣದ ಬಗ್ಗೆ ಆರಂಭಿಸಿದ ಸಿಐಡಿ ತನಿಖೆ ಒಂದು ವರ್ಷವಾದರೂ ಮುಕ್ತಾಯವಾಗಿಲ್ಲ. ಈ ಬಗ್ಗೆ ನಿಯೋಗ ಆಕ್ರೋಶ ವ್ಯಕ್ತಪಡಿಸಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.