ADVERTISEMENT

ಶ್ರೀರಾಮಸೇನೆಯಿಂದ ಶಾಲೆ ಮೇಲೆ ದಾಳಿ

ಅರೇಬಿಕ್‌ ಭಾಷೆ ಕಲಿಸಲು ವಿರೋಧ

​ಪ್ರಜಾವಾಣಿ ವಾರ್ತೆ
Published 30 ಜುಲೈ 2016, 11:12 IST
Last Updated 30 ಜುಲೈ 2016, 11:12 IST
ಶ್ರೀರಾಮಸೇನೆಯಿಂದ ಶಾಲೆ ಮೇಲೆ ದಾಳಿ
ಶ್ರೀರಾಮಸೇನೆಯಿಂದ ಶಾಲೆ ಮೇಲೆ ದಾಳಿ   

ಮಂಗಳೂರು: ಅರೇಬಿಕ್‌ ಭಾಷೆಯನ್ನು ಮಕ್ಕಳಿಗೆ ಕಲಿಸುತ್ತಿರುವುದನ್ನು ವಿರೋಧಿಸಿ ಶ್ರೀರಾಮಸೇನೆಯ ಕಾರ್ಯಕರ್ತರು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಪಡು ಬೊಂಡಂತಿಲ ಸೇಂಟ್‌ ಥಾಮಸ್‌ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮೇಲೆ ಶನಿವಾರ ದಾಳಿ ಮಾಡಿ ದಾಂದಲೆ ನಡೆಸಿದ್ದಾರೆ.

ಬೆಳಿಗ್ಗೆ ಹತ್ತು ಗಂಟೆಗೆ ತರಗತಿ ಆರಂಭವಾಗುವ ಮುನ್ನ ಮಕ್ಕಳಿಗೆ ಪಠ್ಯೇತರ ಚಟುವಟಿಕೆಯ ಭಾಗವಾಗಿ ಅರೇಬಿಕ್‌ ಭಾಷೆ ಕಲಿಸಲಾಗುತ್ತಿತ್ತು. ಈ ಸಮಯದಲ್ಲಿ ಶ್ರೀರಾಮಸೇನೆಯ 30ಕ್ಕೂ ಹೆಚ್ಚು ಕಾರ್ಯಕರ್ತರು ಶಾಲಾ ಕೊಠಡಿಗಳ ಒಳಕ್ಕೆ ನುಗ್ಗಿದ್ದಾರೆ.

ಏಕಾಏಕಿ ಮಕ್ಕಳಿಂದ ಪುಸ್ತಕಗಳನ್ನು ಕಿತ್ತುಕೊಂಡು, ಛಾಯಾಚಿತ್ರ ತೆಗೆಯುವುದು ಮತ್ತು ವಿಡಿಯೊ ಚಿತ್ರೀಕರಣ ಮಾಡಲಾರಂಭಿಸಿದ್ದಾರೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಶಿಕ್ಷಕರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಇದರಿಂದ ಹೆದರಿದ ಮಕ್ಕಳು ಕೊಠಡಿಯಿಂದ ಹೊರಕ್ಕೆ ಓಡಿ ಹೋಗಿದ್ದಾರೆ ಎಂದು ಶಾಲೆಯ ಸಿಬ್ಬಂದಿ ತಿಳಿಸಿದ್ದಾರೆ.

ADVERTISEMENT

‘ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಯ ಭಾಗವಾಗಿ ಕಳೆದ ವರ್ಷ ಜರ್ಮನ್ ಮತ್ತು ಫ್ರೆಂಚ್ ಭಾಷೆ ಕಲಿಸಲಾಗುತ್ತಿತ್ತು. ಈ ವರ್ಷ ಅರೇಬಿಕ್ ಭಾಷೆ ಹಾಗೂ ಕರಾಟೆ ತರಗತಿಗಳನ್ನು ನಡೆಸಲಾಗುತ್ತಿದೆ. ಉರ್ದು ಮತ್ತು ಅರೇಬಿಕ್‌ ಕಲಿಸಲಾಗುತ್ತಿದೆ ಎಂದು ಶ್ರೀರಾಮಸೇನೆ ಕಾರ್ಯಕರ್ತರು ಶನಿವಾರ ಗಲಾಟೆ ಮಾಡಿದ್ದಾರೆ. ಈ ಭಾಷೆಗಳನ್ನು ಕಲಿಸದಂತೆ ಒತ್ತಡ ಹೇರಿದ್ದಾರೆ. ಘಟನೆಯ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಮೆಲ್ವಿನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.