ADVERTISEMENT

ಲಿಂಗಾಯತ ಸ್ವತಂತ್ರ ಧರ್ಮ: ನ್ಯಾ. ನಾಗಮೋಹದಾಸ್ ನೇತೃತ್ವದಲ್ಲಿ ತಜ್ಞರ ಸಮಿತಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2017, 19:30 IST
Last Updated 22 ಡಿಸೆಂಬರ್ 2017, 19:30 IST
ಲಿಂಗಾಯತ ಸ್ವತಂತ್ರ ಧರ್ಮ: ನ್ಯಾ. ನಾಗಮೋಹದಾಸ್ ನೇತೃತ್ವದಲ್ಲಿ ತಜ್ಞರ ಸಮಿತಿ
ಲಿಂಗಾಯತ ಸ್ವತಂತ್ರ ಧರ್ಮ: ನ್ಯಾ. ನಾಗಮೋಹದಾಸ್ ನೇತೃತ್ವದಲ್ಲಿ ತಜ್ಞರ ಸಮಿತಿ   

ಬೆಂಗಳೂರು: ವೀರಶೈವ–ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ವಿಷಯದಲ್ಲಿ ಅಧ್ಯಯನ ನಡೆಸಿ ವರದಿ ನೀಡಲು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನದಾಸ್‌ ನೇತೃತ್ವದಲ್ಲಿ ಪರಿಣತರ ಸಮಿತಿ ರಚಿಸಲಾಗಿದೆ.

‘2018ರ ಜನವರಿ 6 ಅಥವಾ 8ರಂದು ಮೊದಲ ಸಭೆ ನಡೆಯಲಿದೆ. ಈ ಸಭೆಗೆ ಹಾಜರಾಗುವಂತೆ ಆಯೋಗ ಕೋರಿದೆ. ಸಮಗ್ರವಾಗಿ ಅಧ್ಯಯನ ನಡೆಸಿ ಒಂದು ತಿಂಗಳ ಒಳಗೆ ವರದಿ ಸಲ್ಲಿಸುವಂತೆ ತಜ್ಞರ ಸಮಿತಿಗೆ ಸೂಚಿಸಲಾಗಿದೆ’ ಎಂದು ಸಮಿತಿಯ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ರಾಜ್ಯ ಅಲ್ಪಸಂಖ್ಯಾತ ಆಯೋಗ ಈ ಸಮಿತಿ ರಚಿಸಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ADVERTISEMENT

ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷರಾಗಿರುವ, ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷರಾಗಿರುವ ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ–ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡುವ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಮುಖ್ಯಮಂತ್ರಿಗೆ ಮೊದಲು ಮನವಿ ಸಲ್ಲಿಸಿತ್ತು.

ಇದಕ್ಕೆ ಭಿನ್ನ ನಿಲುವು ತಳೆದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ, ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯಕುಲಕರ್ಣಿ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ವಿಧಾನಪರಿಷತ್ತಿನ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಅವರು ವೀರಶೈವ ಪದ ಕೈ ಬಿಟ್ಟು, ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವಂತೆ ಶಿಫಾರಸು ಮಾಡಬೇಕೆಂದು ಮನವಿ ಸಲ್ಲಿಸಿದ್ದರು. ನಿವೃತ್ತ ಐಎಎಸ್ ಅಧಿಕಾರಿ ಶಿವಾನಂದ ಎಸ್ ಜಾಮದಾರ ನೇತೃತ್ವದಲ್ಲಿ ‌ರಚನೆಯಾಗಿರುವ ಸ್ವತಂತ್ರ ಲಿಂಗಾಯತ ಧರ್ಮ ಹೋರಾಟ ಸಮಿತಿ ಕೂಡ ಈ ಬೇಡಿಕೆಗೆ ಧ್ವನಿಗೂಡಿಸಿದೆ. ರಾಷ್ಟ್ರೀಯ ಬಸವ ದಳ, ಬಸವ ಬಳಗಗಳು ಇದೇ ಬೇಡಿಕೆ ಮಂಡಿಸಿವೆ.

ಸ್ವತಂತ್ರ ಧರ್ಮವಾಗಿ ಮಾನ್ಯತೆ ನೀಡುವ ಕುರಿತು ಸಲ್ಲಿಸಿರುವ ಮನವಿಗಳ ಬಗ್ಗೆ ಪರಿಶೀಲಿಸುವ ಕಡತವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾ
ರಣಾ ಇಲಾಖೆಯು ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಳುಹಿಸಿತ್ತು. ಇದು ತಮ್ಮ ಇಲಾಖೆಗೆ ಸಂಬಂಧ ವಿಷಯವಲ್ಲ ಎಂದು ಎರಡೂ ಇಲಾಖೆಗಳು ಕಡತ ವಾಪಸ್ ಕಳುಹಿಸಿದ್ದವು. ಬಳಿಕ ಕಾನೂನು ಇಲಾಖೆ ಮತ್ತು ಅಡ್ವೊಕೇಟ್ ಜನರಲ್ ಅವರಿಗೆ ಕಳುಹಿಸಲಾಗಿತ್ತು. ಅಲ್ಪಸಂಖ್ಯಾತರ ಆಯೋಗದಿಂದ ವರದಿ ಪಡೆಯುವುದು ಸೂಕ್ತ ಎಂದು ಅಡ್ವೊಕೇಟ್ ಜನರಲ್ ಸಲಹೆ ನೀಡಿದ್ದರು.

ಸಮಿತಿಯಲ್ಲಿ ಪರಿಣತರ ತಂಡ

ನ್ಯಾಯಮೂರ್ತಿ ನಾಗಮೋಹನ ದಾಸ್ ಅಧ್ಯಕ್ಷತೆಯ ಸಮಿತಿಯಲ್ಲಿ ಸಂವಿಧಾನ, ರಾಜ್ಯಶಾಸ್ತ್ರ, ಕನ್ನಡ ಸಂಸ್ಕೃತಿ, ಶರಣರ ಚಳವಳಿ ಹಾಗೂ ಹಿಂದುಳಿದ ವರ್ಗಗಳ ಸ್ಥಿತಿಗತಿ ಬಗ್ಗೆ ತಿಳಿವಳಿಕೆ ಇರುವ ಪರಿಣತರು ಇದ್ದಾರೆ.

ಮೈಸೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಮುಜಾಫರ್ ಅಸಾದಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ, ದೆಹಲಿ ಜವಾಹರ ಲಾಲ್‌ ನೆಹರೂ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕನಾಥ್, ಹಿರಿಯ ಸಂಶೋಧಕ ರಾಮಕೃಷ್ಣ ಮರಾಠೆ, ಪತ್ರಕರ್ತ ಸರಜೂ ಕಾಟ್ಕರ್ ಸಮಿತಿಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.