ADVERTISEMENT

ಶಾಸಕರ ಪರ ಪ್ರಚಾರ ಕೈಗೊಂಡವರಿಗೆ ಆಟೊ!

ಶಶಿಕಾಂತ್ ಎಸ್. ಶೆಂಬೆಳ್ಳಿ
Published 23 ನವೆಂಬರ್ 2017, 19:30 IST
Last Updated 23 ನವೆಂಬರ್ 2017, 19:30 IST
ಚಾಲಕರಿಗೆ ಕೊಡಲು ತಂದಿರುವ ಹೊಸ ಆಟೊಗಳು
ಚಾಲಕರಿಗೆ ಕೊಡಲು ತಂದಿರುವ ಹೊಸ ಆಟೊಗಳು   

ಹೊಸಪೇಟೆ: ತಮ್ಮ ಪರ ಪ್ರಚಾರ ಕೈಗೊಳ್ಳುವ ಆಟೊ ಚಾಲಕರಿಗೆ, ಸ್ಥಳೀಯ ಶಾಸಕ ಆನಂದ್‌ ಸಿಂಗ್‌ ಉಚಿತವಾಗಿ ಆಟೊ ನೀಡಲು ಮುಂದಾಗಿದ್ದಾರೆ.

ಪ್ರಚಾರ ಕೈಗೊಳ್ಳಲು ಬಯಸುವ ಚಾಲಕರು ತಮ್ಮ ಆಟೊಗಳ ಮೇಲೆ ಸ್ಟಿಕ್ಕರ್‌, ಕಿರು ಪೋಸ್ಟರ್‌ ಅಂಟಿಸಿಕೊಂಡು ಓಡಾಡಬೇಕು. ಅದರ ಎರಡೂ ಬದಿಯಲ್ಲಿ ಬಿಜೆಪಿ ಚಿಹ್ನೆ, ಹಿಂಭಾಗದಲ್ಲಿ ಮುಂಡಾಸು ಧರಿಸಿರುವ ಶಾಸಕರ ಭಾವಚಿತ್ರ ಹಾಗೂ ‘ಆನಂದ್‌ ಸಿಂಗ್‌ ಅವರ ನಡಿಗೆ, ವಿಜಯನಗರ ಕ್ಷೇತ್ರದ ಅಭಿವೃದ್ಧಿ ಕಡೆಗೆ’, ‘ಕ್ಷೇತ್ರದ ಅಭಿವೃದ್ಧಿಗಾಗಿ ಹರಸಿ, ಆಶೀರ್ವದಿಸಿ’ ಎಂಬ ಬರಹ ಇರಬೇಕು ಎಂದು ಸೂಚಿಸಲಾಗಿದೆ. ‘ಆನಂದಲಕ್ಷ್ಮೀ ಲಕ್ಕಿ ಡಿಪ್‌’ ಹೆಸರಿನಲ್ಲಿ ಚುನಾವಣಾ ಪ್ರಚಾರ ನಡೆಸಲಾಗುತ್ತಿದ್ದು, ಇದಕ್ಕೆಲ್ಲ ಶಾಸಕರೇ ಹಣ ವ್ಯಯಿಸುತ್ತಿದ್ದಾರೆ.

ನಗರದಲ್ಲಿ ಆಟೊ ಓಡಿಸುವ ಯಾರು ಬೇಕಾದರೂ ತಾಲ್ಲೂಕು ಬಿಜೆಪಿ ಕಚೇರಿಯನ್ನು ಸಂಪರ್ಕಿಸಿ ಹೆಸರು ನೋಂದಾಯಿಸಬಹುದು. ಅವರ ವಾಹನದ ಸಂಖ್ಯೆಗಳನ್ನು ಒಂದೆಡೆ ಕಲೆ ಹಾಕಿ, ಕೊನೆಯಲ್ಲಿ ಲಕ್ಕಿ ಡ್ರಾ ಮೂಲಕ ಒಂಬತ್ತು ಚೀಟಿಗಳನ್ನು ಎತ್ತಲಾಗುತ್ತದೆ. ಅದರಲ್ಲಿ ಆಯ್ಕೆಯಾಗುವ ಒಂಬತ್ತು ಮಂದಿಗೆ ಉಚಿತವಾಗಿ ಆಟೊ ನೀಡಲು ಯೋಜನೆ ರೂಪಿಸಲಾಗಿದೆ.

ADVERTISEMENT

ಭಾನುವಾರದಿಂದ (ನ.19) ಈ ಪ್ರಕ್ರಿಯೆ ಆರಂಭಗೊಂಡಿದ್ದು, ಇಲ್ಲಿಯವರೆಗೆ 892 ಆಟೊ ಚಾಲಕರು ಹೆಸರು ನೋಂದಾಯಿಸಿದ್ದಾರೆ. ತಾಲ್ಲೂಕಿನಲ್ಲಿ ಒಟ್ಟು ಐದು ಸಾವಿರ ಆಟೊಗಳಿವೆ. ಡಿಸೆಂಬರ್‌, ಜನವರಿ ಹಾಗೂ ಫೆಬ್ರುವರಿಯಲ್ಲಿ ತಲಾ ಮೂರು ಆಟೊಗಳನ್ನು ವಿತರಿಸಲು ನಿರ್ಧರಿಸಲಾಗಿದೆ. ಪ್ರತಿ ಆಟೊ ಬೆಲೆ ₹1.80 ಲಕ್ಷ ಇದ್ದು, ಈಗಾಗಲೇ ಒಂಬತ್ತು ಹೊಸ ಆಟೊಗಳನ್ನು ಖರೀದಿಸಲಾಗಿದೆ. ಅವುಗಳಿಗೆ ನಗರದ ವಡಕರಾಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಬಿಜೆಪಿ ಕಚೇರಿಯಲ್ಲಿ ಇರಿಸಲಾಗಿದೆ.

‘ವಾಹನಕ್ಕೆ ಬಿಜೆಪಿ ಪೋಸ್ಟರ್‌ ಅಂಟಿಸಿಕೊಂಡರೆ ಲಕ್ಕಿ ಡ್ರಾ ಮೂಲಕ ಉಚಿತವಾಗಿ ಆಟೊ ಕೊಡುತ್ತಾರೆ ಎಂಬ ವಿಷಯ ತಿಳಿಯಿತು. ಹಾಗಾಗಿ ನಾನೂ ಹೋಗಿ ಹೆಸರು ಬರೆಸಿ, ಆಟೊಗೆ ಪೋಸ್ಟರ್‌ ಹಚ್ಚಿಸಿದೆ’ ಎನ್ನುತ್ತಾರೆ ಚಾಲಕ ಬಂದೇ ನವಾಜ್‌.

ಇನ್ನೊಬ್ಬ ಆಟೊ ಚಾಲಕ ರಾಜು ಪ್ರತಿಕ್ರಿಯಿಸಿ, ‘ಬ್ಯಾಂಕಿನಲ್ಲಿ ಸಾಲ ಮಾಡಿ ಆಟೊ ಓಡಿಸುತ್ತಿದ್ದೇನೆ. ಒಂದು ವೇಳೆ ಉಚಿತವಾಗಿ ಆಟೊ ಸಿಕ್ಕರೆ ಸಾಲದ ಕಿರಿಕಿರಿ ತಪ್ಪುತ್ತದೆ. ಅದೃಷ್ಟವಿದ್ದರೆ ಆಟೊ ಸಿಗಬಹುದು’ ಎಂದರು.

‘ಯಾರಿಗೂ ಆಮಿಷ ಒಡ್ಡುತ್ತಿಲ್ಲ. ಇದು ಕೂಡ ಚುನಾವಣಾ ಪ್ರಚಾರದ ಭಾಗ. ನಮ್ಮ ಪರ ಪ್ರಚಾರ ಕೈಗೊಳ್ಳುವಂತೆ ಯಾರ ಮೇಲೆಯೂ ಒತ್ತಡ ಹೇರುತ್ತಿಲ್ಲ. ಯಾರು ಬೇಕಾದರೂ ಬಂದು ಹೆಸರು ನೋಂದಾಯಿಸಿ ಪ್ರಚಾರ ಮಾಡಬಹುದು’ ಎಂದು ಶಾಸಕ ಆನಂದ್‌ ಸಿಂಗ್‌ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.