ADVERTISEMENT

ರೇಣುಕಾಚಾರ್ಯ ವಿರುದ್ಧದ ಎಫ್‌ಐಆರ್‌ ರದ್ದು :ಹೈಕೋರ್ಟ್‌

ಅಕ್ರಮ ಆಸ್ತಿ ಸಂಪಾದನೆ ಆರೋಪ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2015, 20:03 IST
Last Updated 4 ಸೆಪ್ಟೆಂಬರ್ 2015, 20:03 IST

ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಬಿಜೆಪಿ ಮುಖಂಡ ಎಂ.ಪಿ.ರೇಣುಕಾಚಾರ್ಯ ಹಾಗೂ ಅವರ ಮೂವರು ಸಹೋದರರ ವಿರುದ್ಧ ದಾವಣಗೆರೆ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ ಅನ್ನು ಹೈಕೋರ್ಟ್‌ ರದ್ದುಗೊಳಿಸಿದೆ.

ಈ ಎಫ್‌ಐಆರ್‌ ರದ್ದುಗೊಳಿಸುವಂತೆ  ಕೋರಿ ರೇಣುಕಾಚಾರ್ಯ ಮತ್ತು  ಸಹೋದರರು ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸ್ಯ ಪೀಠವು ಶುಕ್ರವಾರ ವಿಲೇವಾರಿ ಮಾಡಿತು.

ರೇಣುಕಾಚಾರ್ಯ ಮತ್ತು ಇತರ ಮೂವರು ಆರೋಪಿಗಳ ಪರ ವಾದಿಸಿದ ಹಸ್ಮತ್‌ ಪಾಷ ಅವರು, ‘ದೂರನ್ನು ದಾಖಲಿಸುವ ಸಂದರ್ಭದಲ್ಲಿ ದೂರುದಾರರು ಆರೋಪವನ್ನು ಪುಷ್ಟೀಕರಿಸುವಂತಹ ಪೂರಕ ದಾಖಲೆ ಹಾಗೂ ಈ ಕುರಿತು ನ್ಯಾಯಾಲಯಕ್ಕೆ ಸೂಕ್ತ ರೀತಿಯಲ್ಲಿ ಪ್ರಮಾಣ ಪತ್ರವನ್ನು ಸಲ್ಲಿಸಿಲ್ಲ. ಇದು ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ವಿರುದ್ಧವಾಗಿದೆ’ ಎಂದು ಹೇಳಿದರು.

‘ಮೊದಲನೇ ಆರೋಪಿ  ರೇಣುಕಾಚಾರ್ಯ ಸಚಿವರಾಗಿದ್ದಂಥವರು. ಇಂಥವರ ವಿರುದ್ಧ ದೂರು ಸಲ್ಲಿಸುವ ವೇಳೆ ದೂರುದಾರರು ರಾಜ್ಯಪಾಲರಿಂದ ಪೂರ್ವಾನುಮತಿ ಪಡೆಯಬೇಕಿತ್ತು. ಆದರೆ  ಈ ಪೂರ್ವಾನುಮತಿಯನ್ನು ದೂರುದಾರರು ಪಡೆದಿಲ್ಲ. ಆದ್ದರಿಂದ  ಲೋಕಾಯುಕ್ತ ನ್ಯಾಯಾಲಯವು ದಾಖಲಿಸಿರುವ ಎಲ್ಲ ಎಫ್‌ಐಆರ್‌ಗಳನ್ನು ರದ್ದುಗೊಳಿಸಬೇಕು ಹಾಗೂ ಈ ಸಂಬಂಧದ ಎಲ್ಲ ವಿಚಾರಣಾ ಪ್ರಕ್ರಿಯೆಗಳನ್ನು ಕೈ ಬಿಡಬೇಕು’ ಎಂದು ಮನವಿ ಮಾಡಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠವು, ಎಫ್‌ಐಆರ್‌ ರದ್ದುಗೊಳಿಸುವಂತೆ ಮತ್ತು ವಿಚಾರಣಾ ಪ್ರಕ್ರಿಯೆಗಳನ್ನು ಕೈಬಿಡುವಂತೆ ಆದೇಶಿಸಿತು. 
ರೇಣುಕಾಚಾರ್ಯ ಅವರು ದಾವಣಗೆರೆ ಜಿಲ್ಲೆಯ ಹೊನ್ನಾಳಿ ವಿಧಾನಸಭಾ ಕ್ಷೇತ್ರದಿಂದ 2004ರಲ್ಲಿ ಸ್ಪರ್ಧಿಸುವಾಗ  ತಮ್ಮ ಒಟ್ಟು ಆಸ್ತಿ ಮೌಲ್ಯ ₹ 26.4 ಲಕ್ಷದಷ್ಟಿದೆ ಎಂದೂ, 2008ರಲ್ಲಿ ಸ್ಪರ್ಧಿಸುವಾಗ ₹ 73.97 ಲಕ್ಷ ಎಂದೂ ಮತ್ತು 2013ರ ಚುನಾವಣೆಯಲ್ಲಿ ಸ್ಪರ್ಧಿಸುವಾಗ ₹ 4.95 ಕೋಟಿ ಇದೆ ಎಂದೂ ಘೋಷಿಸಿಕೊಂಡಿದ್ದರು.

ಅಧಿಕಾರ ದುರುಪಯೋಗ ಮಾಡಿಕೊಂಡು ಅಕ್ರಮ ಆಸ್ತಿ ಸಂಪಾದಿಸಿರುವ ಪಾಲೂ ಇದರಲ್ಲಿದೆ’ ಎಂದು ಆರೋಪಿಸಿ ಹೊನ್ನಾಳಿ ನಿವಾಸಿಯಾದ ಗುರುಪಾದಯ್ಯ ಕಬ್ಬಿಣಕಂತಿ ಮಠದ್‌ ಎಂಬುವವರು ದಾವಣಗೆರೆ ಜಿಲ್ಲಾ ವಿಶೇಷ ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ದೂರಿನಲ್ಲಿ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರರಾದ ಎಂ.ಪಿ.ರಮೇಶ್‌, ಎಂ.ಪಿ.ಆರಾಧ್ಯ ಮತ್ತು ಎಂ.ಪಿ.ಬಸವರಾಜಯ್ಯ ಅವರನ್ನೂ  ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು.
*
ದೂರುದಾರರು ಮತ್ತೊಮ್ಮೆ ಈ ಸಂಬಂಧ ಸಕ್ಷಮ ಪ್ರಾಧಿಕಾರದಲ್ಲಿ ದೂರು ಸಲ್ಲಿಸಲು ಅವಕಾಶ ಕಲ್ಪಿಸಿ ಅರ್ಜಿ ವಿಲೇವಾರಿ ಮಾಡಲಾಗಿದೆ.
– ಹಸ್ಮತ್‌ ಪಾಷ,
ರೇಣುಕಾಚಾರ್ಯ ಪರ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.