ADVERTISEMENT

ವೈದ್ಯಕೀಯ ಶುಲ್ಕ ಶೇ 10 ಹೆಚ್ಚಳ

ಖಾಸಗಿ ಕಾಲೇಜುಗಳೊಂದಿಗೆ ನಡೆಸಿದ ಸಭೆಯಲ್ಲಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 28 ಜೂನ್ 2017, 19:58 IST
Last Updated 28 ಜೂನ್ 2017, 19:58 IST

ಬೆಂಗಳೂರು: ವೈದ್ಯಕೀಯ (ಎಂಬಿಬಿಎಸ್‌) ಕೋರ್ಸ್‌ಗೆ ವಾರ್ಷಿಕ ಶೇ 10ರಂತೆ ಮುಂದಿನ ಮೂರು ವರ್ಷಗಳವರೆಗೆ ಶುಲ್ಕ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಖಾಸಗಿ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿ ಗಳೊಂದಿಗೆ ಬುಧವಾರ  ನಡೆಸಿದ ಸಭೆ ಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಇದರಿಂದಾಗಿ 2017–18ನೇ ಸಾಲಿಗೆ ಎಂಬಿಬಿಎಸ್‌ ಕೋರ್ಸ್‌ ಶುಲ್ಕ ಸರ್ಕಾರಿ ಕಾಲೇಜುಗಳಲ್ಲಿ ₹ 70,000ದಿಂದ ₹ 77,000 ಮತ್ತು ಖಾಸಗಿ ಕಾಲೇಜುಗಳ ಶುಲ್ಕ ₹ 5.75 ಲಕ್ಷದಿಂದ ₹ 6.35 ಲಕ್ಷಕ್ಕೆ ಏರಿಕೆ ಆಗಲಿದೆ. ಆದರೆ, ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳ ಮಧ್ಯೆ ಆಗಿರುವ ಸೀಟು ಒಪ್ಪಂದದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ.

ADVERTISEMENT

ದಂತ ವೈದ್ಯಕೀಯ ಕೋರ್ಸ್‌ನ ಶುಲ್ಕ ಮತ್ತು ಕೌನ್ಸೆಲಿಂಗ್‌ ಬಗ್ಗೆ ಸಭೆಯಲ್ಲಿ ಯಾವುದೇ ತೀರ್ಮಾನ ಆಗಿಲ್ಲ. ಈ ಸಂಬಂಧ ಎರಡು–ಮೂರು ದಿನಗಳಲ್ಲಿ ಮತ್ತೊಂದು ಸಭೆ ನಡೆಸಲು ನಿರ್ಧರಿಸ ಲಾಗಿದೆ.

ಶುಲ್ಕದಲ್ಲಿ ಕನಿಷ್ಠ ಹೆಚ್ಚಳ: ‘ಹೊರರಾಜ್ಯಗಳಲ್ಲಿ ಎಂಬಿಬಿಎಸ್‌ ಶುಲ್ಕ ₹ 10 ಲಕ್ಷಕ್ಕಿಂತ ಹೆಚ್ಚಿದೆ. ಆ ರಾಜ್ಯಗಳನ್ನು ಗಮನಿಸಿ ಶುಲ್ಕ ನಿಗದಿ ಮಾಡಬೇಕು ಎಂದು ಖಾಸಗಿ ಕಾಲೇಜುಗಳು ಮನವಿ ಸಲ್ಲಿಸಿದ್ದವು. ಆದರೆ, ಕಳೆದ ವರ್ಷಕ್ಕಿಂತ ಶೇ 10ರಷ್ಟು ಮಾತ್ರ ಶುಲ್ಕ ಹೆಚ್ಚಿಸಲು ಅನುಮತಿ ನೀಡಲಾಗಿದೆ’ ಎಂದು ಸಚಿವರು ಹೇಳಿದರು.

ನೀಟ್‌ ಮೆರಿಟ್‌ ಪಟ್ಟಿ ಆಧರಿಸಿ ರಾಜ್ಯಕ್ಕೆ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಲಾಗು ವುದು. ಜುಲೈ 5ರಿಂದ ಎಂಬಿಬಿಎಸ್ ಕೌನ್ಸೆಲಿಂಗ್‌ ಆರಂಭಿಸಲು ಸಿದ್ಧತೆ ನಡೆದಿದೆ ಎಂದರು.

ಸರ್ಕಾರಿ, ಖಾಸಗಿ ಮತ್ತು ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತ ಕಾಲೇಜಿನ ಎಲ್ಲ ಸೀಟುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದಲೇ ಕೌನ್ಸೆಲಿಂಗ್ ನಡೆಸಲಾಗುತ್ತದೆ. ಡೀಮ್ಡ್‌ ವಿಶ್ವವಿದ್ಯಾಲಯಗಳಿಗೆ ಕೇಂದ್ರ ಸರ್ಕಾರದ ಸಾರ್ವಜನಿಕ ಆರೋಗ್ಯ ಸೇವೆಗಳ ನಿರ್ದೇಶನಾಲಯ (ಡಿಜಿಎಚ್‌ಎಸ್‌) ಕೌನ್ಸೆಲಿಂಗ್‌ ನಡೆಸಲಿದೆ ಎಂದು ವಿವರಿಸಿದರು.

ವೈದ್ಯಕೀಯ ಸೀಟು 350ಕ್ಕೆ ಹೆಚ್ಚಳ
ಪ್ರಸಕ್ತ ಶೈಕ್ಷಣಿಕ ವರ್ಷ ಎಂಬಿಬಿಎಸ್‌ಗೆ 350 ಸೀಟುಗಳು ಹೆಚ್ಚಳ ಆಗಿವೆ ಎಂದು ಶರಣ ಪ್ರಕಾಶ ಪಾಟೀಲ ಹೇಳಿದರು.
ಮಂಡ್ಯ, ಹಾಸನ, ಶಿವಮೊಗ್ಗ, ರಾಯಚೂರು, ಬೆಳಗಾವಿ ಮತ್ತು ಬೀದರ್‌ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಪ್ರವೇಶ ಮಿತಿಯನ್ನು 100ರಿಂದ 150 ಸೀಟುಗಳಿಗೆ ಮತ್ತು ಹುಬ್ಬಳ್ಳಿಯ ಕಿಮ್ಸ್‌ ಕಾಲೇಜಿನ ಪ್ರವೇಶ ಮಿತಿಯನ್ನು 150ರಿಂದ 200ಕ್ಕೆ ಹೆಚ್ಚಿಸಲು ಭಾರತೀಯ ವೈದ್ಯಕೀಯ ಮಂಡಳಿ ಅನುಮತಿ ನೀಡಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.