ADVERTISEMENT

ರಾಷ್ಟ್ರೀಯ ಮಾನ್ಯತೆಗೆ ಕೇಂದ್ರಕ್ಕೆ ಪ್ರಸ್ತಾವ

ದೇಶದ ಬೃಹತ್‌ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ

ಬಸವರಾಜ ಸಂಪಳ್ಳಿ
Published 25 ಜುಲೈ 2015, 20:23 IST
Last Updated 25 ಜುಲೈ 2015, 20:23 IST

ಬಾಗಲಕೋಟೆ: ದೇಶದ ಬೃಹತ್‌ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ‘ರಾಷ್ಟ್ರೀಯ ಯೋಜನೆ’ ಎಂದು ಪರಿಗಣಿಸಬೇಕು ಎಂಬ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನ ಕಾರ್ಯ ನಾಲ್ಕು ದಶಕಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಈ ಯೋಜನೆಗೆ ‘ರಾಷ್ಟ್ರೀಯ ಮಾನ್ಯತೆ’ ದೊರೆತರೆ ಶೀಘ್ರವಾಗಿ ಪೂರ್ಣಗೊಳ್ಳಲು ಹೆಚ್ಚು ಅನುಕೂಲವಾಗಲಿದೆ. ಹಾಗಾಗೀ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

‘ಈ ಯೋಜನೆಗೆ ಮಾನ್ಯತೆ ನೀಡುವಂತೆ ಕೋರಲು ಕೃಷ್ಣಾ ಭಾಗ್ಯ ಜಲ ನಿಗಮದಿಂದ (ಕೆಬಿಜಿಎನ್‌ಎಲ್‌) ಜಲಸಂಪನ್ಮೂಲ ಇಲಾಖೆಗೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ರಾಜ್ಯ ಸರ್ಕಾರವು ಕೇಂದ್ರಕ್ಕೆ ಈ ಪ್ರಸ್ತಾವವನ್ನು ಸಲ್ಲಿಸುವ ಸಾಧ್ಯತೆ ಇದೆ’ ಎಂದು ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಮತ್ತು ಪುನರ್‌ ನಿರ್ಮಾಣ ಆಯುಕ್ತ ಶಿವಯೋಗಿ ಕಳಸದ  ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಅನುಷ್ಠಾನದಿಂದ ಒಂದು ಲಕ್ಷ ಜನ ಬಾಧಿತರಾಗಲಿದ್ದಾರೆ. ಇಷ್ಟೊಂದು ಬೃಹತ್‌ ಸಂಖ್ಯೆಯಲ್ಲಿ ಜನರು ಸಂತ್ರಸ್ತರಾಗುವುದರಿಂದ ಅವರಿಗೆ ಪುನರ್ವಸತಿ ಮತ್ತು ಪುನರ್‌ನಿರ್ಮಾಣ ಕಲ್ಪಿಸಲು ಅಪಾರ ಪ್ರಮಾಣದ ಹಣಕಾಸಿನ ಅಗತ್ಯವಿದೆ’ ಎಂದರು.

‘ಯುಕೆಪಿ 3ನೇ ಹಂತದ ಅನುಷ್ಠಾನದಿಂದ ಬಾಗಲಕೋಟೆ, ವಿಜಯಪುರ ಜಿಲ್ಲೆಯ 20 ಗ್ರಾಮಗಳು ಪೂರ್ತಿಯಾಗಿ, 172 ಗ್ರಾಮಗಳಲ್ಲಿನ ಭಾಗಶಃ ಜಮೀನು ಮುಳುಗಡೆಯಾಗಲಿದ್ದು, ಒಟ್ಟು 192 ಗ್ರಾಮಗಳಲ್ಲಿನ 94,640 ಎಕರೆ ಭೂಮಿ ಮುಳುಗಡೆಯಾಗಲಿದೆ. ಈ ಜಮೀನಿಗೆ ಕೇಂದ್ರ ಸರ್ಕಾರದ ಹೊಸ ಭೂಸ್ವಾಧೀನ ಕಾಯ್ದೆ ಅನ್ವಯ ಪರಿಹಾರ ನೀಡಬೇಕಾಗಿರುವುದರಿಂದ ರಾಜ್ಯ ಸರ್ಕಾರದ ಹೆಗಲಿಗೆ ದೊಡ್ಡ ಆರ್ಥಿಕ ಹೊರೆ ಬೀಳಲಿದೆ’ ಎಂದರು.


‘ಕೃಷ್ಣಾ ಮೇಲ್ದಂಡೆ ಯೋಜನೆಗೆ ಮಾನ್ಯತೆ ದೊರೆತರೆ ಕೇಂದ್ರ ಸರ್ಕಾರದಿಂದ ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಅನುದಾನ, ಸಹಾಯ, ಸಹಕಾರ ಸಿಗಲಿದೆ. ಜತೆಗೆ ಕೃಷ್ಣಾ ನದಿ ನೀರು ಹಂಚಿಕೆ ವಿವಾದವು ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶವನ್ನು ಸುತ್ತಿಕೊಂಡಿರುವುದರಿಂದ ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಇರುವ ಅಡೆತಡೆಗಳೂ ಆದಷ್ಟು ಶೀಘ್ರ ಬಗೆಹರಿಯಲಿವೆ ಎಂಬ ನಿರೀಕ್ಷೆ ಇದೆ’ ಎಂದು ಶಿವಯೋಗಿ ಕಳಸದ ವಿವರಿಸಿದರು.
*
ಈ ಯೋಜನೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ರಾಜ್ಯ ಸರ್ಕಾರದ ಜತೆ ಕೇಂದ್ರ ಸರ್ಕಾರವೂ ಕೈಜೋಡಿಸಬೇಕಿದೆ.
– ಶಿವಯೋಗಿ ಕಳಸದ
ಆಯುಕ್ತ, ಆರ್‌ ಅಂಡ್‌ ಆರ್‌, ಯುಕೆಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT