ADVERTISEMENT

ಲೆಕ್ಕ ಕೊಡಿ ಸಿದ್ದರಾಮಯ್ಯ: ಅಮಿತ್‌ ಷಾ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2017, 19:30 IST
Last Updated 14 ಆಗಸ್ಟ್ 2017, 19:30 IST
ಲೆಕ್ಕ ಕೊಡಿ ಸಿದ್ದರಾಮಯ್ಯ: ಅಮಿತ್‌ ಷಾ
ಲೆಕ್ಕ ಕೊಡಿ ಸಿದ್ದರಾಮಯ್ಯ: ಅಮಿತ್‌ ಷಾ   

ಬೆಂಗಳೂರು : ‘ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ ₹2.19 ಲಕ್ಷ ಕೋಟಿ ಎಲ್ಲಿ ಹೋಯಿತು ಎಂಬ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಲೆಕ್ಕ ಕೊಡಬೇಕು’ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಆಗ್ರಹಿಸಿದರು.

‘ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಆದಾಯ ತೆರಿಗೆ (ಐ.ಟಿ) ಇಲಾಖೆ ಪ್ರಭಾವಿ ಸಚಿವರ ಮನೆಗಳ ಮೇಲೆ ನಡೆಸಿದ ದಾಳಿಗಳಲ್ಲಿ ಸಿಕ್ಕಿರುವ ಅಪಾರ ಪ್ರಮಾಣದ ದುಡ್ಡು ಇದೇನಾ’ ಎಂದು ಮಾಧ್ಯಮ ಗೋಷ್ಠಿಯಲ್ಲಿ ಸೋಮವಾರ ಅವರು ಪ್ರಶ್ನಿಸಿದರು.

‘ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ₹88,583 ಕೋಟಿ ಅನುದಾನ ಸಿಕ್ಕಿತ್ತು. ನಮ್ಮ ಸರ್ಕಾರ ಬಂದ ಮೇಲೆ ₹2,19,506 ಕೋಟಿ ನೀಡಲಾಗಿದೆ. ಈ ಅವಧಿಯಲ್ಲಿ ₹1,30,923 ಕೋಟಿ ಹೆಚ್ಚುವರಿ ಅನುದಾನ ಸಿಕ್ಕಿದಂತಾಗಿದೆ. ಹಾಗಿದ್ದರೂ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ, ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಸುಳ್ಳು ಹೇಳುತ್ತಾ ಅಪಪ್ರಚಾರ ಮಾಡಲಾಗುತ್ತಿದೆ’ ಎಂದು ಅವರು ಟೀಕಿಸಿದರು.

ADVERTISEMENT

‘ಕೇಂದ್ರ ಬಿಡುಗಡೆ ಮಾಡಿದ ಹಣ ರೈತರಿಗೆ, ದಲಿತರಿಗೆ, ಬಡವರಿಗೆ, ಹಿಂದುಳಿದವರಿಗೆ ಮುಟ್ಟಿಲ್ಲ. ಇಷ್ಟೆಲ್ಲ ದುಡ್ಡು ಎಲ್ಲಿ ಹೋಯಿತು ಸಿದ್ದರಾಮಯ್ಯನವರೇ. ಅದನ್ನೆಲ್ಲ ಏನು ಮಾಡಿದಿರಿ’ ಎಂದು ಷಾ ವ್ಯಂಗ್ಯದ ಧ್ವನಿಯಲ್ಲಿ ಪ್ರಶ್ನಿಸಿದರು.

ಭ್ರಷ್ಟಾಚಾರದ ‘ಪದಕ’ಕ್ಕಾಗಿ ಸ್ಪರ್ಧೆ: ಸಿದ್ದರಾಮಯ್ಯ, ಭ್ರಷ್ಟಾಚಾರದ ವಿಷಯದಲ್ಲಿ ಸ್ಪರ್ಧೆಗೆ ಬಿದ್ದವರಂತೆ ಆಡುತ್ತಿದ್ದಾರೆ. ಭ್ರಷ್ಟಾಚಾರ ಬಯಲಾದಾಗ ‘ಪದಕ’ ಗೆದ್ದಂತೆ ವರ್ತಿಸಿ, ತಮ್ಮ ಅಂಗಿಯ ಜೇಬಿನ ಮೇಲೆ ಒಂದೊಂದು ಪದಕವನ್ನೂ ಜೋಡಿಸಿಕೊಳ್ಳುತ್ತಿದ್ದಾರೆ ಎಂದು ಷಾ  ಲೇವಡಿ ಮಾಡಿದರು.

‘ಕಾನೂನು ಮತ್ತು ಸುವ್ಯವಸ್ಥೆ ಅತ್ಯಂತ ದುರವಸ್ಥೆಗೆ ತಲುಪಿದೆ. ರಾಜಕೀಯ ಕಾರಣಕ್ಕಾಗಿ ಸಂಘ ಪರಿವಾರದ ಕಾರ್ಯಕರ್ತರನ್ನು ಗುರಿ ಮಾಡಿ ಹತ್ಯೆ ಮಾಡಲಾಗುತ್ತಿದೆ. ಈ ಹತ್ಯೆಗಳಲ್ಲಿ ನೇರ ಕೈವಾಡ ಇರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾಕ್ಕೆ ಸರ್ಕಾರ ರಕ್ಷಣೆ ನೀಡುತ್ತಿದೆ. ಇದರ ಹಿಂದೆ ಕಾಂಗ್ರೆಸ್ ಪಕ್ಷದ ಓಟಿನ ರಾಜಕಾರಣ ಇದೆ’ ಎಂದು ಹರಿಹಾಯ್ದರು.

ಲಿಂಗಾಯತ ಧರ್ಮ ರಾಜಕೀಯ ತಂತ್ರ:

‘ವೀರಶೈವ– ಲಿಂಗಾಯತ ಧರ್ಮವನ್ನು ಕಾಂಗ್ರೆಸ್‌ ಪಕ್ಷ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಅಮಿತ್‌ ಷಾ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಲಿಂಗಾಯತ ಧರ್ಮ, ಕನ್ನಡ ಧ್ವಜದ ವಿಷಯದಲ್ಲಿ ಸರ್ಕಾರಕ್ಕೆ ನಿಜವಾದ ಕಳಕಳಿ ಇದ್ದರೆ ಅಧಿಕಾರಕ್ಕೆ ಬಂದ ಎರಡೇ ದಿನದಲ್ಲಿ ತೀರ್ಮಾನ ಪ್ರಕಟಿಸಬಹುದಿತ್ತು. ಚುನಾವಣೆಗೆ ಆರೇಳು ತಿಂಗಳು ಇರುವಾಗ ಅವರು ಏಕೆ ಈ ವಿಷಯ ಪ್ರಸ್ತಾಪಿಸುತ್ತಿದ್ದಾರೆ’ ಎಂದು ಷಾ ಪ್ರಶ್ನಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್‌, ಡಿ.ವಿ. ಸದಾನಂದಗೌಡ, ವಿರೋಧ ಪಕ್ಷದ ನಾಯಕರಾದ ಜಗದೀಶ ಶೆಟ್ಟರ್‌, ಕೆ.ಎಸ್‌. ಈಶ್ವರಪ್ಪ, ರಾಜ್ಯ ಉಸ್ತುವಾರಿ ಮುರಳೀಧರರಾವ್‌, ಸಂಸದ ಭೂಪೇಂದ್ರ ಯಾದವ್‌ ಉಪಸ್ಥಿತರಿದ್ದರು.

***

ಲೆಕ್ಕ ಕೊಡಿ ಯಡಿಯೂರಪ್ಪ ಎಂದರು ಷಾ

‘ಕೇಂದ್ರ ಕೊಟ್ಟ ದುಡ್ಡು ಎಲ್ಲಿ ಹೋಯಿತು. ಅದರ ಲೆಕ್ಕ ಕೊಡಿ’ ಎಂದು ಯಡಿಯೂರಪ್ಪ ಅವರನ್ನು ಷಾ ಪ್ರಶ್ನಿಸಿದ ಪ್ರಸಂಗ ನಡೆಯಿತು.

‘ಲೆಕ್ಕ ಕೊಡಬೇಕಾಗಿದ್ದು ಸಿದ್ದರಾಮಯ್ಯ’ ಎಂದು ಪಕ್ಕದಲ್ಲಿ ಕುಳಿತಿದ್ದ ಕೇಂದ್ರ ಸಚಿವ ಅನಂತಕುಮಾರ್‌, ಷಾ ಅವರಿಗೆ ಹೇಳಿದರು. ‘ಎರಡು ದಿನಗಳಿಂದ ಯಡಿಯೂರಪ್ಪ ಎಂದೇ ಹೇಳಿ ರೂಢಿಯಾಗಿದೆ. ಹೀಗಾಗಿ ಸಿದ್ದರಾಮಯ್ಯ ಎಂದು ಹೇಳುವ ಬದಲು ಯಡಿಯೂರಪ್ಪ ಹೆಸರು ಬಂತು’ ಎಂದು ಅವರು ಸಮಜಾಯಿಷಿ ನೀಡಿದರು.

***

ಬಂದಿಯಾಗಿದ್ದ ಶಾಸಕರ ಖರೀದಿ ಹೇಗೆ ಸಾಧ್ಯ?

‘ಗುಜರಾತ್‌ ಶಾಸಕರನ್ನು ಸಾವಿರಾರು ಕಿ.ಮೀ ದೂರದಿಂದ ಕರೆ ತಂದು ಬಂದಿಯಾಗಿ ಇರಿಸಿಕೊಳ್ಳಲಾಗಿತ್ತು. ಅವರನ್ನು ಖರೀದಿ ಮಾಡಲು ಹೇಗೆ ಸಾಧ್ಯ’ ಎಂದು ಅಮಿತ್‌ ಷಾ ಪ್ರಶ್ನಿಸಿದರು.

‘ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕರನ್ನು ಖರೀದಿಸಲು ಮುಂದಾಗಿದ್ದು ಹೌದೇ’ ಎಂಬ ಪ್ರಶ್ನೆಗೆ ಷಾ ಈ ಉತ್ತರ ನೀಡಿದರು.

‘ಚುನಾವಣೆ ಗೆಲುವಿಗೆ ಕಾರ್ಯತಂತ್ರವೇನು’ ಎಂಬ ಪ್ರಶ್ನೆಗೆ, ‘ಅದನ್ನೆಲ್ಲಾ ಮೈಕ್‌ನಲ್ಲಿ ಹೇಳುವಷ್ಟು ನಾನು ದಡ್ಡನಲ್ಲ. ಮುಂದಿನ ಪ್ರಶ್ನೆ ಕೇಳಿ’ ಎಂದು ಷಾ ನಗುತ್ತಲೇ ಉತ್ತರಿಸಿದರು.

‘ಷಾ ಬಂದರೆ ಕರ್ನಾಟಕದಲ್ಲಿ ಏನೂ ಮಾಡಲಿಕ್ಕೆ ಆಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರಲ್ಲ’ ಎಂಬ ಪ್ರಶ್ನೆಗೆ, ‘ನಾನು ಬಂದಿರುವುದರಿಂದ ಅವರಿಗೆ ಏನಾಗಿದೆ ಎಂದು ಮತ ಎಣಿಕೆ ದಿನ ಗೊತ್ತಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.