ADVERTISEMENT

ವೆಬ್‌ಸೈಟ್‌ಗೆ ಲೈಂಗಿಕ ದೃಶ್ಯಾವಳಿ: ಟೆಕಿ ಸೆರೆ

ಮಾಜಿ ಪತ್ನಿಯ ವಿಡಿಯೊವನ್ನೇ ಅಪ್‌ಲೋಡ್‌ ಮಾಡಿದ್ದ ತರೀಕೆರೆ ಮೂಲದ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 19:30 IST
Last Updated 15 ಫೆಬ್ರುವರಿ 2017, 19:30 IST

ಚಿಕ್ಕಮಗಳೂರು: ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಜತೆಗೆ ‘ಸಹಬಾಳ್ವೆ’ ನಡೆಸುತ್ತಿದ್ದ ಟೆಕಿಯೊಬ್ಬ ಆಕೆಯೊಂದಿಗಿನ  ಲೈಂಗಿಕ ಕ್ರಿಯೆಯ ವಿಡಿಯೊವನ್ನು ಅಶ್ಲೀಲ ಜಾಲತಾಣಗಳಿಗೆ ಅಪ್‌ಲೋಡ್‌ ಮಾಡಿದ  ಪ್ರಕರಣ ಬೆಳಕಿಗೆ ಬಂದಿದೆ.

ತರೀಕೆರೆ ತಾಲ್ಲೂಕಿನ  ವಿದ್ಯಾರ್ಥಿನಿ ನೀಡಿದ ದೂರಿನ ಅನ್ವಯ ಅತ್ಯಾಚಾರ ಆರೋಪದಲ್ಲಿ  ಆತನನ್ನು ಬಂಧಿಸಲಾಗಿದೆ.

ಬೆಂಗಳೂರಿನ ಮಾನ್ಯತಾ ಟೆಕ್‌­ಪಾರ್ಕ್‌ನಲ್ಲಿರುವ ಸಾಫ್ಟ್‌ವೇರ್ ಕಂಪೆನಿ ಯೊಂದರಲ್ಲಿ ವಾರ್ಷಿಕ ₹ 7 ಲಕ್ಷ ವೇತನ ಪಡೆಯುತ್ತಿದ್ದ ತರೀಕೆರೆ ಪಟ್ಟಣ ಮೂಲದ ಹೇಮಂತ್‌(27) ಬಂಧಿತ ಆರೋಪಿ.

ಆರೋಪಿ ಹೇಮಂತ್‌, ಪ್ರತಿಷ್ಠಿತ ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಉದ್ಯೋಗ ಗಿಟ್ಟಿಸಿದ್ದ. ಸ್ನೇಹಿತೆ ಮೂಲಕ ಪರಿಚಿತಳಾಗಿದ್ದ ಆಕೆಯ ಸಹೋದರಿ, ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಜತೆಗೆ ಪ್ರೀತಿ ಚಿಗುರೊಡೆದಿತ್ತು.

ಇಬ್ಬರೂ ಬೆಂಗಳೂರಿನಲ್ಲಿ ಕೆಲ ಕಾಲ ‘ಸಹಜೀವನ’ ನಡೆಸಿ, ಮದುವೆ ಕೂಡ ಆಗಿದ್ದರು. ಇಬ್ಬರ ನಡುವೆ ವೈಮನಸ್ಸು ಉಂಟಾಗಿ ಕೆಲ ದಿನಗಳಲ್ಲೇ ಮದುವೆ ಮುರಿದುಬಿದ್ದಿತ್ತು. ಸಹ ಜೀವನದಲ್ಲಿದ್ದಾಗ ಇಬ್ಬರ ನಡುವೆ ನಡೆದಿದ್ದ ಲೈಂಗಿಕ ಕ್ರಿಯೆಯ ದೃಶ್ಯಗಳನ್ನು ಯುವಕ ಚಿತ್ರೀಕರಿಸಿಕೊಂಡಿದ್ದ. ಈ ಬಗ್ಗೆ ಯುವತಿ ಬೆಂಗಳೂರು ನಗರದ ಪೊಲೀಸ್‌ ಠಾಣೆಯೊಂದಕ್ಕೆ ದೂರು ನೀಡಿದ್ದಳು. ಅಲ್ಲಿನ ಪೊಲೀಸರು ಟೆಕಿಗೂ , ಯುವತಿಗೂ ಬುದ್ಧಿ ಹೇಳಿ, ಪ್ರಕರಣ ದಾಖಲಿಸದೆ ಸಾಗಹಾಕಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ವರ್ಷದ ಹಿಂದೆ ಯುವತಿ ಬೆಂಗಳೂರಿನ ಕಾಲೇಜಿನಿಂದ ಚಿಕ್ಕಮಗಳೂರು ನಗರದ ಕಾಲೇಜಿಗೆ ವರ್ಗ ಮಾಡಿಸಿಕೊಂಡು, ಎಂಜಿನಿಯರಿಂಗ್‌ ಶಿಕ್ಷಣ ಮುಂದುವರಿಸಿದ್ದಳು. ಯುವತಿ ದೂರವಾದ ಹತಾಶೆಯಿಂದ ಆರೋಪಿ ಹೇಮಂತ್‌, ಆಕೆಯೊಂದಿಗಿನ ಲೈಂಗಿಕ ಕ್ರಿಯೆಯ ದೃಶ್ಯಗಳ ವಿಡಿಯೋಗಳನ್ನು ಜನವರಿ ತಿಂಗಳಿನಲ್ಲಿ ಯೂಟ್ಯೂಬ್‌ ಮತ್ತು ಫೇಸ್‌ಬುಕ್‌ ಹಾಗೂ ಅಶ್ಲೀಲ ಚಿತ್ರಗಳ ವೆಬ್‌ಸೈಟ್‌ಗಳಿಗೆ ಅಪ್‌ಲೋಡ್‌ ಮಾಡಿದ್ದ. ಈ ಬಗ್ಗೆ ಯುವತಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಅವರಿಗೆ ದೂರು ನೀಡಿದ್ದಳು.

ಬೆಂಗಳೂರಿನಲ್ಲಿ ಆರೋಪಿಯನ್ನು ವಶಕ್ಕೆ ಪಡೆದ ತನಿಖಾಧಿಕಾರಿಗಳು, ವಿಚಾರಣೆ ನಡೆಸಿದಾಗ ‘ಯುವತಿ ಪಿಯುಸಿಯಲ್ಲಿರುವಾಗಲೇ ಸ್ನೇಹವಿತ್ತು. ಕೆಲ ವರ್ಷ ಕಾಲ ಇಬ್ಬರೂ ಸಹಜೀವನ ಕೂಡ ನಡೆಸಿದ್ದೆವು. ಮನೆಯವರ ಒಪ್ಪಿಗೆ ಇಲ್ಲದೆ ಮದುವೆ ಮಾಡಿಕೊಂಡಿದ್ದೆವು. ಆದರೆ, ಆಕೆ ಬೇರೆಯವರ ಸ್ನೇಹ ಮಾಡಿ ತೊರೆದು ಹೋದಳು. ಲೈಂಗಿಕ ಕ್ರಿಯೆಯ ವಿಡಿಯೊ ವೆಬ್‌ಸೈಟ್‌ಗೆ ಹಾಕಿದರೆ ಆಕೆಯನ್ನು ಮತ್ತೆ ಯಾರೂ ಮದುವೆಯಾಗುವುದಿಲ್ಲ. ಅನಿವಾರ್ಯವಾಗಿ ಮತ್ತೆ ನನ್ನ ಬಳಿಗೆ ಬರುತ್ತಾಳೆಂದು ಇಂತಹ ಕೃತ್ಯ ಎಸಗಿದೆ’ ಎಂದು ತಪ್ಪೊಪ್ಪಿಗೆ ನೀಡಿದ್ದಾನೆ ಎನ್ನುತ್ತವೆ ಪೊಲೀಸ್‌ ಮೂಲಗಳು.

ಆರೋಪಿ ವಿರುದ್ಧ ಅತ್ಯಾಚಾರ ಮತ್ತು 2000ರ ಮಾಹಿತಿ ತಂತ್ರಜ್ಞಾನ ಕಾಯ್ದೆ ಉಲ್ಲಂಘನೆ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಫೆ.10ರಂದು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಯನ್ನು  ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ನಡೆಯಲಿಲ್ಲ ರಾಜಿ: ಆರೋಪಿ ವಶಕ್ಕೆ ತೆಗೆದುಕೊಂಡಿದ್ದ ಪೊಲೀಸರು, ಯುವಕ ಮತ್ತು ಯುವತಿ ಸಹಜೀವನ ನಡೆಸಿರುವುದು, ಮದುವೆ ಮಾಡಿಕೊಂಡಾಗ ತೆಗೆಸಿಕೊಂಡಿರುವ ಛಾಯಾಚಿತ್ರ, ಯುವಕನ ವಯೋವೃದ್ಧ ತಾಯಿ ಗಂಭೀರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವುದನ್ನು ಪರಿಗಣಿಸಿ, ರಾಜಿ ಮಾಡಿಕೊಳ್ಳಲು ಎರಡು ದಿನ ಕಾಲಾವಕಾಶ ನೀಡಿದ್ದರು. ಎಲ್ಲ ಮರೆತು ಒಟ್ಟಿಗೆ ಸಂಸಾರ ನಡೆಸಲು ಯುವತಿಯನ್ನು ಆರೋಪಿ ಹೇಮಂತ್‌ ಪರಿಪರಿಯಾಗಿ ಬೇಡಿಕೊಂಡ. ಆದರೆ, ಯುವತಿ ಒಪ್ಪಲಿಲ್ಲ. ಅತ್ಯಾಚಾರ ಮತ್ತು ಮಾನಹರಣ ದೂರು ನೀಡಿದಳು. ಕಾನೂನು ಪ್ರಕಾರ ಯುವಕನ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.