ADVERTISEMENT

ರಾಮನ ಪ್ರೇರಣೆಯಂತೆ ನಿನ್ನನ್ನು ಸಮರ್ಪಿಸಿಕೊ!

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2015, 20:00 IST
Last Updated 16 ಅಕ್ಟೋಬರ್ 2015, 20:00 IST

ಬೆಂಗಳೂರು: ‘ನಮಗೆ ರಾಮನೊಂದಿಗೆ ಸಂಭಾಷಣೆ ನಡೆಸುವ ಕ್ರಮವಿದೆ. ಹಾಗೆ ಸಂಭಾಷಿಸುವಾಗ ನಮ್ಮೆಲ್ಲ ಕರುಣೆ, ಪ್ರೀತಿಯನ್ನು ನಿನ್ನೆಡೆಗೆ ಹರಿಸಬೇಕೆಂದು ರಾಮನ ಪ್ರೇರಣೆಯಾಗಿದೆ. ಇದು ನಿನ್ನ ಭಕ್ತಿಗೆ ಮೆಚ್ಚಿ ರಾಮ ಕರುಣಿಸುತ್ತಿರುವ ವರ. ಇದು ನಿನ್ನ ಸೌಭಾಗ್ಯ ಕೂಡ. ರಾಮನ ಪ್ರೇರಣೆಯಂತೆ ನೀನು ನಿನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಬೇಕು. ಇಲ್ಲಿ ಏನು ನಡೆದರೂ ಅದು ರಾಮನ ಇಚ್ಛೆಯಂತೆಯೇ ನಡೆಯುತ್ತದೆ. ನೀನು ಏನನ್ನೂ ಪ್ರಶ್ನಿಸಬಾರದು’.

ಹೀಗೆಂದು ರಾಘವೇಶ್ವರ ಭಾರತಿ ಸ್ವಾಮೀಜಿ ಅವರು ರಾಮಕಥಾ ಗಾಯಕಿ ಪ್ರೇಮಲತಾಗೆ ಹೇಳಿದ್ದರಂತೆ. ಸಿಐಡಿ ಮುಂದೆ ಪ್ರೇಮಲತಾ ನೀಡಿದ ಹೇಳಿಕೆ ಹಾಗೂ ತನ್ನ ಭಾವನಿಗೆ ಕಳುಹಿಸಿದ ಇ–ಮೇಲ್‌ ಸಂದೇಶಗಳಲ್ಲಿ ಇದು ದಾಖಲಾಗಿದೆ. ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಆರೋಪಪಟ್ಟಿಯಲ್ಲಿ ಇದು ಅಡಕವಾಗಿದೆ.

‘ಪ್ರತಿ ಬಾರಿ ಸ್ವಾಮೀಜಿ ಏಕಾಂತಕ್ಕೆ ಕರೆಸಿಕೊಂಡಾಗ ರಾಮ ದೇವರ ವಿಗ್ರಹದ ಮುಂದೆ ನಿಲ್ಲಿಸಿ ತನ್ಮಯವಾಗಿ ಕಣ್ಣು ಮುಚ್ಚಿ ಪ್ರಾರ್ಥಿಸುವಂತೆ ತಿಳಿಸುತ್ತಿದ್ದರು. ಅಲ್ಲದೆ, ನೀನು ನಮ್ಮನ್ನು ರಾಮನೆಂದೇ ನಂಬಿದ್ದೀಯಾ ತಾನೆ ಎಂದು ಪ್ರಶ್ನಿಸುತ್ತಿದ್ದರು. ನಾನು ಹೌದೆಂಬಂತೆ ಕತ್ತು ಅಲ್ಲಾಡಿಸಿದಾಗ, ಹಾಗಿದ್ದ ಮೇಲೆ ನಿನ್ನ ಮನಸ್ಸು, ದೇಹ, ನಡೆ ನುಡಿಗಳಿಂದ ನಮಗೆ ಅಂದರೆ ರಾಮನಿಗೆ ಸಮರ್ಪಿಸಿಕೊ. ಇದನ್ನು ಯಾವ ಕಾರಣಕ್ಕೂ ತಪ್ಪೆಂದು ತಿಳಿಯಬೇಡ. ಬದಲಾಗಿ ನಿನ್ನ ಎಲ್ಲ ರೀತಿಯ ಸೇವೆಗಳಿಂದ ನಮ್ಮನ್ನು ಸಂತೋಷ ಪಡಿಸಿ ಆ ಮೂಲಕ ರಾಮನನ್ನು ಸೇರು. ಇದರಿಂದ ನಿನ್ನ ಕುಟುಂಬಕ್ಕೆ ಶ್ರೇಯಸ್ಸಾಗುತ್ತದೆ. ಗಾಯನ ಕ್ಷೇತ್ರದಲ್ಲಿಯೂ ನೀನು ಇನ್ನೂ ಉತ್ತುಂಗಕ್ಕೆ ಏರುವುದು ಸಾಧ್ಯವಾಗುತ್ತದೆ ಎಂದು ಹೇಳುತ್ತಿದ್ದರು’.

‘ಆದರೆ, ರಾಮ ಪ್ರೇರಣೆಯ ವಿಷಯ ನಮ್ಮ ಮತ್ತು ನಿನ್ನ ಹೊರತು ಇನ್ಯಾರಿಗೂ ತಿಳಿಯುವಂತಿಲ್ಲ. ನಿನ್ನ ಗಂಡನಿಗೂ ತಿಳಿಸಬಾರದು. ಒಂದು ವೇಳೆ ತಿಳಿದರೆ ಅದರ ಮಹತ್ವ ಮತ್ತು ಫಲಾಫಲಗಳು ಸಿಗದೇ ಹೋಗಬಹುದು. ಇದು ಜೀವಾತ್ಮ ಮತ್ತು ಪರಮಾತ್ಮನ ವಿಚಾರ. ಜೀವ ಯಾವತ್ತಿದ್ದರೂ ಒಂದೇ ಅಥವಾ ಒಬ್ಬನೆ. ಈ ಲೋಕಕ್ಕೆ ಜೀವ ಬರುವುದು ಒಬ್ಬನೇ ಆಗಿ ಹಾಗೂ ಈ ಲೋಕದಿಂದ ಹೋಗುವುದೂ ಒಬ್ಬನೇ ಆಗಿ. ಹಾಗಾಗಿ ರಾಮನ ಪ್ರೇರಣೆ ನಿನ್ನ ಒಬ್ಬಳ ಜೀವಕ್ಕೆ ಮತ್ತು ನಿನ್ನ ತಪಸ್ಸಿಗೆ ಸಂಬಂಧಿಸಿದ್ದು ಎಂದು ಹೇಳಿ ನನ್ನ ನಂಬಿಸಿ ನನ್ನೊಡನೆ ಅನುಚಿತವಾಗಿ ವರ್ತಿಸಿದರು’ ಎಂದು ಪ್ರೇಮಲತಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
(ಮುಂದುವರಿಯುವುದು)
*
ಜಾಮೀನು ರದ್ದು ಕೋರಿ ಸಿಐಡಿ ಅರ್ಜಿ ವಿಚಾರಣೆ 29ಕ್ಕೆ
ಬೆಂಗಳೂರು:
ರಾಮಕಥಾ ಗಾಯಕಿ ಪ್ರೇಮಲತಾ ಅವರ ಮೇಲಿನ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಘವೇಶ್ವರ ಭಾರತೀ ಸ್ವಾಮೀಜಿಗೆ ನೀಡಿರುವ ನಿರೀಕ್ಷಣಾ ಜಾಮೀನು ರದ್ದು ಕೋರಿ, ಸಿಐಡಿ ಸಲ್ಲಿಸಿದ್ದ ಅರ್ಜಿ  ವಿಚಾರಣೆಯನ್ನು ನಗರದ 52ನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಅಕ್ಟೋಬರ್ 29ಕ್ಕೆ ಮುಂದೂಡಿದೆ.

ಜಾಮೀನು ರದ್ದು ಕೋರಿ ಸಿಐಡಿ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು, ಸ್ವಾಮೀಜಿ ಪರ ವಕೀಲರು ಕಾಲಾವಕಾಶ ಕೋರಿದ್ದರಿಂದ ನ್ಯಾಯಾಧೀಶರು ವಿಚಾರಣೆ ಮುಂದೂಡಿ ಆದೇಶ ಹೊರಡಿಸಿದರು. ವೀರ್ಯ ಪರೀಕ್ಷೆ ಸೇರಿದಂತೆ ಮೂರು ಬಗೆಯ ವೈದ್ಯಕೀಯ ಪರೀಕ್ಷೆಗೆ ಸ್ವಾಮೀಜಿ ಹಾಜರಾಗಿಲ್ಲ. ಇದು ನಿರೀಕ್ಷಣಾ ಜಾಮೀನು ನೀಡುವಾಗಿನ ಷರತ್ತುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಹಾಗಾಗಿ, ಅವರಿಗೆ ನೀಡಿರುವ ಜಾಮೀನು ರದ್ದುಪಡಿಸಬೇಕು ಎಂದು ಸಿಐಡಿ ಅಕ್ಟೋಬರ್ 6ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT