ADVERTISEMENT

ವಿಸ್ಮಯಕಾರಿ ‘ನಾಯಿಹುಲಿ’ ಜಾಡು ಹಿಡಿದ ಕೇರಳದ ಥಾಮಸ್‌ !

ಅಳಿವಿನಂಚಿನಲ್ಲಿರುವ ಅಪರೂಪದ ಜೀವಿ ರಕ್ಷಣೆಗೆ ಏಕಾಂಗಿ ಹೋರಾಟ

ಎಸ್.ರವಿಪ್ರಕಾಶ್
Published 12 ಮಾರ್ಚ್ 2017, 20:22 IST
Last Updated 12 ಮಾರ್ಚ್ 2017, 20:22 IST
ನಾಯಿಹುಲಿ ಹೆಜ್ಜೆ ಗುರುತು
ನಾಯಿಹುಲಿ ಹೆಜ್ಜೆ ಗುರುತು   

ಬೆಂಗಳೂರು: ಕೆದಂಬಾಡಿ ಜತ್ತಪ್ಪ ರೈಗಳ  ‘ಬೇಟೆಯ ನೆನಪುಗಳು’ ಪುಸ್ತಕ ಓದಿರುವವರು ‘ನಾಯಿಹುಲಿ’ ಎಂಬ ಅಪರೂಪದ ಮತ್ತು ಬಹುತೇಕ ಅಳಿವಿನಂಚಿನಲ್ಲಿರುವ ವನ್ಯಜೀವಿಯ ಉಲ್ಲೇಖ ಮರೆತಿರಲಾರರು.

ಈ ಜೀವಿ ಈಗಲೂ ಕರ್ನಾಟಕದ ಶಿರಾಡಿ, ನೆಲ್ಯಾಡಿ, ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯದ ಅಡವಿಗಳಲ್ಲೂ, ಅದೇ ರೀತಿ ಕೇರಳದ ತ್ರಿಶೂರು, ವೈನಾಡು ಮುಂತಾದ ಜಿಲ್ಲೆಗಳ ಪಶ್ಚಿಮ ಘಟ್ಟದ ಕಾಡಿಗೆ ಸಮೀಪದ ಗ್ರಾಮಗಳಲ್ಲಿ ತೀರಾ ಅಪರೂಪಕ್ಕೆ ಕಾಣಿಸಿಕೊಳ್ಳುತ್ತಿವೆ. ಅಪರೂಪದ ಈ ಜೀವಿಗಳ  ರಕ್ಷಣೆ ಆಗಬೇಕು. ಇದಕ್ಕೆ ಸಾರ್ವಜನಿಕರ ಕೈಜೋಡಿಸಬೇಕು ಎನ್ನುತ್ತಾರೆ ಕೇರಳದ ವನ್ಯಜೀವಿ ತಜ್ಞ ಡಿಜೊ ಥಾಮಸ್.

‘2014 ರಲ್ಲಿ ಕೇರಳದ ನೆಯ್ಯಾರು ಅಣೆಕಟ್ಟು ಸಮೀಪ ಗ್ರಾಮಸ್ಥರ ಕಣ್ಣಿಗೆ ಇದು ಗೋಚರಿಸಿತ್ತು. ಇನ್ನೊಮ್ಮೆ ತ್ರಿಶೂರಿನ ಸಮೀಪದ ಕಾಂಜನಿ ಕಾಡಿನ ಬಳಿ ಕಾಣಿಸಿಕೊಂಡಿತ್ತು.  ಅದರ ಹೆಜ್ಜೆ ಗುರುತು ದಾಖಲೆ ಮಾಡಲಾಗಿದೆ. ಬೆರಳೆಣಿಕೆಯಷ್ಟು ಇರಬಹುದಾದ ಈ ಜೀವಿಗಳ  ಅಧ್ಯಯನ  ಮತ್ತು ಛಾಯಾಚಿತ್ರ ಸೆರೆ ಹಿಡಿಯಲು  ಸಾಕಷ್ಟು ಬಾರಿ ಅರಣ್ಯ ಅಧಿಕಾರಿಗಳನ್ನು ಕೋರಿದ್ದರೂ  ಅನುಮತಿ ನೀಡಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಕರ್ನಾಟಕದ ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ  ಧರ್ಮಸ್ಥಳ,  ಸುಳ್ಯ, ಸುಬ್ರಹ್ಮಣ್ಯ  ಭಾಗದಲ್ಲಿ ಇದಕ್ಕೆ ನಾಯಿ ಹುಲಿ, ಕಿರುಬ, ಕುರ್ಕ, ಶಿವಂಗಿ ಹೆಸರುಗಳಲ್ಲಿ ಕರೆಯಲಾಗುತ್ತದೆ. ಕಳೆದ ಮೂರು ದಶಕಗಳಿಂದ ಇವು ಅಷ್ಟಾಗಿ ಕಂಡು ಬರುತ್ತಿಲ್ಲ ಎನ್ನುತ್ತಾರೆ  ಈ ಭಾಗದ ಜನರು.  ಇವುಗಳ ಗಾತ್ರ ಚಿರತೆಯಂತಿದ್ದು, ಮೈಮೇಲೆ ಹುಲಿಯಂತೆ ಪಟ್ಟೆಗಳಿರುತ್ತವೆ.ಮುಖ ಮಾತ್ರ ನಾಯಿಯಂತಿರುತ್ತದೆ. ಇವು ಕೆಂಪು ಮಿಶ್ರಿತ ಕಂದು ಬಣ್ಣ ಹೊಂದಿರುತ್ತವೆ ಎಂಬ ವಿವರಣೆ ಇವರದು.

ಡಾ. ಶಿವರಾಮಕಾರಂತ ಅವರ ಪ್ರಾಣಿ ಪ್ರಪಂಚ ಕೃತಿಯಲ್ಲಿ ‘ನಾಯಿ ಹುಲಿ’ಯ ವಿವರಣೆ ಇದೆ.

ಕೆದಂಬಾಡಿ ಜತ್ತಪ್ಪ ರೈ ಅವರ ‘ಬೇಟೆಯ ನೆನಪುಗಳು’ ಕೃತಿಯಲ್ಲೂ ನಾಯಿ ಹುಲಿ ಕುರಿತು ಎರಡು ಕಡೆಗಳಲ್ಲಿ ಉಲ್ಲೇಖವಿದೆ.

ಪಶ್ಚಿಮಘಟ್ಟದ ತಪ್ಪಲುಗಳಲ್ಲಿ ಮನೆಗಳಿಂದ ನಾಯಿಗಳನ್ನು ಹೊತ್ತೊಯ್ದು ಅವುಗಳನ್ನು ಭಕ್ಷಿಸುತ್ತಿದುದರಿಂದ ‘ನಾಯಿ ಹುಲಿ’ ಎನ್ನಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಇವುಗಳು ನೋಡಲು ಸಿಗುತ್ತಿಲ್ಲ ಎನ್ನುತ್ತಾರೆ ಘಟ್ಟ ಪ್ರದೇಶದಲ್ಲಿ  ಗಿಡಮೂಲಿಕೆಗಳ ಅಧ್ಯಯನಕ್ಕೆ ತೆರಳುವ ಡಾ. ಸತ್ಯನಾರಾಯಣ ಭಟ್ಟ.

‘ನಾನು ವಿವರಿಸುವ ಜೀವಿ ಕಿರುಬಕ್ಕಿಂತಲೂ ತುಂಬಾ ಭಿನ್ನವಾಗಿದೆ. ನಾಯಿ ಮತ್ತು ಬೆಕ್ಕು ಮಿಶ್ರಣ ತಳಿ ಆಗಿರುವ ‘ನಾಯಿಹುಲಿ’ ಅಥವಾ ‘ನೀಲಗಿರಿ ಕಡುವ’ ಕಿರುಬಕ್ಕಿಂತಲೂ ಭಿನ್ನವಾದುದು ಮತ್ತು ಹೊಸ ಪ್ರಬೇಧಕ್ಕೆ ಸೇರಿದ್ದು. ಈ ಬಗ್ಗೆ ಅಧ್ಯಯನಕ್ಕೆ ಅವಕಾಶ ನೀಡಬೇಕು ಮತ್ತು ರಕ್ಷಣೆಗೆ ಕ್ರಮ ಕೈಗೊಳ್ಳಬೇಕು’  ಎನ್ನುತ್ತಾರೆ  ಥಾಮಸ್‌ .

ಗ್ರಾಮಸ್ಥರು ಮತ್ತು ಅದನ್ನು ಕಂಡವರಿಂದ ಸಾಕಷ್ಟು ಮಾಹಿತಿ ಸಂಗ್ರಹಿಸಿರುವ ಥಾಮಸ್‌ ಅವರು, ಕಾಡಿನಲ್ಲಿ ಅದರ ಅಧ್ಯಯನಕ್ಕೆ ಕೇರಳ ಅರಣ್ಯ ಇಲಾಖೆಯ ಬಾಗಿಲು ತಟ್ಟಿದರೂ ಪ್ರಯೋಜನ ಆಗಿಲ್ಲ.  ಆದರೆ, ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿವಿಧ ರಾಜ್ಯಗಳಿಗೆ ತೆರಳುತ್ತಿರುವುದಾಗಿ ಹೇಳಿದರು. ಕಳೆದ ವರ್ಷ ಮೈಸೂರಿನಲ್ಲಿ ನಡೆದ ಭಾರತೀಯ ವಿಜ್ಞಾನ ಕಾಂಗ್ರೆಸ್‌ನಲ್ಲಿ ಈ ಕುರಿತು ಒಂದು ಪ್ರಬಂಧವನ್ನು ಮಂಡಿಸಿರುವುದಾಗಿಯೂ ಹೇಳಿದರು.

‘ಥಾಮಸ್‌ ಅವರು ವಿವರಿಸಿರುವ ವನ್ಯಜೀವಿ ಮಲಬಾರ್‌ ಸಿವೆಟ್‌ ಅಥವಾ ಪುನಗು ಬೆಕ್ಕು ಇರಲಿಕ್ಕೂ ಸಾಕು, ಅವರ ವಿವರಿಸಿರುವ ಜೀವಿಯ ಬಗ್ಗೆ ಅಷ್ಟಾಗಿ ತಿಳಿದು ಬರದು. ಕ್ಯಾಮರಾ ಟ್ರಾಪ್‌ ಬಳಸಿ ಚಿತ್ರ ಹಿಡಿದರೆ ಸತ್ಯಾಸತ್ಯತೆ ತಿಳಿಯಬಹುದು’ ಎನ್ನುತ್ತಾರೆ ವೈಲ್ಡ್‌ಲೈಫ್‌ ಫಸ್ಟ್‌ನ ಪ್ರವೀಣ್‌ ಭಾರ್ಗವ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.