ADVERTISEMENT

ರೂ 12 ಪ್ರೀಮಿಯಂಗೆ ರೂ 2ಲಕ್ಷ ವಿಮೆ!

ಪ್ರಧಾನಮಂತ್ರಿ ‘ಜೀವನ ಜ್ಯೋತಿ’, ‘ಸುರಕ್ಷಾ’ ಬಿಮಾ ಯೋಜನೆ

ಗಣೇಶ ಚಂದನಶಿವ
Published 6 ಮೇ 2015, 19:30 IST
Last Updated 6 ಮೇ 2015, 19:30 IST

ಕಲಬುರ್ಗಿ: ವಾರ್ಷಿಕ ಕೇವಲ ರೂ12 ಪ್ರೀಮಿಯಂ ಪಾವತಿಸಿದರೆ ಸಾಕು; ರೂ2ಲಕ್ಷ ಅಪಘಾತ ವಿಮೆ ಪಡೆಯ ಬಹುದು. ರೂ330 ಪ್ರೀಮಿಯಂ ಪಾವ ತಿಸಿದರೆ ಯಾವುದೇ ತೆರನಾದ ಸಾವು ಸಂಭವಿಸಿದರೂ ವಾರಸು ದಾರರಿಗೆ ರೂ2ಲಕ್ಷ ವಿಮೆ ಪರಿಹಾರ ದೊರೆಯುತ್ತದೆ!

ಅತ್ಯಂತ ಕಡಿಮೆ ಪ್ರೀಮಿಯಂನಲ್ಲಿ ಗರಿಷ್ಠ ವಿಮೆ ಪರಿಹಾರ ನೀಡುವ ‘ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ’ ಮತ್ತು ‘ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ’ ಗಳನ್ನು ಕೇಂದ್ರ ಸರ್ಕಾರ ರೂಪಿಸಿದೆ.

ಸಾಮಾಜಿಕ ಭದ್ರತೆಯ ಈ ವಿಮಾ ಯೋಜನೆಗಳಿಗೆ ಕೇಂದ್ರ ಸರ್ಕಾರ ಮೇ 9ರಂದು ದೇಶದಾದ್ಯಂತ ಏಕಕಾಲದಲ್ಲಿ ಚಾಲನೆ ನೀಡಲಿದೆ. ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ಬೆಳಗಾವಿ, ಕಲಬುರ್ಗಿಯಲ್ಲಿ ಅಂದು ಚಾಲನಾ ಸಮಾರಂಭ ಏರ್ಪಡಿಸಲಾಗಿದೆ.

‘ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆ ಹೊಂದಿರುವ ಎಲ್ಲರೂ ಈ ಎರಡೂ ವಿಮಾ ಯೋಜನೆಗಳ ರಕ್ಷೆ ಪಡೆಯಲು ಅರ್ಹರು. ಇಲ್ಲಿ ಆದಾಯ ಮಿತಿ ಇಲ್ಲ. ವೈದ್ಯಕೀಯ ಪ್ರಮಾಣ ಪತ್ರದ ಅಗತ್ಯವೂ ಇಲ್ಲ. ಆದರೆ, ಖಾತೆ ಹೊಂದಿರುವ ಗ್ರಾಹಕರು ಆಯಾ ಬ್ಯಾಂಕ್‌ ಶಾಖೆಗಳಲ್ಲಿ ದೊರೆಯುವ ಅರ್ಜಿ ನಮೂನೆ  ಪಡೆದು ಅದನ್ನು ಭರ್ತಿ ಮಾಡಿ ಆಧಾರ್‌ ಚೀಟಿಯ  ಪ್ರತಿ ಲಗತ್ತಿಸಿ ಬ್ಯಾಂಕ್‌ಗಳಿಗೆ ಸಲ್ಲಿಸುವುದು ಕಡ್ಡಾಯ’ ಎನ್ನುವುದು ಜಿಲ್ಲಾ ಲೀಡ್‌ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ರಮೇಶ ಕೆ.ದಾಬಡೆ ಅವರ ವಿವರಣೆ.

‘ಒಬ್ಬ ವ್ಯಕ್ತಿ ಎಷ್ಟೇ ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆಗಳನ್ನು ಹೊಂದಿರಲಿ. ಒಂದು ಕಡೆ ಮಾತ್ರ ಅವರು ಈ ಎರಡೂ ವಿಮಾ ಯೋಜನೆಗಳಿಗೆ ಸದಸ್ಯರಾ ಗಬಹುದು. ಜಂಟಿ ಉಳಿತಾಯ ಖಾತೆ ಇದ್ದರೆ ಖಾತೆಯಲ್ಲಿ ಮೊದಲು ಹೆಸರು ಇರುವ ವ್ಯಕ್ತಿಗೆ ಮಾತ್ರ ವಿಮೆ ಸುರಕ್ಷೆ ಲಭ್ಯ. ಪತಿ, ಪತ್ನಿಮತ್ತು ವಯಸ್ಕ ಮಕ್ಕಳು ಪ್ರತ್ಯೇಕ ಖಾತೆ ಹೊಂದಿದ್ದರೆ ಅವರೆಲ್ಲರೂ ನಿಗದಿತ ಪ್ರೀಮಿಯಂ ಸಂದಾಯ ಮಾಡಿ ಈ ವಿಮೆಗಳ ರಕ್ಷಣೆ ಪಡೆಯಬಹುದು’ ಎಂದು ಅವರು ಹೇಳಿದರು.

ಈ ಎರಡೂ ಯೋಜನೆಗಳು ಜೂನ್‌ 1, 2015 ರಿಂದ ಮೇ 31, 2016ರ ವರೆಗೆ ವಿಮೆ ರಕ್ಷಣೆ ಒದಗಿಸುತ್ತವೆ. ಮೇ 9ರಿಂದ ಎಲ್ಲ ರಾಷ್ಟ್ರೀಕೃತ, ಗ್ರಾಮೀಣ ಬ್ಯಾಂಕ್‌ಗಳ ಶಾಖೆಗಳಲ್ಲಿ ಅರ್ಜಿ ನಮೂನೆ ಲಭ್ಯ. ಅವುಗಳನ್ನು ಪಡೆದು ಭರ್ತಿ ಮಾಡಿ ಸಲ್ಲಿಸಬೇಕು. ಬ್ಯಾಂಕಿನವರೇ ಗ್ರಾಹಕರ ಖಾತೆಯಿಂದ ಪ್ರೀಮಿಯಂ ಹಣ ಕಡಿತಗೊಳಿಸುತ್ತಾರೆ. ಅರ್ಜಿ ನಮೂನೆಯಲ್ಲಿಯೇ ‘ಸ್ವೀಕೃತಿ ಮತ್ತು ವಿಮೆ ಪ್ರಮಾಣಪತ್ರ’ ಇದ್ದು, ಗ್ರಾಹಕರು ಅದನ್ನು ಕಡ್ಡಾಯವಾಗಿ ಪಡೆದು ಕೊಳ್ಳಬೇಕು.

ಗ್ರಾಹಕರು ಪ್ರತಿ ವರ್ಷವೂ ತಮ್ಮ ಬ್ಯಾಂಕ್‌ ಶಾಖೆಗಳಿಗೆ ಮಾಹಿತಿ ಸಲ್ಲಿಸಿ ವಿಮೆ ರಕ್ಷೆ ಮುಂದುವರೆಸಬೇಕು. ಒಂದೊಮ್ಮೆ ತಮ್ಮ ಉಳಿತಾಯ ಖಾತೆ ಯನ್ನು ರದ್ದು ಪಡಿಸಿದರೆ ಅಥವಾ ಕನಿಷ್ಠ ಹಣ ಇಲ್ಲದ ಕಾರಣಕ್ಕೆ ಬ್ಯಾಂಕ್‌ ಖಾತೆ ರದ್ದಾದರೆ ಅಂತಹ ಗ್ರಾಹಕರಿಗೆ ಈ ವಿಮೆ ಸುರಕ್ಷೆ ದೊರೆಯುವುದಿಲ್ಲ.

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ: ಇದು ರೂ2 ಲಕ್ಷ ಪರಿಹಾರ ನೀಡುವ ಅಪಘಾತ ವಿಮೆ. ವಾರ್ಷಿಕ ಕೇವಲ ರೂ12 ಪ್ರೀಮಿಯಂ ಸಂದಾಯ ಮಾಡಬೇಕು. 18ರಿಂದ 70 ವರ್ಷ ವಯ ಸ್ಸಿನವರು ಅರ್ಹರು. ಅಪಘಾತದಲ್ಲಿ ಮೃತಪಟ್ಟರೆ ಅವರ ವಾರಸುದಾರರಿಗೆ ರೂ2 ಲಕ್ಷ ವಿಮೆ ದೊರೆಯುತ್ತದೆ. ಅಪಘಾ ತದಲ್ಲಿ ಶಾಶ್ವತ ಅಂಗವೈಕಲ್ಯತೆಗೆ ಒಳಗಾ ದರೆ ರೂ2 ಲಕ್ಷ, ಭಾಗಶಃ ಅಂಗವೈ ಕಲ್ಯತೆಗೆ ಒಳಗಾದರೆ ರೂ1 ಲಕ್ಷ ಪರಿಹಾರ ಲಭ್ಯ.

ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ: ಇದು ರೂ2 ಲಕ್ಷ ಜೀವ ವಿಮೆ. ವಾರ್ಷಿಕ ಪ್ರೀಮಿಯಂ ರೂ330 ಪಾವತಿ ಸಬೇಕು. 18ರಿಂದ 50 ವರ್ಷ ಒಳಗಿನ ವರು ಅರ್ಹರು. ಯಾವುದೇ ಕಾರಣಕ್ಕೆ ಸಾವು ಸಂಭವಿಸಿದರೂ ಅವರ ವಾರಸು ದಾರರಿಗೆ ರೂ2 ಲಕ್ಷ ಪರಿಹಾರ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.