ADVERTISEMENT

ವಸ್ತ್ರುಸಂಗ್ರಹಾಲಯವಾಗಲಿದೆ ಆರ್.ಕೆ. ನಾರಾಯಣ್‌ ನಿವಾಸ

‘ಮಾಲ್ಗುಡಿ’ ಮೋಡಿಗಾರನ ಮನೆ ಖರೀದಿಸಿದ ಪಾಲಿಕೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2015, 19:30 IST
Last Updated 5 ಏಪ್ರಿಲ್ 2015, 19:30 IST

ಮೈಸೂರು: ಇಲ್ಲಿಯ ಯಾದವಗಿರಿಯಲ್ಲಿರುವ ಲೇಖಕ ಆರ್.ಕೆ. ನಾರಾಯಣ್ ಅವರ ನಿವಾಸವನ್ನು ಪುನರುಜ್ಜೀವನಗೊಳಿಸಲು ಮೈಸೂರು ಮಹಾನಗರ ಪಾಲಿಕೆಯು ರೂ. 34.90 ಲಕ್ಷ ವೆಚ್ಚದ ಯೋಜನೆಯನ್ನು ರೂಪಿಸಿದೆ.

ಇದರೊಂದಿಗೆ ‘ಮಾಲ್ಗುಡಿ ಡೇಸ್‌’ ಕೃತಿ ಲೇಖಕನ ನಿವಾಸದ ಸಂರಕ್ಷಣೆಯ ಕುರಿತು ಎದ್ದಿದ್ದ  ವಿವಾದಗಳಿಗೆ ತೆರೆ ಬಿದ್ದಂತಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಪಾಲಿಕೆ ಆಯುಕ್ತ ಡಾ.ಸಿ.ಜಿ. ಬೆಟಸೂರಮಠ, ‘ಇಂಗ್ಲೆಂಡಿನಲ್ಲಿ ವಿಶ್ವವಿಖ್ಯಾತ ನಾಟಕ ರಚನೆಕಾರ ಷೇಕ್್ಸಪಿಯರ್ ಜನ್ಮಸ್ಥಾನವನ್ನು ಸಂರಕ್ಷಣೆ ಮಾಡಿರುವ ಮಾದರಿಯಲ್ಲಿಯೇ ಆರ್.ಕೆ. ನಾರಾಯಣ್ ಅವರ ನಿವಾಸವನ್ನೂ ಸಂರಕ್ಷಿಸಲು ಪಾಲಿಕೆಯು ಯೋಜನೆ ರೂಪಿಸಿದೆ. ರೂ. 29.50 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣ, ದುರಸ್ತಿ ಕಾಮಗಾರಿ, ರೂ. 5 ಲಕ್ಷ ವೆಚ್ಚದಲ್ಲಿ ಮನೆ ಮುಂದಿನ ಉದ್ಯಾನ, ವಿನ್ಯಾಸ ಮತ್ತು ಅಂದ ವೃದ್ಧಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಕಾಮಗಾರಿಗಳಿಗಾಗಿ ಟೆಂಡರ್ ಕರೆಯಲಾಗಿದೆ’ ಎಂದರು.

ಲೇಖಕರ ಕುಟುಂಬದ ಸದಸ್ಯರಿಂದ ರೂ. 2.40 ಕೋಟಿಗೆ ಕಟ್ಟಡವನ್ನು ಪಾಲಿಕೆಯು ಖರೀದಿಸಿದ್ದು, ಮಾಲೀಕತ್ವವೂ ಪಾಲಿಕೆಗೆ ವರ್ಗವಣೆಯಾಗಿದೆ.

‘ಕುಟುಂಬದ ಸದಸ್ಯರಿಗೆ ನಾವು ಆಭಾರಿಯಾಗಿದ್ದೇವೆ. ಅವರ ಸಹಕಾರದಿಂದ ಖರೀದಿ ಪ್ರಕ್ರಿಯೆಯು ಸುಗಮವಾಗಿ ನಡೆಯಿತು. ಪ್ರಸಕ್ತ ಮಾರುಕಟ್ಟೆ ದರದಲ್ಲಿ ಕಟ್ಟಡವನ್ನು ಖರೀದಿಸಲಾಗಿದೆ. ಆರ್.ಕೆ. ನಾರಾಯಣ್ ನೆನಪಿನ ವಸ್ತುಸಂಗ್ರಹಾಲಯವಾಗಿ ಇದು ಅಭಿವೃದ್ಧಿಗೊಳ್ಳಲಿದೆ’ ಎಂದು ಬೆಟಸೂರಮಠ ಹೇಳುತ್ತಾರೆ.

ನಿವಾಸದ ಸುತ್ತಮುತ್ತ: ಯಾದವಗಿರಿಯ ವಿವೇಕಾನಂದ ರಸ್ತೆಯಲ್ಲಿ ಆರ್.ಕೆ. ನಾರಾಯಣ್ ಅವರು ವಾಸಿಸಿದ್ದ ಬಂಗ್ಲೆ ಇದೆ. 10,800 ಚದರಡಿ ನಿವೇಶನದಲ್ಲಿ ಎರಡು ಅಂತಸ್ತಿನ ಕಟ್ಟಡ ಇದಾಗಿದೆ. 2001ರಲ್ಲಿ ಚೆನ್ನೈನಲ್ಲಿರುವ ತಮ್ಮ ಪುತ್ರಿಯ ಮನೆಯಲ್ಲಿ ಅವರು ನಿಧನರಾಗಿದ್ದರು.

ಅದಕ್ಕೂ ಹಲವು ವರ್ಷಗಳ ಮೊದಲೇ ಅವರು ಮೈಸೂರಿನ ಈ ನಿವಾಸವನ್ನು ಖಾಲಿ ಮಾಡಿದ್ದರು. ನಿವಾಸದ ನಿರ್ವಹಣೆಗಾಗಿ ಒಬ್ಬ ಖಾಸಗಿ ಕಾವಲುಗಾರನನ್ನು ನೇಮಕ ಮಾಡಿದ್ದರು. 2011ರ ಸೆಪ್ಟೆಂಬರ್ ತಿಂಗಳಲ್ಲಿ ನಾರಾಯಣ್ ಕುಟುಂಬದವರು ಖಾಸಗಿ ವ್ಯಕ್ತಿಗಳಿಗೆ ನಿವಾಸವನ್ನು ಮಾರಾಟ ಮಾಡಿದರು.

ಖರೀದಿ ಮಾಡಿದವರು ಕಟ್ಟಡವನ್ನು ಒಡೆಯುವ ಕಾರ್ಯ ಆರಂಭಿಸಿದಾಗಲೇ ಮಾರಾಟದ ಸುದ್ದಿ ಹರಡಿ ವಿವಾದ ಶುರುವಾಯಿತು. ಸಾಹಿತ್ಯ ವಲಯದಲ್ಲಿ ಮನೆಯನ್ನು ಪಾರಂಪರಿಕ ಕಟ್ಟಡವಾಗಿ ಉಳಿಸಿಕೊಳ್ಳುವ ಆಗ್ರಹ ಹೆಚ್ಚಾಯಿತು. ಮತ್ತೊಂದು ಗುಂಪು ಇದನ್ನು ವಿರೋಧಿಸಿತ್ತು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ್ದ ಪಾಲಿಕೆಯು ಕಟ್ಟಡ ಒಡೆಯುವ ಕಾರ್ಯಕ್ಕೆ ತಡೆಯೊಡ್ಡಿತ್ತು. ನಂತರದ ಬೆಳವಣಿಗೆಯಲ್ಲಿ ಪಾಲಿಕೆಯೇ ಇದನ್ನು ಖರೀದಿಸಿ, ಸಂರಕ್ಷಿಸುವ ನಿರ್ಧಾರ ಕೈಗೊಳ್ಳಲಾಯಿತು.

ನಗರಾಭಿವೃದ್ಧಿ ಇಲಾಖೆಯ ಪ್ರಸಕ್ತ ಮಾರುಕಟ್ಟೆ ದರ ನಿಯಮದ ಪ್ರಕಾರ  ರೂ. 2.10 ಕೋಟಿ  ಮೌಲ್ಯದ ಕಟ್ಟಡ ಇದಾಗಿದೆ. ಕಟ್ಟಡದ ವಾರಸುದಾರರು ಈ ಮೊತ್ತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ರೂ. 2.40 ಕೋಟಿಗೆ ಖರೀದಿಸಲಾಗಿದೆ. ಇದೀಗ ನಿವಾಸವನ್ನು  ರೂಪುಗೊಳಿಸಲು ಎಲ್ಲ ಸಿದ್ಧತೆಗಳೂ ಆರಂಭವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.