ADVERTISEMENT

ರೈತರ ಸಾಲದ ಬಡ್ಡಿ ಮನ್ನಾ?

ಆತ್ಮಹತ್ಯೆ ಪರಿಹಾರದ ಮೊತ್ತದಲ್ಲೂ ಏರಿಕೆ ಸಂಭವ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2015, 20:05 IST
Last Updated 9 ಅಕ್ಟೋಬರ್ 2015, 20:05 IST

ಬೆಂಗಳೂರು: ಸಹಕಾರಿ ಸಂಘಗಳಿಂದ ರೈತರು ಪಡೆದ ಸಾಲದ ಮೇಲಿನ ಇನ್ನೂ ಸುಮಾರು ₹220 ಕೋಟಿ ಬಡ್ಡಿ ಮನ್ನಾ ಮಾಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಘೋಷಿಸುವ ಸೂಚನೆಗಳಿವೆ.

ಇದಲ್ಲದೆ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ನೀಡಲಾಗುವ ಪರಿಹಾರದ ಮೊತ್ತವನ್ನೂ ಹೆಚ್ಚಿಸುವ ಸಾಧ್ಯತೆ ಇದೆ. ಜೊತೆಗೆ ಪರಿಹಾರ ನಿಯಮಾವಳಿಯನ್ನೂ ಸರಳಗೊಳಿಸುವ ನಿರೀಕ್ಷೆ ಇದೆ.

ಆತ್ಮಹತ್ಯೆ ಮಾಡಿಕೊಂಡ ರೈತರ  ಕುಟುಂಬಗಳಿಗೆ ಸಾಂತ್ವನ ಹೇಳಲು ಬಂದಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಅವರು, ರೈತರ ಮೇಲಿನ ಹೊರೆ ಕಡಿಮೆ ಮಾಡುವಂತೆ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಿದ್ದಾರೆ.

ಇದಕ್ಕೆ ಮಣಿದಿರುವ ಮುಖ್ಯಮಂತ್ರಿ, ‘ಬಹುಕಾಲದಿಂದ ಬಾಕಿ ಇರುವ, ಸಹಕಾರಿ ಸಂಘಗಳಿಂದ ಪಡೆದ ಸಾಲದ ಮೇಲಿನ ಬಡ್ಡಿ’ ಮನ್ನಾ ಮಾಡಲು ಮುಂದಾಗಿದ್ದಾರೆ.  ರಾಹುಲ್ ಗಾಂಧಿ  ಹಾವೇರಿ ಜಿಲ್ಲೆಗೆ ಶನಿವಾರ ಭೇಟಿ ನೀಡಿದಾಗ ಈ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.

ಇದರಿಂದ ರೈತರು ಸಹಕಾರಿ ಸಂಘಗಳಿಂದ ಪಡೆದಿರುವ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಮೇಲಿನ ದೀರ್ಘ ಕಾಲದ ಬಾಕಿ ಬಡ್ಡಿ ಮನ್ನಾ ಆಗಲಿದೆ.

‘ಸಾಲ ಪಡೆದು, ಬಡ್ಡಿ ಕೂಡ ಪಾವತಿಸಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿರುವ ರೈತರಿಗೆ ಇದರಿಂದ ನೆಮ್ಮದಿ ಸಿಗಲಿದೆ. ಆಗಸ್ಟ್‌ 31ಕ್ಕೆ ಮೊದಲು ಮಾಡಿದ ಸಾಲದ ಮೇಲಿನ ಬಡ್ಡಿಯನ್ನು ಮಾತ್ರ ಮನ್ನಾ ಮಾಡಲಾಗುವುದು. ಇದರಿಂದ ಅಂದಾಜು 2.25 ಲಕ್ಷ ರೈತರಿಗೆ ಸಹಾಯ ಆಗಲಿದೆ. ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ರೈತರ ಕೃಷಿ ಸಾಲದ ಅಂದಾಜು ₹ 296 ಕೋಟಿ ಬಡ್ಡಿ ಮನ್ನಾ ಘೋಷಿಸಿತ್ತು. ಈಗ ಇನ್ನೂ ₹220 ಕೋಟಿ ಬಡ್ಡಿ ಮನ್ನಾ ಮಾಡಿದರೆ ರಾಜ್ಯ ಸರ್ಕಾರದ ಮೇಲೆ ಒಟ್ಟಾರೆ ₹516 ಕೋಟಿ ಹೊರೆಯಾಗುತ್ತದೆ’ ಎಂದು ಸಹಕಾರ ಸಚಿವ ಮಹದೇವ ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸಾಲ ಮನ್ನಾ ಮಾಡುವಂತೆ ರಾಹುಲ್ ಅವರು ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದಾರೆಯೇ ಎಂಬ ಪ್ರಶ್ನೆಗೆ, ಅವರು ‘ಇಲ್ಲ’ ಎಂಬಂತೆ ಉತ್ತರಿಸಿದರು. ‘ಸಂಕಷ್ಟದಲ್ಲಿರುವ ರೈತರಿಗೆ ಸಹಾಯ ಮಾಡಬೇಕು ಎಂಬ ನಿರ್ದೇಶನ ಮಾತ್ರ ಬಂದಿದೆ’ ಎಂದರು. 

ರಾಜ್ಯದ 78 ಲಕ್ಷ ರೈತರಲ್ಲಿ  ಅಂದಾಜು 21 ಲಕ್ಷ ರೈತರು ಸಹಕಾರಿ ಸಂಘಗಳಿಂದ, 14 ಲಕ್ಷ ರೈತರು ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದಾರೆ. ರಾಜ್ಯದಲ್ಲಿ ರೈತರು ಮಾಡಿರುವ ಸಾಲದ ಪ್ರಮಾಣ ಅಂದಾಜು ₹ 12 ಸಾವಿರ ಕೋಟಿಗಳಷ್ಟು ಎಂದು ಸಚಿವರು            ತಿಳಿಸಿದರು.

ಸಾಂತ್ವನ ಹೇಳಿದ ರಾಹುಲ್‌
ಪಾಂಡವಪುರ:
ತಾಲ್ಲೂಕಿನ ಸಣಬಕೊಪ್ಪಲು ಗ್ರಾಮದಲ್ಲಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಲೋಕೇಶ ಅವರ ಪಾರ್ಥಿವ ಶರೀರಕ್ಕೆ ರಾಹುಲ್‌ ಗಾಂಧಿ ಅಂತಿಮ ನಮನ ಸಲ್ಲಿಸಿದರು. 

ಶವಸಂಸ್ಕಾರದಲ್ಲಿ ಭಾಗಿಯಾಗಲು ಶುಕ್ರವಾರ ಮಧ್ಯಾಹ್ನ 12.38ಕ್ಕೆ ಗ್ರಾಮಕ್ಕೆ ಬಂದ ರಾಹುಲ್‌, ರೈತ ಲೋಕೇಶ್ ಮೃತದೇಹಕ್ಕೆ ಪುಷ್ಪಗು ಚ್ಛವಿರಿಸಿ ಕೈಮುಗಿದರು. ಸಿದ್ದರಾ ಮಯ್ಯ ಕೂಡ ಪುಷ್ಪಗುಚ್ಚವಿರಿಸಿ ನಮನ ಸಲ್ಲಿಸಿದರು. 

ನಂತರ ಮನೆಯ ಜಗುಲಿ ಮೇಲೆ ಕುಳಿತು (ಸಗಣಿ ಸಾರಿಸಿದ ನೆಲ) ಮೃತ ರೈತ ಲೋಕೇಶ್ ಅವರ ಪತ್ನಿ ಶೋಭಾ, ಪುತ್ರಿ ಸ್ಮಿತಾ, ಪುತ್ರ ಸಾಗರ್ ಅವರಿಗೆ ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT