ADVERTISEMENT

ಸಚಿವ ಸಂಪುಟದ ಒಕ್ಕೊರಲ ಬೆಂಬಲ

ಸ್ವತಂತ್ರ ಲಿಂಗಾಯತ ಧರ್ಮ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2017, 20:24 IST
Last Updated 26 ಜುಲೈ 2017, 20:24 IST
ಸಚಿವ ಸಂಪುಟದ ಒಕ್ಕೊರಲ ಬೆಂಬಲ
ಸಚಿವ ಸಂಪುಟದ ಒಕ್ಕೊರಲ ಬೆಂಬಲ   

ಬೆಂಗಳೂರು: ಸ್ವತಂತ್ರ ಲಿಂಗಾಯತ ಧರ್ಮ ಬೇಡಿಕೆಗೆ ಸಚಿವ ಸಂಪುಟ ಒಕ್ಕೊರಲ ಬೆಂಬಲ ವ್ಯಕ್ತಪಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬುಧವಾರ ನಡೆದ  ಸಂಪುಟ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಯಿತು.

‘ಸ್ವತಂತ್ರ ಧರ್ಮದ ವಿಚಾರವಾಗಿ ಸರ್ಕಾರ ತೆಗೆದುಕೊಂಡಿರುವ ನಿಲುವು ಸರಿಯಾಗಿದೆ. ಸೂಕ್ಷ್ಮವಾಗಿ ಇದನ್ನು ನಿಭಾಯಿಸುವುದು ಒಳ್ಳೆಯದು' ಎಂದು ಹಿರಿಯ ಸಚಿವರು ಸಲಹೆ ನೀಡಿದರು ಎನ್ನಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಈ ವಿಷಯವನ್ನು ನಾವಾಗಿ ಪ್ರಸ್ತಾಪಿಸಿದ್ದಲ್ಲ. ಅಖಿಲ ಭಾರತ ವೀರಶೈವ ಮಹಾಸಭಾ ಮನವಿ ಸಲ್ಲಿಸಿತ್ತು. ಒಟ್ಟಾಗಿ ಬಂದರೆ ಪರಿಶೀಲಿಸುವುದಾಗಿ ಭರವಸೆ ನೀಡಿದ್ದೆ. ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಅದಕ್ಕೆ ಅವಕಾಶ ಕೊಡೋಣ’ ಎಂದು ಹೇಳಿದರು.

‘ಹಾಗಂತ ಸರ್ಕಾರವೇ ಮುಂದೆ ನಿಂತು ಇದನ್ನು ಮಾಡಿಸುತ್ತಿದೆ ಎಂಬ ಅಭಿಪ್ರಾಯ ಬರುವಂತೆ ಸಚಿವರು ನಡೆದುಕೊಳ್ಳಬಾರದು. ಸಚಿವರು ವೈಯಕ್ತಿಕ ನೆಲೆಯಲ್ಲಿ ಬೆಂಬಲ ನೀಡಿದರೆ, ಜನಜಾಗೃತಿ ಮಾಡಿದರೆ ತೊಂದರೆಯಿಲ್ಲ. ವೀರಶೈವರು ಮತ್ತು ಲಿಂಗಾಯತರು ಒಟ್ಟಾಗಿ ಬಂದು ಪ್ರತ್ಯೇಕ ಧರ್ಮದ ಮಾನ್ಯತೆ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದರೆ ಸರ್ಕಾರ ಆ ಕೆಲಸ ಮಾಡುತ್ತದೆ. ಇದು ಸರ್ಕಾರದ ನಿಲುವು’ ಎಂದು ಸ್ಪಷ್ಟಪಡಿಸಿದರು ಎನ್ನಲಾಗಿದೆ.

‘ಸಂವಿಧಾನ ಬಾಹಿರ ಕ್ರಮವಲ್ಲ’
‘ಐವರು ಸಚಿವರು ಸ್ವತಂತ್ರ ಲಿಂಗಾಯತ ಧರ್ಮದ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಹೊರಟಿರುವುದು ವೈಯಕ್ತಿಕ ನೆಲೆಯಲ್ಲೇ ವಿನಾ, ಮುಖ್ಯಮಂತ್ರಿ ಅವರಾಗಲೀ ಅಥವಾ ಸಂಪುಟವಾಗಲೀ ಅವರಿಗೆ ಸೂಚಿಸಿಲ್ಲ’ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ನುಡಿದರು.

‘ವೈಯಕ್ತಿಕವಾಗಿ ಅಭಿಪ್ರಾಯ ಸಂಗ್ರಹಿಸುವ ಸ್ವಾತಂತ್ರ್ಯ ಸಚಿವರಿಗಿದೆ’ ಎಂದೂ ಅವರು ಪ್ರತಿಪಾದಿಸಿದರು. ‘ಅಭಿಪ್ರಾಯ ಸಂಗ್ರಹಿಸುವುದು ಹೇಗೆ ಸಂವಿಧಾನಬಾಹಿರ ಕೆಲಸವಾಗಲಿದೆ.  800 ವರ್ಷಗಳ ಹಿಂದೆ ಬಸವಣ್ಣ ಪ್ರತಿಪಾದಿಸಿದ ವಿಚಾರಗಳೇ ನಮ್ಮ ಸಂವಿಧಾನದ ಆಶಯವೂ ಆಗಿದೆ’ ಎಂದರು.
*
ಶಿವಕುಮಾರ್‌, ಆಂಜನೇಯ ಬೆಂಬಲ
ಬೆಂಗಳೂರು: ‘ಸಚಿವ ಸ್ಥಾನದಲ್ಲಿದ್ದುಕೊಂಡು ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಹೋರಾಡುವುದು ಸರಿಯೇ’ ಎಂಬ ಪ್ರಶ್ನೆ ಎದ್ದಿರುವಾಗಲೇ ಒಕ್ಕಲಿಗ ಮತ್ತು ದಲಿತ ಸಮುದಾಯದ ಸಚಿವರಿಬ್ಬರು ಈ ಬೇಡಿಕೆಗೆ ಬೆಂಬಲ ಸೂಚಿಸಿದ್ದಾರೆ. ಸಚಿವರಾದ ಡಿ.ಕೆ. ಶಿವಕುಮಾರ್‌ ಮತ್ತು ಎಚ್‌. ಆಂಜನೇಯ ಅವರು ‘ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ ತಪ್ಪಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT