ADVERTISEMENT

ವೈದ್ಯ ಸೀಟು ಆಕಾಂಕ್ಷಿಗಳಿಗೆ ತಪ್ಪದ ಗೊಂದಲ

ನೀಟ್‌ಗೆ ಮೊದಲೇ ಸಿಇಟಿ ಕೌನ್ಸೆಲಿಂಗ್‌: ಎಂಜಿನಿಯರಿಂಗ್ ಸೇರಲು ವಿದ್ಯಾರ್ಥಿಗಳ ಹಿಂದೇಟು

ವಿರೂಪಾಕ್ಷ ಹೊಕ್ರಾಣಿ
Published 23 ಮೇ 2017, 19:45 IST
Last Updated 23 ಮೇ 2017, 19:45 IST
ವೈದ್ಯ ಸೀಟು ಆಕಾಂಕ್ಷಿಗಳಿಗೆ ತಪ್ಪದ ಗೊಂದಲ
ವೈದ್ಯ ಸೀಟು ಆಕಾಂಕ್ಷಿಗಳಿಗೆ ತಪ್ಪದ ಗೊಂದಲ   

ಬೆಂಗಳೂರು: ನೀಟ್‌ಗಿಂತ(ಎನ್‌ಇಇಟಿ) ಮೊದಲೇ ಸಿಇಟಿ ಪ್ರವೇಶ ಪ್ರಕ್ರಿಯೆ ಆರಂಭವಾಗುವುದರಿಂದ  ವೈದ್ಯಕೀಯ ಕೋರ್ಸ್‌ ಸೇರುವ ಉತ್ಸಾಹದಲ್ಲಿರುವ ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಯಿದೆ.

ಇದುವರೆಗೆ ವಿದ್ಯಾರ್ಥಿಗಳು ವೈದ್ಯ ಸೀಟು ಸಿಗದಿದ್ದಾಗ ಎಂಜಿನಿಯರಿಂಗ್‌ ಕೋರ್ಸ್‌ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೆ, ಈ ವರ್ಷ ಎರಡೂ ಕೋರ್ಸ್‌ಗಳಿಗೆ ಪ್ರತ್ಯೇಕ ಪ್ರವೇಶ ಪರೀಕ್ಷೆಗಳು ನಡೆದಿರುವುದು ಸಮಸ್ಯೆಗೆ ಕಾರಣವಾಗಿದೆ.

ಸಿಇಟಿ ಫಲಿತಾಂಶ ಬಹುತೇಕ ಸಿದ್ಧವಾಗಿದೆ. ತಿಂಗಳ ಅಂತ್ಯದೊಳಗೆ ಪ್ರಕಟವಾಗಲಿದೆ. ಸಿಬಿಎಸ್‌ಇ ಮತ್ತು ಐಸಿಎಸ್‌ಇ 12ನೇ ತರಗತಿ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ಜೂನ್‌ 1ರಿಂದಲೇ  ಎಂಜಿನಿಯರಿಂಗ್‌ ಪ್ರವೇಶ ಕೌನ್ಸೆಲಿಂಗ್‌ ಪ್ರಕ್ರಿಯೆಯೂ ಆರಂಭ ಆಗಬಹುದು.  ನೀಟ್ ಫಲಿತಾಂಶ ಜೂನ್ 8ರಂದು ಪ್ರಕಟವಾಗುವ ಸಂಭವವಿದೆ.

ADVERTISEMENT

ಹಣ ಕಳೆದುಕೊಳ್ಳುವ ವಿದ್ಯಾರ್ಥಿಗಳು: ಸರ್ಕಾರಿ ಕಾಲೇಜು ಅಥವಾ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಎಂಜಿನಿಯರಿಂಗ್ ಸೀಟು ಪಡೆದ ನಂತರ ಅದಕ್ಕೆ ನಿಗದಿಪಡಿಸಿರುವ ಶುಲ್ಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹೆಸರಿಗೆ ಪಾವತಿಸಬೇಕು. ಸರ್ಕಾರಿ ಕೋಟಾದಡಿ ಖಾಸಗಿ ಕಾಲೇಜಿನಲ್ಲಿ ಸೀಟು ಪಡೆದ ವಿದ್ಯಾರ್ಥಿಗಳು ಶುಲ್ಕದ ಜೊತೆಗೆ ಹೆಚ್ಚುವರಿಯಾಗಿ ₹ 25,000ವರೆಗೆ ‘ಅಭಿವೃದ್ಧಿ ಶುಲ್ಕ’ ಕೊಡಬೇಕಾಗುತ್ತದೆ. 

ಎಂಜಿನಿಯರಿಂಗ್‌ ಕೋರ್ಸ್‌ಗೆ ಪ್ರವೇಶ ಪಡೆದ ಬಳಿಕ ವೈದ್ಯಕೀಯ ಕೌನ್ಸೆಲಿಂಗ್‌ನಲ್ಲಿ ಸೀಟು ಸಿಕ್ಕರೆ, ಎಂಜಿನಿಯರಿಂಗ್‌ ಸೀಟಿಗಾಗಿ ಪ್ರಾಧಿಕಾರಕ್ಕೆ ಕಟ್ಟಿರುವ ಶುಲ್ಕ ಮಾತ್ರ ಮರು ಪಾವತಿಯಾಗುತ್ತದೆ. ಆದರೆ, ಕಾಲೇಜುಗಳು ಕಟ್ಟಿಸಿಕೊಂಡಿರುವ ಅಭಿವೃದ್ಧಿ ಶುಲ್ಕ ವಾಪಸ್‌ ಬರುವುದಿಲ್ಲ ಎಂಬುದು ವಿದ್ಯಾರ್ಥಿಗಳ ಆರೋಪ.

ಇದಲ್ಲದೆ, ಮೆಡಿಕಲ್ ಸೀಟುಗಳಿಗೆ ನಡೆಯುವ ಮೂರು ಅಥವಾ ನಾಲ್ಕನೇ ಸುತ್ತಿನ ಕೌನ್ಸೆಲಿಂಗ್‌ ಸೆಪ್ಟೆಂಬರ್‌ ಅಂತ್ಯದ ವೇಳೆಗೆ ಮುಗಿಯಲಿದೆ. ಈ ಹಂತದಲ್ಲಿ ವಿದ್ಯಾರ್ಥಿ ಎಂಜಿನಿಯರಿಂಗ್‌ ಬಿಟ್ಟು ವೈದ್ಯ ಕೋರ್ಸ್‌ ಸೇರಬಯಸಿದರೆ ಎಂಜಿನಿಯರಿಂಗ್ ಕೋರ್ಸ್‌ನ ನಾಲ್ಕೂ ವರ್ಷದ ಪೂರ್ಣ ಶುಲ್ಕವನ್ನು ಪಾವತಿಸುವಂತೆ ಕಾಲೇಜುಗಳು ಪಟ್ಟು ಹಿಡಿಯಬಹುದು ಎಂಬ ಆತಂಕ ವಿದ್ಯಾರ್ಥಿಗಳಿಗಿದೆ. ಅಕಸ್ಮಾತ್‌ ಹಣ ಕಟ್ಟದಿದ್ದರೆ ಮೂಲ ದಾಖಲೆಗಳನ್ನು ಹಿಂತಿರುಗಿಸದೆ ಸತಾಯಿಸಬಹುದು ಎಂಬುದು ವಿದ್ಯಾರ್ಥಿಗಳ ಕಳವಳ.

ಸೀಟು ಕಾಯ್ದಿರಿಸಲು ಅವಕಾಶ ಇದೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಂಜಿನಿಯರಿಂಗ್ ಕೋರ್ಸ್‌ ಪ್ರವೇಶಕ್ಕೆ ಕೌನ್ಸೆಲಿಂಗ್‌ ನಡೆಸುವ ಸಂದರ್ಭದಲ್ಲಿ ‘ಚಾಯ್ಸ್’ಗಳನ್ನು ನೀಡುತ್ತದೆ. ಚಾಯ್ಸ್‌–1 ಆಯ್ಕೆ ಮಾಡಿಕೊಂಡರೆ ಅದೇ ಕೌನ್ಸೆಲಿಂಗ್‌ನಲ್ಲೇ ಸೀಟು ಆಯ್ಕೆ ಮಾಡಿಕೊಂಡು ಪ್ರವೇಶ ಪಡೆಯಬೇಕು. ಚಾಯ್ಸ್–2 ಅಥವಾ ಚಾಯ್ಸ್‌–3 ಆಯ್ಕೆ ಮಾಡಿಕೊಂಡರೆ ಮೆಡಿಕಲ್ ಸೀಟು ಲಭ್ಯತೆ ಗಮನಿಸಿಕೊಂಡು ಎರಡು ಅಥವಾ ಮೂರನೇ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಎಂಜಿನಿಯರಿಂಗ್ ಸೇರಲು ಅವಕಾಶ ಇದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

‘₹ 1 ಲಕ್ಷ ಕಳೆದುಕೊಂಡೆ’
‘2016–17ನೇ ಸಾಲಿನಲ್ಲಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪ್ರವೇಶ ಪಡೆದೆ. ಆ ನಂತರ ಕೋಲಾರದ ಸಂಭ್ರಮ್ ವೈದ್ಯಕೀಯ ಕಾಲೇಜಿನಲ್ಲಿ ಸರ್ಕಾರಿ ಮೆಡಿಕಲ್ ಸೀಟು ಸಿಕ್ಕಿತು. ಎಂಜಿನಿಯರಿಂಗ್ ಕಾಲೇಜಿನವರು ಮೂಲ ದಾಖಲೆಗಳನ್ನು ಕೊಡಲು ₹ 1.5 ಲಕ್ಷ ಕೇಳಿದರು. ಕೊನೆಗೆ ₹ 75,000 ಮತ್ತು 23 ಸಾವಿರ ಅಭಿವೃದ್ಧಿ ಶುಲ್ಕ ಪಾವತಿಸಿದ ಬಳಿಕ ದಾಖಲೆಗಳನ್ನು ಹಿಂತಿರುಗಿಸಿದರು’ ಎಂದು ಎಂ. ಸಂಜನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.