ADVERTISEMENT

ವಿದ್ಯುತ್‌ ಪ್ರವಹಿಸಿ ಇಬ್ಬರ ಸಾವು

ಸಂಪ್‌ ಸ್ವಚ್ಛಗೊಳಿಸುವಾಗ ಅವಘಡ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 19:59 IST
Last Updated 23 ಮಾರ್ಚ್ 2017, 19:59 IST

ಬೆಂಗಳೂರು: ದೊಮ್ಮಲೂರು ಬಳಿಯ ಶ್ರೀನಿಧಿ ಸಾಗರ್‌್ ಹೋಟೆಲ್‌ನಲ್ಲಿ ಗುರುವಾರ ಸಂಜೆ ನೀರಿನ ಸಂಪ್ ಸ್ವಚ್ಛಗೊಳಿಸುತ್ತಿದ್ದ ವೇಳೆ ವಿದ್ಯುತ್‌ ಪ್ರವಹಿಸಿ ವ್ಯವಸ್ಥಾಪಕ ವಿಶ್ವನಾಥ್ (39) ಹಾಗೂ ಕೆಲಸಗಾರ ಗುರು (26) ಎಂಬುವರು ಮೃತಪಟ್ಟಿದ್ದಾರೆ.

ದೊಮ್ಮಲೂರು ಒಂದನೇ ಹಂತದ 7ನೇ ಅಡ್ಡರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಇವರಿಬ್ಬರೂ, ಹೋಟೆಲ್‌ ಕೊಠಡಿಯೊಂದರಲ್ಲಿ ಒಟ್ಟಿಗೆ ನೆಲೆಸಿದ್ದರು.

‘ನೀರಿನ ಸಂಪ್‌ ಗಲೀಜಾಗಿದ್ದರಿಂದ  ಹೋಟೆಲ್‌ ನೌಕರರೇ ಅದನ್ನು ಸ್ವಚ್ಛಗೊಳಿಸಲು ಮುಂದಾಗಿದ್ದರು. ಈ ವೇಳೆ ವಿಶ್ವನಾಥ್‌ ಹಾಗೂ ಗುರು ಒಳಗೆ ಇಳಿದಿದ್ದರು. ಕತ್ತಲು ಇದ್ದಿದ್ದರಿಂದ ಸಂಪ್‌ನೊಳಗೆ ವೈರ್ ಬಿಟ್ಟು ವಿದ್ಯುತ್ ದೀಪ ಹೊತ್ತಿಸಲಾಗಿತ್ತು. ಅದರ ಬೆಳಕಿನಲ್ಲಿ ಅವರಿಬ್ಬರು ಸಂಪ್‌ ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ತಂತಿ ತಗುಲಿದ್ದರಿಂದ ವಿದ್ಯುತ್‌ ಪ್ರವಹಿಸಿ ಇಬ್ಬರೂ ಪ್ರಜ್ಞೆ ತಪ್ಪಿದರು. ಕೂಡಲೇ ಸಹನೌಕರರು ಅವರನ್ನು ಮಣಿಪಾಲ್‌ ಆಸ್ಪತ್ರೆಗೆ ಕರೆದೊಯ್ದರು. ಚಿಕಿತ್ಸೆಗೆ ಸ್ಪಂದಿಸದ ಅವರು, ಸ್ವಲ್ಪ ಸಮಯದಲ್ಲೇ ಕೊನೆಯುಸಿರೆಳೆದರು’ ಎಂದು ಹಲಸೂರು ಪೊಲೀಸರು ತಿಳಿಸಿದರು.

‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಆಸ್ಪತ್ರೆಯ ಅಧಿಕಾರಿ, ‘ವಿದ್ಯುತ್‌ ಪ್ರವಹಿಸಿದ್ದರಿಂದ ಇಬ್ಬರ ಅಂಗಾಂಗಗಳು ನಿಷ್ಕ್ರಿಯಗೊಂಡಿದ್ದವು. ಆರಂಭದಲ್ಲಿ ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ಕೊಡುತ್ತಿದ್ದೆವು’ ಎಂದು ತಿಳಿಸಿದರು.

ಪೊಲೀಸರಿಗೆ ತಡವಾಗಿ ಮಾಹಿತಿ:
‘ಅವಘಡ ಸಂಭವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದ ಬಳಿಕವೂ ಹೋಟೆಲ್‌ ಆಡಳಿತ ಮಂಡಳಿಯವರು ನಮಗೆ ಮಾಹಿತಿ ನೀಡಲಿಲ್ಲ. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಬಳಿಕ ವಿಷಯ ತಿಳಿಯಿತು. ನಂತರ ಆಸ್ಪತ್ರೆ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ಪಡೆದೆವು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಪ್ರಕರಣ ಮುಚ್ಚಿಹಾಕಲು ಹೋಟೆಲ್‌ನವರು ಪ್ರಯತ್ನಿಸುತ್ತಿದ್ದರು ಎಂಬ ಅನುಮಾನವಿದೆ. ಆಡಳಿತ ಮಂಡಳಿ ವಿರುದ್ಧ ನಿರ್ಲಕ್ಷ್ಯ (ಐಪಿಸಿ 304ಎ) ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT