ADVERTISEMENT

ರಾಷ್ಟ್ರವ್ಯಾಪಿ ವಿಸ್ತರಿಸಿ

ದೇವನೂರ ಮಹಾದೇವ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 20:29 IST
Last Updated 19 ಏಪ್ರಿಲ್ 2015, 20:29 IST

ಬದನವಾಳು (ಮೈಸೂರು): ಸ್ಥಳೀಯ ಜನಾಂದೋಲನಗಳನ್ನು ರಾಷ್ಟ್ರಮಟ್ಟಕ್ಕೆ ವಿಸ್ತರಿಸುವ ಕೆಲಸವನ್ನು ರಾಷ್ಟ್ರೀಯ ಪಕ್ಷಗಳು ಮಾಡಿದರೆ ಹಳ್ಳಿಯ ಮಾತು ದೆಹಲಿಗೆ ಕೇಳಿಸುತ್ತದೆ. ಒಂಟಿ ಕಾಲಲ್ಲಿ ಕುಂಟುತ್ತಿರುವ ಜನಾಂದೋಲನಗಳನ್ನು ಒಟ್ಟುಗೂಡಿಸಲು ಸಾಧ್ಯವಾಗುತ್ತದೆ ಎಂದು ಸಾಹಿತಿ ದೇವನೂರ ಮಹಾದೇವ ಅಭಿಪ್ರಾಯಪಟ್ಟರು.

ಬದನವಾಳುವಿನಲ್ಲಿ ಭಾನುವಾರ ನಡೆದ ‘ಸುಸ್ಥಿರ  ಬದುಕಿನ ರಾಷ್ಟ್ರೀಯ ಸಮಾವೇಶ’ದ ‘ಬದುಕು ಮತ್ತು ಭಾಷೆ ಪಂಚಾಯಿತಿ’ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಜನಾಂದೋಲನಗಳು ಸ್ಥಳೀಯವಾಗಿವೆ. ಹೆಚ್ಚೆಂದರೆ ಜಿಲ್ಲಾಮಟ್ಟ, ರಾಜ್ಯಮಟ್ಟಕ್ಕೆ ಮಾತ್ರ ಸೀಮಿತವಾಗಿವೆ. ಇದ
ರಿಂದ ಸ್ಥಳೀಯ ಜನಾಂದೊಲನಗಳ ಪಿಸುದನಿ ದೆಹಲಿಗೆ ಕೇಳಿಸುವುದು ದೂರದ ಮಾತಾಗಿದೆ ಎಂದರು.

ಇಂದಿನ ರಾಜಕೀಯ ಪಕ್ಷಗಳ ರೀತಿ ರಿವಾಜುಗಳನ್ನು ನೋಡಿದರೆ ಇದು ಕಷ್ಟಸಾಧ್ಯವೆನಿಸುತ್ತದೆ. ಪ್ರಾದೇಶಿಕ ಪಕ್ಷ
ಗಳು ಜವಾಬ್ದಾರಿಯುತವಾಗಿಲ್ಲ. ಕೌಟುಂಬಿಕ ಮತ್ತು ಸ್ವಾರ್ಥ ರಾಜಕಾರಣಕ್ಕೆ ನಾಂದಿಯಾಗಿವೆ. ರಾಷ್ಟ್ರೀಯ ಪಕ್ಷಗಳು ಅಧಿಕಾರವನ್ನು ಕೇಂದ್ರೀಕರಿಸಿಕೊಂಡಿವೆ. ತಮ್ಮದೇ ಪಕ್ಷದ ರಾಜ್ಯ ಘಟಕಗಳ ಕುತ್ತಿಗೆಗೆ ಕೈಹಾಕಿ ಉಸಿರು ಕಟ್ಟಿಸುತ್ತಿವೆ. ದೇಶವನ್ನು ಧ್ವಂಸ ಮಾಡುವ ಕೆಲಸವನ್ನು ಎಲ್ಲ ಪಕ್ಷಗಳು ನಕಲು ಮಾಡುತ್ತಿವೆ. ಪ್ರಗತಿಪರ ಪಕ್ಷಗಳು ಕೂಡ ಜಡವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಬಹಿರಂಗದ (ಚುನಾವಣಾ) ರಾಜಕಾರಣದಲ್ಲಿ ಒಕ್ಕೂಟದ ಪರಿಕಲ್ಪನೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ರಾಜ್ಯದ ಸ್ವಾಯತ್ತತೆಗೆ ಹೆಚ್ಚು ಒತ್ತು ನೀಡಬೇಕು. ಕೇಂದ್ರ ಸಮಿತಿ ಸಲಹೆಗಾರ ಸ್ಥಾನದಲ್ಲಿ ನಿಲ್ಲಬೇಕೆ ಹೊರತು ಹೈಕಮಾಂಡ್‌ ಸ್ಥಾನದಲ್ಲಿ ಅಲ್ಲ. ಇದಕ್ಕೆ ರೆಕ್ಕೆಪುಕ ಬರಿಸಿ ಜೀವ ತುಂಬಬೇಕಾಗಿದೆ. ಹೀಗಾದಾಗ ಆಳ್ವಿಕೆ ನಡೆಸುವ ಬಹಿರಂಗದ ರಾಜಕಾರಣವನ್ನು ಅಂತರಂಗದ ಜನಾಂದೋಲನದ ರಾಜಕಾರಣ ನಿಯಂತ್ರಿಸಬಹುದಾದ ವಾತಾವರಣ ಸೃಷ್ಟಿಯಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.