ADVERTISEMENT

ವಿವಿಧೆಡೆ ಆಲಿಕಲ್ಲು ಮಳೆ: ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2017, 19:41 IST
Last Updated 16 ಮಾರ್ಚ್ 2017, 19:41 IST
ವಿವಿಧೆಡೆ ಆಲಿಕಲ್ಲು ಮಳೆ: ಬೆಳೆ ಹಾನಿ
ವಿವಿಧೆಡೆ ಆಲಿಕಲ್ಲು ಮಳೆ: ಬೆಳೆ ಹಾನಿ   

ಬೆಂಗಳೂರು: ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ್‌ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಬುಧವಾರ ರಾತ್ರಿ ಹಾಗು ಗುರುವಾರ ಮಳೆಯಾಗಿದೆ. ಯಾದಗಿರಿ ಜಿಲ್ಲೆ ಹುಣಸಗಿ ಬಳಿ ಪತ್ರಾಸ್‌ ಮೇಲಿದ್ದ ಕಲ್ಲು ಬಿರುಗಾಳಿಗೆ ಉರುಳಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಆಲಿಕಲ್ಲು ಮಳೆ ಸುರಿದ ಪರಿಣಾಮ ಎರಡೂ ಜಿಲ್ಲೆಗಳಲ್ಲಿ ಬೆಳೆ ಹಾನಿ ಸಂಭವಿಸಿದೆ. ಒಣದ್ರಾಕ್ಷಿ ಸಂಸ್ಕರಣಾ ಶೆಡ್‌ಗಳು ನೆಲಕ್ಕುರುಳಿವೆ. ಬಾಗಲಕೋಟೆ, ಬಳ್ಳಾರಿ ಮತ್ತು ಗದಗ ಜಿಲ್ಲೆಗಳಲ್ಲಿ ಸಿಡಿಲು ಬಡಿದು ಒಟ್ಟು 76 ಕುರಿಗಳು ಮೃತಪಟ್ಟಿವೆ.

ಇಳಕಲ್‌ ಸಮೀಪದ ನಂದವಾಡಗಿಯಲ್ಲಿ ಬಿರುಗಾಳಿಯಿಂದ ಪೆಟ್ರೋಲ್‌ ಬಂಕ್‌ಗೆ ಹಾನಿಯಾಗಿದೆ. ಕೆಲವೆಡೆ ಮನೆಗಳ ಚಾವಣಿಗಳು ಹಾರಿಹೋಗಿವೆ.
ಸಿಂದಗಿ ತಾಲ್ಲೂಕಿನ ನಾಲ್ಕು ಗ್ರಾಮಗಳಲ್ಲಿ ದ್ರಾಕ್ಷಿ, ದಾಳಿಂಬೆ, ಲಿಂಬೆ ಮತ್ತು ಈರುಳ್ಳಿ ಬೆಳೆಗೆ ಹಾನಿಯಾಗಿದೆ.  ಸಮೀಪದ ಚಿಕ್ಕರೂಗಿ ಗ್ರಾಮದಲ್ಲೂ ದ್ರಾಕ್ಷಿ ಬೆಳೆಗೆ ಹಾನಿಗೀಡಾಗಿದೆ. ಮುದ್ದೇಬಿಹಾಳದಲ್ಲಿ 17 ಮಿ.ಮೀ. ಮಳೆ ಆಗಿದೆ.

ಕುರಿಗಳ ಸಾವು: ಹುನಗುಂದ ತಾಲ್ಲೂಕಿನ ನಂದವಾಡಿಯಲ್ಲಿ ಬುಧವಾರ ರಾತ್ರಿ ಗಾಳಿ– ಮಳೆಯಿಂದ 30 ಕುರಿಗಳು ಸಾವಿಗೀಡಾಗಿವೆ. ಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಗರಿಕ್ಯಾದಿಗಿಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು 16 ಕುರಿಗಳು ಮೃತಪಟ್ಟಿವೆ. ಗದಗ ತಾಲ್ಲೂಕಿನ ಬಳಗಾನೂರ ಗ್ರಾಮದ ಜಮೀನಿನಲ್ಲಿದ್ದ 30 ಕುರಿಗಳು ಸಿಡಿಲು ಬಡಿದು ಸಾವಿಗೀಡಾಗಿವೆ.

ಬಿರುಸಿನ ಮಳೆ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ಗುರುವಾರ ಸಂಜೆ ಸುಮಾರು ಅರ್ಧ ಗಂಟೆ ಬಿರುಸಿನ ಮಳೆಯಾಗಿದೆ. ವಿಜಯಪುರ ನಗರ ಮತ್ತು ಬಸವನ ಬಾಗೇವಾಡಿ ತಾಲ್ಲೂಕಿನ ಮುತ್ತಗಿ ಸುತ್ತಮುತ್ತ ಸಂಜೆ ಸಾಧಾರಣ ಮಳೆಯಾಗಿದೆ.

ಹುಣಸಗಿ ಸಮೀಪದ ಕೊಡೇಕಲ್ಲ ಭಾಗದಲ್ಲಿ ಬುಧವಾರ ರಾತ್ರಿ ಸುರಿದ ಆಲಿಕಲ್ಲು ಮಳೆ ಮತ್ತು ಬಿರುಗಾಳಿಗೆ ಅಂದಾಜು 200 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ಹನುಮಸಾಗರದಲ್ಲಿ ಮನೆಯ ಛಾವಣಿಯ ಪತ್ರಾಸ್‌ ಮೇಲೆ ಇಟ್ಟಿದ್ದ ಕಲ್ಲು ಬಿದ್ದು ಹನುಮಂತ್ರಾಯ ಬಂಗಿ (60) ಮೃತಪಟ್ಟಿದ್ದಾರೆ. ಲಿಂಗಸುಗೂರು ತಾಲ್ಲೂಕಿನ ವಿವಿಧೆಡೆ 59 ಮೇಕೆಗಳು ಮೃತಪಟ್ಟಿವೆ. ದಾಳಿಂಬೆ ಬೆಳೆ, ಮಿಂಚೇರಿಯಲ್ಲಿ 5 ಎಕರೆ ಪಪ್ಪಾಯಿ ಹಾನಿಗೀಡಾಗಿದೆ. 

ಜಾಲಿಬೆಂಚಿಯಲ್ಲಿ ಶುದ್ಧ ನೀರಿನ ಘಟಕದ ಆರ್‌ಒ ಪ್ಲಾಂಟ್ ಉದ್ಘಾಟನೆಗೆ ಮುನ್ನವೇ ಕಿತ್ತು ಹೋಗಿದೆ. ಅಲ್ಲಲ್ಲಿ 30ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ವಿದ್ಯುತ್ ತಂತಿ ಹರಿದು ಬಿದ್ದಿವೆ.

ಕೊಪ್ಪಳ ಜಿಲ್ಲೆ ತಾವರಗೇರಾದ ರೈತ ಅಮರೇಶ ಗಲಗಲಿ ಅವರ 12 ಎಕರೆ ಮಾವಿನತೋಟದಲ್ಲಿ ಸಾವಿರಾರು ಗಿಡ ಮತ್ತು ಕಾಯಿಗಳು ನೆಲಕಚ್ಚಿವೆ. ಕನಕಗಿರಿ ಸಮೀಪದ ನವಲಿಯಲ್ಲಿ  ಸಿಡಿಲಿಗೆ ಹೋರಿ ಮೃತಪಟ್ಟಿದೆ.

ಹಾಸನ, ಕೊಡಗಿನಲ್ಲಿ ಮಳೆ: ಹಾಸನ ಜಿಲ್ಲೆಯ ವಿವಿಧೆಡೆ, ಕೊಡಗು ಜಿಲ್ಲೆಯ ಗೋಣಿಕೊಪ್ಪಲು, ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ಹಾಗೂ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಸಾಧಾರಣ ಮಳೆಯಾಗಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ಸಾಧಾರಣ, ಕಿಕ್ಕೇರಿಯಲ್ಲಿ ಒಂದು ತಾಸು ಧಾರಾಕಾರವಾಗಿ ಮಳೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.