ADVERTISEMENT

ಶಿಕ್ಷಾವಧಿ ಪರಿಗಣನೆ ದಿನಾಂಕದಲ್ಲಿ ದೋಷ

ಸನ್ನಡತೆ ಆಧಾರದಲ್ಲಿ ಜೀವಾವಧಿ ಕೈದಿಗಳ ಬಿಡುಗಡೆಗೆ ಗೃಹ ಇಲಾಖೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2015, 19:57 IST
Last Updated 6 ಅಕ್ಟೋಬರ್ 2015, 19:57 IST
ಶಿಕ್ಷಾವಧಿ ಪರಿಗಣನೆ ದಿನಾಂಕದಲ್ಲಿ ದೋಷ
ಶಿಕ್ಷಾವಧಿ ಪರಿಗಣನೆ ದಿನಾಂಕದಲ್ಲಿ ದೋಷ   

ಬೆಂಗಳೂರು: ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ 2016ರ ಜನವರಿ 26ರಂದು ಬಿಡುಗಡೆ ಮಾಡಲು, ಗೃಹ ಇಲಾಖೆ ಅನುಸರಿಸುತ್ತಿರುವ ಕಟ್‌ ಆಫ್ ದಿನಾಂಕ ನಿಯಮಬಾಹಿರವಾಗಿದೆ ಎಂದು ಬೆಳಗಾವಿ ಕೇಂದ್ರ ಕಾರಾಗೃಹದ ಕೈದಿಗಳು ಆಕ್ಷೇಪಿಸಿದ್ದಾರೆ.

ಈ ಕುರಿತು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಅವರು ಇತ್ತೀಚೆಗೆ ಪತ್ರವೊಂದನ್ನು ಬರೆದಿದ್ದಾರೆ. ‘ನಿಯಮದ ಪ್ರಕಾರ, ಕೈದಿಗಳ ಬಿಡುಗಡೆಗೆ ನಿಗದಿಪಡಿಸಲಾಗುವ ದಿನವಾದ ಜನವರಿ 26ನೇ ತಾರೀಖನ್ನು, 14 ವರ್ಷಗಳ ಶಿಕ್ಷೆಯ ಅವಧಿ ಲೆಕ್ಕ ಹಾಕಲು ಕಟ್‌ ಆಫ್‌ ದಿನಾಂಕವನ್ನಾಗಿ ಪರಿಗಣಿಸಬೇಕು. ಅಲ್ಲದೆ, ಹಿಂದಿನಿಂದಲೂ ಇದೇ ರೀತಿಯ ನೀತಿಯನ್ನು ಅನುಸರಿಸಿಕೊಂಡು ಬರಲಾಗುತ್ತಿದೆ’ ಎಂದು ಕೈದಿಗಳು ಪತ್ರದಲ್ಲಿ ತಿಳಿಸಿದ್ದಾರೆ.

‘ಆದರೆ, ಈಗ ಅದರಲ್ಲಿ ಬದಲಾವಣೆ ಮಾಡಿ 4 ತಿಂಗಳಿಗೂ ಮುಂಚೆಯೇ ಕಟ್‌ ಆಫ್‌ ದಿನಾಂಕವನ್ನು ಪರಿಗಣಿಸಿದರೆ, ಬಿಡುಗಡೆಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಹಲವು ಕೈದಿಗಳಿಗೆ ನಿರಾಶೆಯಾಗಲಿದೆ. ಹಾಗಾಗಿ ಬಿಡುಗಡೆ ದಿನವನ್ನೇ ಕಟ್‌ ಆಫ್‌ ದಿನಾಂಕವಾಗಿ ಪರಿಗಣಿಸಬೇಕು’ ಎಂದು ಮನವಿ ಮಾಡಿದ್ದಾರೆ.

125 ಮಂದಿಗೆ ಅನ್ಯಾಯ: ‘ನಿಯಮದ ಪ್ರಕಾರ, ಕಟ್‌ ಆಫ್‌ ದಿನಾಂಕ ನಿಗದಿಪಡಿಸಿದರೆ ರಾಜ್ಯದ ವಿವಿಧ ಕಾರಾಗೃಹಗಳಲ್ಲಿ 14 ವರ್ಷ ಜೀವಾವಧಿ ಶಿಕ್ಷೆ ಪೂರೈಸಲಿರುವ 525 ಮಂದಿ ಬಿಡುಗಡೆಗೆ ಅರ್ಹರಾಗಲಿದ್ದಾರೆ. ಆದರೆ, ಇಂದು ಸಮಿತಿ ಅನುಸರಿಸಿರುವ ದಿನಾಂಕಕ್ಕೆ ಕೇವಲ 400 ಮಂದಿ ಮಾತ್ರ ಬಿಡುಗಡೆಗೊಳ್ಳಲಿದ್ದು, 125 ಮಂದಿಗೆ ಬಿಡುಗಡೆ ಭಾಗ್ಯ ತಪ್ಪಲಿದೆ’ ಎಂದು ಕೈದಿಗಳು ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾರೆ.

ನವೆಂಬರ್ 15ಕ್ಕೆ ಪಟ್ಟಿ ಸಲ್ಲಿಸಲು ಸೂಚನೆ: ಸನ್ನಡತೆ ಆಧಾರದ ಮೇಲೆ ಕೈದಿಗಳನ್ನು ಬಿಡುಗಡೆ ಮಾಡುವ ಸಂಬಂಧ  ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಸೆಪ್ಟೆಂಬರ್ 23ರಂದು ಸಭೆ ನಡೆದಿತ್ತು. ಸಭೆಯಲ್ಲಿ ಕೈದಿಗಳ ಶಿಕ್ಷೆ ಅವಧಿ ಲೆಕ್ಕ ಹಾಕಲು ಅಕ್ಟೋಬರ್ 1ನೇ ದಿನವನ್ನು ಕಟ್‌ ಆಫ್‌ ದಿನಾಂಕವನ್ನಾಗಿ ಪರಿಗಣಿಸಲು ನಿರ್ಧರಿಸಲಾಗಿತ್ತು. ಅಲ್ಲದೆ, ಕಾರಾಗೃಹಗಳ ಅಧೀಕ್ಷಕರು ನ.15ರೊಳಗೆ ಕೈದಿಗಳ ಪಟ್ಟಿಯನ್ನು ಸಿದ್ದಪಡಿಸಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಸೂಚನೆ ನೀಡಲಾಗಿತ್ತು.

ಪರಿಗಣನೆಯಾಗದ 8 ತಿಂಗಳು:  ಅಕ್ಟೋಬರ್ 1ನೇ ದಿನವನ್ನು ಕಟ್‌ ಆಫ್‌ ದಿನಾಂಕವನ್ನಾಗಿ ತೀರ್ಮಾನಿಸಿರುವುದರಿಂದ, ಬಿಡುಗಡೆಗೆ ನಿಗದಿಯಾಗಿರುವ ದಿನಾಂಕದವರೆಗೆ ಕೈದಿ ಅನುಭವಿಸಿದ ವಾಸ್ತವಿಕ ಸಜೆಯ 3 ತಿಂಗಳು 26 ದಿನಗಳು ಬಂದಿಯ ಶಿಕ್ಷಾವಧಿ ಲೆಕ್ಕಕ್ಕೆ ಪರಿಗಣನೆಯಾಗುವುದಿಲ್ಲ.

ಜತೆಗೆ ಕಾರಾಗೃಹಗಳ ಅಧೀಕ್ಷಕರು ಮತ್ತು ಕಾರಾಗೃಹಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರು ನೀಡುವ ಸಾಮಾನ್ಯ ಮಾಫಿ ಮತ್ತು ವಿಶೇಷ ಮಾಫಿಯ ಒಟ್ಟು 262 ದಿನಗಳು, ಅಂದರೆ 8 ತಿಂಗಳು 22 ದಿನ ಬಂದಿಯ ಶಿಕ್ಷಾವಧಿ ಲೆಕ್ಕಕ್ಕೆ ಸೇರ್ಪಡೆಯಾಗುವುದಿಲ್ಲ.

ಸರ್ಕಾರ ಮೊದಲ ಬಾರಿಗೆ ವಾಸ್ತವಿಕ ಜೀವಾವಧಿ ಶಿಕ್ಷೆ ಅವಧಿ ಮತ್ತು ಮಾಫಿ ದಿನಗಳನ್ನು ಪರಿಗಣಿಸಿ, ಸೆಪ್ಟೆಂಬರ್ 17ರಂದು ರಾಜ್ಯದ ವಿವಿಧ ಕಾರಾಗೃಹಗಳಲ್ಲಿ  ಶಿಕ್ಷೆ ಅನುಭವಿಸುತ್ತಿದ್ದ 253 ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಿತ್ತು. ಇದರ ಬೆನ್ನಲ್ಲೇ, 2016ರ ಜನವರಿ 26ರಂದು ಜೀವಾ ವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿ ಗಳನ್ನು  ಬಿಡು ಗಡೆ ಮಾಡುವ ಸಂಬಂಧ ಗೃಹ ಸಚಿವರು ಆದೇಶ ಹೊರಡಿಸಿದ್ದರು.

*
ತಪ್ಪು ಸರಿಪಡಿಸಿಕೊಳ್ಳಿ
‘ಸೆಪ್ಟೆಂಬರ್ 17ರಂದು ಕೈದಿಗಳನ್ನು ಸಿದ್ಧಪಡಿಸುವಾಗ ಕೆಲ ತಾಂತ್ರಿಕ ದೋಷಗಳಿಂದ ಆದ ಲೋಪವನ್ನೇ ಅಧಿಕಾರಿಗಳು ಮತ್ತೆ ಮುಂದುವರೆಸುತ್ತಿರುವುದು ಸರಿ ಯಲ್ಲ. ಕಾನೂನು ಪ್ರಕಾರ, ಶಿಕ್ಷಾವಧಿ ಲೆಕ್ಕ ಹಾಕುವ ಕಟ್‌ ಆಫ್ ದಿನಾಂಕ ಮತ್ತು ಬಿಡುಗಡೆ ದಿನಾಂಕ ಒಂದೇ ಇರಬೇಕು’ ಎಂದು ಹಿರಿಯ ವಕೀಲ ಸಿ.ಎಚ್. ಹನುಮಂತರಾಯ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಒಂದು ವೇಳೆ, ಯಾರಾದರೂ ಈ ಕುರಿತು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರೆ, ಬಿಡುಗಡೆಯ ಆದೇಶವೇ ಅನೂರ್ಜಿತಗೊಳ್ಳುವ ಸಾಧ್ಯತೆ ಇರುತ್ತದೆ.  ಜತೆಗೆ, ಬಿಡುಗಡೆ ಬಯಸುತ್ತಿರುವವರಿಗೂ ನಿರಾಶೆಯಾಗಲಿದೆ’ ಎಂದರು.

*
ಕೈದಿಗಳ ಶಿಕ್ಷಾವಧಿ ಪರಿಗಣನೆಯ ಕಟ್‌ ಆಫ್‌ ದಿನಾಂಕ ಅಂತಿಮವಲ್ಲ. ಸಾಧ್ಯವಾದರೆ ಪರಿಶೀಲಿಸಲಾಗುವುದು
-ಕೆ.ವಿ.ಗಗನ್ ದೀಪ್,
ಗೃಹ  ಇಲಾಖೆಯ ಪ್ರಧಾನ ಕಾರ್ಯದರ್ಶಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT