ADVERTISEMENT

ಸಂಪುಟದಲ್ಲಿ ಮೂಡದ ಒಮ್ಮತ

ಕರ್ನಾಟಕ ಲೋಕಸೇವಾ ಆಯೋಗದ ಕೆಎಎಸ್‌ ಆಯ್ಕೆ ಪಟ್ಟಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2014, 19:30 IST
Last Updated 23 ಜುಲೈ 2014, 19:30 IST

ಬೆಂಗಳೂರು:ವಿವಾದಕ್ಕೆ ಒಳಗಾಗಿರುವ ಪ್ರೊಬೇಷನರಿ ಅಧಿಕಾರಿಗಳ (ಕೆಎಎಸ್‌) ನೇಮಕ ಸಂಬಂಧ ಅಂತಿಮ ತೀರ್ಮಾನ ತೆಗೆದುಕೊಳ್ಳುವಲ್ಲಿ ಬುಧವಾರದ ಸಚಿವ ಸಂಪುಟ ಸಭೆಯೂ ವಿಫಲವಾಗಿದೆ. ಈ ಹಿಂದೆ ಹಲವು ಬಾರಿ ಈ ವಿಷಯ ಚರ್ಚೆಗೆ ಬಂದಿದ್ದರೂ ಅಕ್ರಮದ ಕಾರಣ­ದಿಂದ ನೇಮಕಾತಿ ಪಟ್ಟಿಯನ್ನು ರದ್ದುಪಡಿಸಬೇಕೇ ಆಥವಾ ಆ ಪಟ್ಟಿಗೇ ಒಪ್ಪಿಗೆ ನೀಡಬೇಕೇ ಎನ್ನುವ ವಿಚಾರ­ದಲ್ಲಿ ಸೂಕ್ತ ತೀರ್ಮಾನಕ್ಕೆ ಬರಲು ಸಂಪುಟ ಸಭೆಗೆ ಸಾಧ್ಯವಾಗಿರಲಿಲ್ಲ.

ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ಅಕ್ರಮ ನಡೆ­ದಿದೆ ಎಂದು ಸಿಐಡಿ ವರದಿ ನೀಡಿದೆ. ಅದನ್ನು ಆಧಾರವಾಗಿ ಇಟ್ಟುಕೊಂಡು ಕೆಲವರು ನೇಮಕಾತಿ ಪಟ್ಟಿಯನ್ನು ರದ್ದು­ಪಡಿಸಲು ಪಟ್ಟುಹಿಡಿದಿದ್ದಾರೆ. ಒತ್ತಡಕ್ಕೆ ಸಿಲುಕಿರುವ ಮುಖ್ಯಮಂತ್ರಿ ಸೂಕ್ತ ತೀರ್ಮಾನಕ್ಕೆ ಬರಲು ಹಿಂದೇಟು ಹಾಕು­ತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಸಮಗ್ರ ಚರ್ಚೆ ನಡೆಸ­ಬೇಕಾ­ಗಿರುವ ಕಾರಣ ಕೆಪಿಎಸ್‌ಸಿ ವಿಚಾರ­ವನ್ನು ಮುಂದೂಡಲಾಯಿತು ಎನ್ನಲಾ­ಗಿದೆ. ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್‌, ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಅವರು ನೇಮಕಾತಿ ಪಟ್ಟಿ ರದ್ದತಿಗೆ ವಿರೋಧ ವ್ಯಕ್ತಪಡಿಸಿ­ದರು ಎಂದು ಗೊತ್ತಾಗಿದೆ.

ಗುತ್ತಿಗೆ ಅವಧಿ ವಿಸ್ತರಣೆ: ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮಂಜೂರು ಮಾಡುವ ಜಮೀನಿನ ಗುತ್ತಿಗೆ ಅವಧಿಯನ್ನು 30 ವರ್ಷದಿಂದ 99 ವರ್ಷಕ್ಕೆ ಹೆಚ್ಚಿಸಲು ತೀರ್ಮಾ­ನಿಸಲಾಗಿದೆ. ಕೆಐಎಡಿಬಿ ಈ ಹಿಂದೆ ಉದ್ಯಮಿಗಳಿಗೆ ಜಮೀನನ್ನು ಮಾರಾಟ ಮಾಡುತ್ತಿತ್ತು. ಈಗ ಅದನ್ನು ನಿಲ್ಲಿಸಿದ್ದು, ಅದರ ಬದಲು 30 ವರ್ಷಕ್ಕೆ ಗುತ್ತಿಗೆ ನೀಡುವ ವ್ಯವಸ್ಥೆ ಜಾರಿಗೆ ತಂದಿತ್ತು. ಇದರಿಂದ ಹಣಕಾಸು ಸಂಸ್ಥೆಗಳು ಸಾಲ ನೀಡುತ್ತಿಲ್ಲ ಎನ್ನುವ ಕಾರಣಕ್ಕೆ ಗುತ್ತಿಗೆ ಅವಧಿಯನ್ನು 99 ವರ್ಷಕ್ಕೆ ವಿಸ್ತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಿಡಿಎಸ್‌ಗೆ ಸಕ್ಕರೆ ಖರೀದಿ: ಮಂಡ್ಯದಲ್ಲಿನ ಸರ್ಕಾರದ ಮೈಷುಗರ್‌ ಸಕ್ಕರೆ ಕಾರ್ಖಾನೆಯಿಂದ 29 ರೂಪಾಯಿಗೆ ಒಂದು ಕೆಜಿಯಂತೆ ಸಕ್ಕರೆ ಖರೀದಿಸಲು ಸಂಪುಟ ಸಭೆ ತೀರ್ಮಾನಿಸಿದೆ. ಈ ಸಕ್ಕರೆಯನ್ನು ಸಾರ್ವಜನಿಕ ವಿತ­ರಣಾ ವ್ಯವಸ್ಥೆ (ಪಿಡಿಎಸ್‌) ಮೂಲಕ ಪಡಿತರ ಚೀಟಿದಾರರಿಗೆ ನೀಡಲಾಗುತ್ತದೆ.

ಇತರ ತೀರ್ಮಾನಗಳು
* ಬಿ’ ಗುಂಪಿನ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿ­ಸುವ ಮತ್ತು ‘ಸಿ’ ಮತ್ತು ‘ಡಿ’ ಗುಂಪಿನ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾ­ರಣೆಗೆ ಆದೇಶಿಸುವ ಮತ್ತು ಅವರನ್ನು ಸೇವೆಯಿಂದ ಅಮಾನತು ಮಾಡುವ ಅಧಿಕಾರವನ್ನು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹ­ಣಾಧಿಕಾ­ರಿಗಳಿಗೆ ನೀಡಲು ತೀರ್ಮಾನ.

* ತುಮಕೂರು ಜಿಲ್ಲೆಯ ಕೋಡಿ­ಮುದ್ದನಹಳ್ಳಿಯಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗಾಗಿ  ಮೊರಾರ್ಜಿ ದೇಸಾಯಿ ಪಿಯು ವಸತಿ ಕಾಲೇಜು ನಿರ್ಮಾಣಕ್ಕೆ ₨ 8.67 ಕೋಟಿ ಮಂಜೂರು.

* ಕನಕಪುರ ತಾಲ್ಲೂಕಿನ ತುಂಗಾಣಿ ರಾಮಪುರ ಏತ ನೀರಾವರಿ ಯೋಜನೆಯಿಂದ ಮರಳವಾಡಿ ಕೆರೆಗೆ ನೀರು ಸರಬರಾಜು ಮಾಡುವ ₨6 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ.

* ಮೈಸೂರಿನಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪಿಸುವ ₨14.50 ಕೋಟಿ ವೆಚ್ಚದ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ.

* ₨ 400 ಕೋಟಿ ಸಾಲ ಪಡೆ­ಯಲು ಕಾವೇರಿ ನೀರಾವರಿ ನಿಗಮಕ್ಕೆ ಸರ್ಕಾರದ ಖಾತರಿ ನೀಡಲು ಸಮ್ಮತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.