ADVERTISEMENT

ವರದಿಯೇ ಇಲ್ಲದಿರುವಾಗ ಪಾಲಿಕೆ ವಿಭಜನೆ ಏಕೆ: ದೇವೇಗೌಡರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 19:37 IST
Last Updated 19 ಏಪ್ರಿಲ್ 2015, 19:37 IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಭಜನೆಗೆ ಸಂಬಂಧಿಸಿದಂತೆ ರಚಿಸಿರುವ ಬಿ.ಎಸ್. ಪಾಟೀಲ ಸಮಿತಿ ಜೂನ್‌ 15ರ ವೇಳೆಗೆ ವರದಿ ನೀಡಲಿದೆ. ವರದಿ ಬರುವುದಕ್ಕೂ ಮೊದಲೇ, ಸರ್ಕಾರ ಪಾಲಿಕೆಯನ್ನು ವಿಭಜಿಸಲು ಮುಂದಾಗಿರುವುದು ಏಕೆ ಎಂಬುದು ತಿಳಿಯುತ್ತಿಲ್ಲ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು.

ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಾಟೀಲ ನೇತೃತ್ವದ ಸಮಿತಿ ಜೂನ್‌ 15ರ ವೇಳೆಗೆ ವರದಿ ನೀಡಲಿದೆ ಎಂದು ಸರ್ಕಾರ ಹೈಕೋರ್ಟ್‌ನ ಏಕಸದಸ್ಯ ಪೀಠಕ್ಕೆ ಹೇಳಿಕೆ ಸಲ್ಲಿಸಿತ್ತು. ವರದಿ ಬಾರದಿರುವ ಕಾರಣ, ಪಾಲಿಕೆ ಚುನಾವಣೆ ಮುಂದೂಡಬೇಕು ಎಂದೂ ಕೋರಿತ್ತು. ವರದಿಯೇ ಇಲ್ಲದಿರುವಾಗ ಅಧಿವೇಶನ ಕರೆದು ಪಾಲಿಕೆ ವಿಭಜಿಸಲು ಸಾಧ್ಯವೇ?’ ಎಂದು ದೇವೇಗೌಡ ಪ್ರಶ್ನಿಸಿದರು.

‘ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೂ, ನಗರದ ಶಾಸಕರು ಸ್ಥಳೀಯ ಆಡಳಿತ ಸಂಸ್ಥೆಗೆ ಚುನಾವಣೆ ನಡೆಸುವುದು ಬೇಡ ಎಂಬ ಒತ್ತಾಯ ತಂದಿದ್ದರು. ಆದರೆ ನಾನು ಅದಕ್ಕೆ ಒಪ್ಪಲಿಲ್ಲ. ಚುನಾವಣೆ ನಡೆಸಿ, ಗೆಲುವು ಸಾಧಿಸಿದೆವು’ ಎಂದು  ನೆನಪಿಸಿಕೊಂಡರು. ಚುನಾವಣೆ ವೇಳಾಪಟ್ಟಿ ಘೋಷಿಸಲು ರಾಜ್ಯ ಚುನಾವಣಾ ಆಯೋಗ ಶುಕ್ರವಾರ ಪತ್ರಿಕಾಗೋಷ್ಠಿ ಕರೆದಿತ್ತು. ಆದರೆ ಅದು ಹಠಾತ್ ರದ್ದಾಯಿತು. ಇದಕ್ಕೆ ಕಾರಣ ನೀಡಿಲ್ಲ. ಚುನಾವಣೆ ಮುಂದೂಡುವ ಹಿಂದೆ ಸ್ಥಾಪಿತ ಹಿತಾಸಕ್ತಿಗಳಿರಬಹುದು ಎಂಬ ಶಂಕೆ ಮೂಡುತ್ತದೆ ಎಂದರು.

ಪಾಲಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಬಗ್ಗೆ ಐಎಎಸ್‌ ಅಧಿಕಾರಿಯೊಬ್ಬರಿಂದ ಸರ್ಕಾರ ವರದಿ ತರಿಸಿಕೊಂಡಿದೆ. ಅವ್ಯವಹಾರಗಳ ಬಗ್ಗೆ ತನಿಖೆ ಬಾಕಿ ಇದ್ದರೆ, ಅದು ಚುನಾವಣೆ ಮುಂದೂಡಲು ಕಾರಣವಲ್ಲ. ರಾಜ್ಯ ಸರ್ಕಾರದ ಅವ್ಯವಹಾರ ಕುರಿತು ತನಿಖೆ ನಡೆಯುತ್ತಿದೆ ಎಂಬ ಕಾರಣಕ್ಕೆ ವಿಧಾನಸಭಾ ಚುನಾವಣೆ ಮುಂದೂಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು. ಸರ್ಕಾರ ಕುಂಟು ನೆಪಗಳನ್ನು ಹೇಳದೆ ಕೂಡಲೇ ಬಿಬಿಎಂಪಿ ಚುನಾವಣೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.